ADVERTISEMENT

ಪಾವಗಡ | ಪಡಿತರ ಚೀಟಿ ರದ್ದು: ದಂಗಾದ ಜನ

ವಿವಿಧ ಸೌಲಭ್ಯಗಳಿಂದ ವಂಚಿತ: ಸರ್ಕಾರಿ ಇಲಾಖೆಗೆ ಎಡತಾಕುತ್ತಿರುವ ಸಾರ್ವಜನಿಕರು

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2024, 14:22 IST
Last Updated 20 ನವೆಂಬರ್ 2024, 14:22 IST
<div class="paragraphs"><p>&nbsp;ಪಡಿತರ ಚೀಟಿ (ಸಾಂದರ್ಭಿಕ ಚಿತ್ರ)</p></div>

 ಪಡಿತರ ಚೀಟಿ (ಸಾಂದರ್ಭಿಕ ಚಿತ್ರ)

   

ಪಾವಗಡ: ನೂರಾರು ಮಂದಿ ಅರ್ಹರ ಪಡಿತರ ಚೀಟಿ ಅಮಾನತ್ತಾಗಿರುವುದರಿಂದ ತಾಲ್ಲೂಕಿನ ಬಡ ಜನತೆ ಸರ್ಕಾರದ ಸವಲತ್ತುಗಳಿಂದ ವಂಚಿತರಾಗಿದ್ದಾರೆ.

ಕಳೆದ ತಿಂಗಳಿಂದ ಪಡಿತರ ಪಡೆಯಲು ಹೋದವರಿಗೆ ಪಡಿತರ ಚೀಟಿ ಏಕಾಏಕಿ ರದ್ದಾಗಿರುವುದನ್ನು ಕೇಳಿ ದಂಗಾಗುತ್ತಿದ್ದಾರೆ. ‘ಗುಡಿಸಲಲ್ಲಿ ಜೀವನ ನಡೆಸುತ್ತಿರುವ ನಮ್ಮ ಪಡಿತರ ಚೀಟಿ ಹೇಗೆ ರದ್ದಾಯಿತು’ ಎಂದು ಆಹಾರ ಇಲಾಖೆ ಕಚೇರಿಗೆ ಎಡತಾಕುತ್ತಿದ್ದಾರೆ.

ADVERTISEMENT

‘ಕಳೆದ ತಿಂಗಳು ಅಕ್ಕಿ ಕೊಟ್ಟಿದ್ದೀರ ಇದೀಗ ಕಾರ್ಡ್ ರದ್ದಾಗಿದೆ ಎಂದರೆ ನಾವು ಏನು ತಿನ್ನಬೇಕು? ಯಾರನ್ನು ಕೇಳಬೇಕು?’ ಎಂದು ಪಡಿತರ ವಿತರಣಾ ಕೇಂದ್ರಗಳಲ್ಲಿ ವಿತರಕರ ಮೇಲೆ ಪಡಿತರ ಚೀಟಿ ರದ್ದಾಗಿರುವ ಕುಟುಂಬ ಸದಸ್ಯರು ಜಗಳ ಮಾಡುವ ದೃಶ್ಯ ಸಾಮಾನ್ಯವಾಗಿದೆ.

ಪಡಿತರ ಚೀಟಿಯ ಸಹಾಯದಿಂದ ಬೆಂಗಳೂರು, ತುಮಕೂರು ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಉಚಿತ, ರಿಯಾಯಿತಿ ಧರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಡ, ಮದ್ಯಮ ವರ್ಗದ ಜನತೆಗೆ ಪಡಿತರ ಚೀಟಿ ಅಮನಾತ್ತಾಗಿರುವುದು ಇನ್ನಿಲ್ಲದ ಸಮಸ್ಯೆಯನ್ನುಂಟು ಮಾಡಿದೆ.

ಕಿಡ್ನಿ, ಹೃದಯ ಸಂಬಂಧಿ ರೋಗಗಳು ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಬಿಪಿಎಲ್ ಪಡಿತರ ಚೀಟಿ ಶ್ರೀರಕ್ಷೆಯಂತಿತ್ತು. ಏಕಾಏಕಿ ಪಡಿತರ ಚೀಟಿ ರದ್ದಾಗಿರುವುದರಿಂದ ಚಿಕಿತ್ಸೆಗಾಗಿ ಸಾಲ ಮಾಡುವ ಅನಿವಾರ್ಯತೆಯಲ್ಲಿ ಜನರಿದ್ದಾರೆ.

ಆಹಾರ ಇಲಾಖೆಯಿಂದ ಅನರ್ಹರ ಪಟ್ಟಿ ಕಳುಹಿಸಿ ಪಟ್ಟಿಯಲ್ಲಿರುವ ಕುಟುಂಬಗಳ ಬಿಪಿಎಲ್ ಪಡಿತರ ಚೀಟಿಯನ್ನು ಎಪಿಎಲ್ ಚೀಟಿಗೆ ಪರಿವರ್ತಿಸುವಂತೆ ಸೂಚಿಸಲಾಗಿದೆ.

ತಾಲ್ಲೂಕಿನ ಸುಮಾರು 200 ಪಡಿತರ ಚೀಟಿ ಹೊಂದಿರುವವರು ಆದಾಯ ತೆರಿಗೆ ಇಲಾಖೆಗೆ ಆದಾಯ ತೆರಿಗೆ ಮಾಹಿತಿ ನೀಡಿದ್ದಾರೆ. ತೆರಿಗೆ ಪಾವತಿಸದಿದ್ದರೂ ರಿಟರ್ನ್ಸ್ ಅರ್ಜಿ ಸಲ್ಲಿಸಿದ್ದರೂ ಅಂತಹವರನ್ನು ಅನರ್ಹರ ಪಟ್ಟಿಗೆ ಸೇರಿಸಲಾಗಿದೆ.

ತಾಲ್ಲೂಕಿನ ಸುಮಾರು 600 ಮಂದಿಯ ಪಡಿತರ ಚೀಟಿಗಳು ಆದಾಯ ಪ್ರಮಾಣ ಪತ್ರದ ಆಧಾರದಲ್ಲಿ ಅಮಾನತ್ತು ಮಾಡಲಾಗಿದೆ. ಆದಾಯ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದಾಗ ಕಂಪ್ಯೂಟರ್‌ನಲ್ಲಿ ಆದಾಯ ತಪ್ಪಾಗಿ ನಮೂದಿಸಿದ್ದು ಅಂತಹವರ ಪಡಿತರ ಚೀಟಿ ಅಮಾನತು ಮಾಡಲಾಗಿದೆ. ಆದಾಯ ಪ್ರಮಾಣ ಪತ್ರ ಪಡೆದ ಕುಟುಂಬ ಸದಸ್ಯರ ಆದಾಯ ಒಟ್ಟುಗೂಡಿಸಿ ನಿಗದಿತ ಆದಾಯಕ್ಕಿಂತ ಹೆಚ್ಚಿದೆ ಎಂದು ಅನರ್ಹರ ಪಟ್ಟಿಗೆ ಸೇರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.