ADVERTISEMENT

15 ಸಂಸ್ಥೆಗಳ ನೋಂದಣಿ ರದ್ದು

ಜಿಲ್ಲೆಯಲ್ಲಿ 20 ಮಕ್ಕಳ ಪಾಲನಾ ಸಂಸ್ಥೆ; ಪಾಲನೆಯಾಗದ ಬಾಲನ್ಯಾಯ ಕಾಯ್ದೆ ಮಾನದಂಡ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2024, 6:35 IST
Last Updated 14 ನವೆಂಬರ್ 2024, 6:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತುಮಕೂರು: ಸರ್ಕಾರದ ಮಾರ್ಗಸೂಚಿ ಪಾಲಿಸದ ಜಿಲ್ಲೆಯ 15 ಮಕ್ಕಳ ಪಾಲನಾ ಸಂಸ್ಥೆಗಳ ನೋಂದಣಿ ರದ್ದತಿಗೆ ಮಕ್ಕಳ ರಕ್ಷಣಾ ಘಟಕ ಮುಂದಾಗಿದೆ.

ಬೀದಿ ಬದಿ ವ್ಯಾಪಾರ ನಡೆಸುವವರು, ಚಿಂದಿ ಆಯುವವರು, ಭಿಕ್ಷಾಟನೆಯಲ್ಲಿ ತೊಡಗಿಸಿಕೊಂಡವರು, ನಿರ್ಗತಿಕರು, ಪೋಷಕರಿಂದ ದೂರವಾದ ಮಕ್ಕಳ ಆರೈಕೆ ಮತ್ತು ರಕ್ಷಣೆಗಾಗಿ ಜಿಲ್ಲೆಯಲ್ಲಿ 20 ಮಕ್ಕಳ ಪಾಲನಾ ಸಂಸ್ಥೆಗಳನ್ನು ಪ್ರಾರಂಭಿಸಲಾಗಿತ್ತು. ಇದರಲ್ಲಿ ಸರ್ಕಾರದ 2 ಸಂಸ್ಥೆಗಳು ಹೊರೆತುಪಡಿಸಿದರೆ ಉಳಿದ ಎಲ್ಲವನ್ನು ಸ್ವಯಂ ಸೇವಾ ಸಂಸ್ಥೆಗಳು (ಎನ್‌ಜಿಒ) ನಡೆಸುತ್ತಿದ್ದವು.

18ರ ಪೈಕಿ 3 ಮಾತ್ರ ನಿಯಮಾನುಸಾರ ನಡೆಯುತ್ತಿವೆ. ಇಲ್ಲಿ ಮಕ್ಕಳಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗುತ್ತಿದೆ. ಉಳಿದ 15 ಸಂಸ್ಥೆಗಳು ಬಾಲ ನ್ಯಾಯ ಕಾಯ್ದೆ–2006, ಬಾಲನ್ಯಾಯ ಕಾಯ್ದೆ (ಮಕ್ಕಳ ಪೋಷಣೆ ಮತ್ತು ರಕ್ಷಣೆ)–2010ರ ಮಾನದಂಡ ಪಾಲಿಸುತ್ತಿಲ್ಲ. ಇದರಿಂದಾಗಿ ಸಂಸ್ಥೆಗಳ ನೋಂದಣಿ ರದ್ದು ಪಡಿಸಲಾಗುತ್ತಿದೆ.

ADVERTISEMENT

ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಸಂಸ್ಥೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಾಸ್ತವ ಪರಿಸ್ಥಿತಿ ಕುರಿತು ಸರ್ಕಾರಕ್ಕೆ ವರದಿ ನೀಡಿದ್ದಾರೆ. 5 ಸಂಸ್ಥೆಗಳ ನೋಂದಣಿ ರದ್ದತಿ ಕೋರಿ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದಾರೆ. ಉಳಿದ 10 ಸಂಸ್ಥೆಗಳ ನೋಂದಣಿ ರದ್ದತಿಗೂ ಕ್ರಮ ವಹಿಸಿದ್ದಾರೆ.

ವಾಕ್‌ ಮತ್ತು ಶ್ರವಣ ದೋಷ, ದೃಷ್ಟಿದೋಷ, ಅಂಗವಿಕಲರು, ತಂದೆ, ತಾಯಿ ಇಲ್ಲದ ಮಕ್ಕಳಿಗೂ ಪಾಲನಾ ಸಂಸ್ಥೆಗಳಲ್ಲಿ ಆಶ್ರಯ ಕಲ್ಪಿಸಲಾಗುತ್ತಿದೆ. ಮಕ್ಕಳಿಗೆ ಊಟ, ವಸತಿ, ಬಟ್ಟೆಯ ಜತೆಗೆ ಶಿಕ್ಷಣ ನೀಡಲಾಗುತ್ತದೆ. ಅವರು ಉತ್ತಮ ಹಾದಿಯಲ್ಲಿ ಸಾಗಲು ಅಗತ್ಯ ಸಲಹೆ, ಸಮಾಲೋಚನೆ, ಮಾರ್ಗದರ್ಶನ ಮಾಡಲಾಗುತ್ತದೆ. ಬೆರಳೆಣಿಕೆಯಷ್ಟು ಸಂಸ್ಥೆಗಳಲ್ಲಿ ಮಾತ್ರ ಮಕ್ಕಳಿಗೆ ಅಗತ್ಯ ಸೌಲಭ್ಯ ಸಿಗುತ್ತಿದೆ. ಹಲವು ಸಂಸ್ಥೆಗಳು ಸರಿಯಾದ ದಾರಿಯಲ್ಲಿ ಸಾಗುತ್ತಿಲ್ಲ ಎನ್ನಲಾಗಿದೆ.

ಸುಸಜ್ಜಿತ ಕಟ್ಟಡ, ಮೂಲಭೂತ ಸೌಲಭ್ಯ ಇರುವ, 50 ಮಕ್ಕಳಿಗಿಂತ ಹೆಚ್ಚು ಮಕ್ಕಳು ದಾಖಲಾತಿ ಹೊಂದಿರುವ, ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರು, ಸಿಬ್ಬಂದಿ ನಿಯೋಜಿಸಿಕೊಂಡ ಸಂಸ್ಥೆಗಳು ಬಾಲನ್ಯಾಯ ಕಾಯ್ದೆಯಡಿ ಮಕ್ಕಳ ರಕ್ಷಣಾ ಘಟಕದಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಇದರ ಅನ್ವಯ ಜಿಲ್ಲೆಯಾದ್ಯಂತ 18 ಖಾಸಗಿ ಸಂಸ್ಥೆಗಳು ನೋಂದಣಿಯಾಗಿದ್ದವು.

ಅಧಿಕಾರಿಗಳ ಪರಿಶೀಲನೆ ವೇಳೆ, ನೋಂದಣಿ ನವೀಕರಣ ಸಮಯದಲ್ಲಿ ಈ ಸಂಸ್ಥೆಗಳು ಬಾಲನ್ಯಾಯ ಕಾಯ್ದೆಯ ಮಾನದಂಡ ಪಾಲಿಸದಿರುವುದು ಗೊತ್ತಾಗಿದೆ. ಉತ್ತರ ಕರ್ನಾಟಕದಿಂದ ಬದುಕು ಕಟ್ಟಿಕೊಳ್ಳಲು ಜಿಲ್ಲೆಗೆ ವಲಸೆ ಬಂದ ಕಾರ್ಮಿಕರ ಮಕ್ಕಳನ್ನು ಕರೆತಂದು ನಿರ್ಗತಿಕರು ಎಂದು ದಾಖಲಿಸಿ ಸರ್ಕಾರದ ಅನುದಾನ ಪಡೆಯುತ್ತಿದ್ದರು. ಇಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಸಂಸ್ಥೆಗಳ ನೋಂದಣಿ ರದ್ದು ಮಾಡಲು ಮುಂದಾಗಿದ್ದಾರೆ.

ನೋಂದಣಿ ಕಡ್ಡಾಯ

ಮಕ್ಕಳ ಪಾಲನಾ ಸಂಸ್ಥೆಗಳು ಸರ್ಕಾರದ ಅನುದಾನ ಪಡೆಯಲು ಕಡ್ಡಾಯವಾಗಿ ಬಾಲನ್ಯಾಯ ಕಾಯ್ದೆಯಡಿ ನೋಂದಾಯಿಸಿಕೊಳ್ಳಬೇಕು. ನೋಂದಣಿಯಾದ ನಂತರ ಸರ್ಕಾರದ ಮಾರ್ಗಸೂಚಿ ಪಾಲಿಸಬೇಕು. ಇಲ್ಲದಿದ್ದರೆ ಸಂಸ್ಥೆಗಳ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ. ಮಕ್ಕಳ ರಕ್ಷಣಾ ಘಟಕದ ಸಮಿತಿಯಿಂದ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ನೀಡಲಾಗಿದೆ. ದಿನೇಶ್‌ ಮಕ್ಕಳ ರಕ್ಷಣಾಧಿಕಾರಿ ಮಕ್ಕಳ ರಕ್ಷಣಾ ಘಟಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.