ADVERTISEMENT

ತುಮಕೂರು: ತೆವಳುತ್ತಿದೆ ಕ್ಯಾನ್ಸರ್‌, ತಾಯಿ–ಮಕ್ಕಳ ಆಸ್ಪತ್ರೆ

₹100 ಕೋಟಿ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣ, ಆಮೆಗತಿಯಲ್ಲಿ ಸಾಗಿದ ಕೆಲಸ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2024, 5:40 IST
Last Updated 20 ನವೆಂಬರ್ 2024, 5:40 IST
ತುಮಕೂರು ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ನಿರ್ಮಾಣದ ಹಂತದಲ್ಲಿರುವ ಕ್ಯಾನ್ಸರ್‌ ಆಸ್ಪತ್ರೆ
ತುಮಕೂರು ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ನಿರ್ಮಾಣದ ಹಂತದಲ್ಲಿರುವ ಕ್ಯಾನ್ಸರ್‌ ಆಸ್ಪತ್ರೆ    

ತುಮಕೂರು: ಚಿಕಿತ್ಸೆಗಾಗಿ ಬೆಂಗಳೂರಿಗೆ ಅಲೆಯುವುದನ್ನು ತಪ್ಪಿಸಲು, ಜಿಲ್ಲೆ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಒದಗಿಸುವ ಉದ್ದೇಶದಿಂದ ಆರಂಭಿಸಿರುವ ಕ್ಯಾನ್ಸರ್‌ ಆಸ್ಪತ್ರೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣ ಕಾಮಗಾರಿ ತೆವಳುತ್ತಾ ಸಾಗಿದೆ.

ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಎರಡು ಆಸ್ಪತ್ರೆ ಕಟ್ಟಡಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಕಾಮಗಾರಿ ಆರಂಭವಾಗಿ ಮೂರು ವರ್ಷ ಕಳೆಯುತ್ತಿದ್ದರೂ ವೇಗ ಪಡೆದುಕೊಂಡಿಲ್ಲ. ಆರೋಗ್ಯ ಇಲಾಖೆಯು ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್‌ ಆಸ್ಪತ್ರೆಯ ಸಹಭಾಗಿತ್ವದಲ್ಲಿ ಕ್ಯಾನ್ಸರ್‌ ಆಸ್ಪತ್ರೆ ನಿರ್ಮಿಸುತ್ತಿದೆ. ಆಸ್ಪತ್ರೆ ಕಾರ್ಯಾರಂಭ ಮಾಡಿ ಈಗಾಗಲೇ 2 ತಿಂಗಳು ಕಳೆಯಬೇಕಿತ್ತು. ಅನುದಾನದ ಕೊರತೆ, ಸರಿಯಾದ ಸಮಯಕ್ಕೆ ಹಣ ಬಿಡುಗಡೆಯಾಗದ ಕಾರಣ ಆಸ್ಪತ್ರೆ ನಿರ್ಮಾಣ ಕಾರ್ಯ ಕುಂಟುತ್ತಾ ಸಾಗಿದೆ.

ಕಳೆದ ಆಗಸ್ಟ್‌ ತಿಂಗಳ ಕೊನೆಯಲ್ಲಿ ಕಾಮಗಾರಿ ಮುಗಿದು ಆಸ್ಪತ್ರೆ ಕಾರ್ಯಾರಂಭ ಮಾಡಬೇಕಿತ್ತು. ಇದೀಗ ಮುಂದಿನ ಮಾರ್ಚ್‌ 31ರ ಒಳಗೆ ಕೆಲಸ ಮುಗಿಸುವ ಗುರಿ ನಿಗದಿಪಡಿಸಲಾಗಿದೆ. ಒಟ್ಟು ₹100 ಕೋಟಿ ವೆಚ್ಚದಲ್ಲಿ ಕೆಲಸಗಳು ನಡೆಯುತ್ತಿದ್ದು, ಈಗಾಗಲೇ ಸರ್ಕಾರದಿಂದ ₹60 ಕೋಟಿ ಹಣ ಪಾವತಿಯಾಗಿದೆ. ಇನ್ನೂ ₹40 ಕೋಟಿ ಬಿಡುಗಡೆ ಆಗಬೇಕಿದೆ.

ADVERTISEMENT

ಹಳೆಯ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ರಸ್ತೆಗೆ ಹೊಂದಿಕೊಂಡಂತೆ ಕಟ್ಟಡ ನಿರ್ಮಾಣವಾಗುತ್ತಿದೆ. ನೆಲಮಹಡಿ ಒಳಗೊಂಡಂತೆ ಒಟ್ಟು 3 ಮಹಡಿಗಳ ಆಸ್ಪತ್ರೆ ತಲೆ ಎತ್ತಲಿದೆ. ರೋಗಿಗಳಿಗೆ 100 ಹಾಸಿಗೆ ಮೀಸಲಿಡಲಾಗುತ್ತದೆ. ಕ್ಯಾನ್ಸರ್‌ ರೋಗಕ್ಕೆ ಸಂಬಂಧಿಸಿದ ಎಲ್ಲ ಚಿಕಿತ್ಸೆ ಒಂದೇ ಕಡೆ ಸಿಗಲಿದೆ. ಶಸ್ತ್ರ ಚಿಕಿತ್ಸೆ, ಸ್ಕ್ರೀನಿಂಗ್‌, ಕೀಮೊಥೆರಪಿ, ರೇಡಿಯೋಥೆರಪಿ ಚಿಕಿತ್ಸೆ ದೊರೆಯಲಿದೆ.

‘ಜಿಲ್ಲೆಯ ಜನರು ಚಿಕಿತ್ಸೆಗಾಗಿ ಬೇರೆ ಕಡೆ ಹೋಗುವುದನ್ನು ತಪ್ಪಿಸಬೇಕು. ಈ ಎರಡು ಆಸ್ಪತ್ರೆಗಳ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು. ಜನಪ್ರತಿನಿಧಿಗಳು, ಅಧಿಕಾರಿಗಳು ಕಾಮಗಾರಿಗೆ ವೇಗ ನೀಡಲು ಕ್ರಮಕೈಗೊಳ್ಳಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಬೇಕು’ ಎಂದು ನಾಗವಲ್ಲಿ ನಿವಾಸಿ ಅಭಿಷೇಕ್‌ ಒತ್ತಾಯಿಸಿದರು.

‘ಖಾಸಗಿ ಸಂಸ್ಥೆಗೆ ಕಟ್ಟಡ ನಿರ್ಮಾಣದ ಹೊಣೆ ನೀಡಲಾಗಿದೆ. ಈಗಾಗಲೇ ಶೇ 80ರಷ್ಟು ಕಾಮಗಾರಿ ಮುಗಿದಿದೆ. ಸಣ್ಣ–ಪುಟ್ಟ ಕೆಲಸಗಳು ಮಾತ್ರ ಬಾಕಿ ಇವೆ. ಆದಷ್ಟು ಬೇಗ ಆಸ್ಪತ್ರೆಗೆ ಚಾಲನೆ ನೀಡಲು ಕ್ರಮ ವಹಿಸಲಾಗುವುದು’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಅಸ್ಗರ್‌ ಬೇಗ್‌ ಪ್ರತಿಕ್ರಿಯಿಸಿದರು.

ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ
ಕ್ಯಾನ್ಸರ್‌ ಆಸ್ಪತ್ರೆ 100 ಹಾಸಿಗೆ ಮೀಸಲು ತಾಯಿ, ಮಕ್ಕಳಿಗೆ 200 ಹಾಸಿಗೆ ವೇಗ ಪಡೆಯದ ನಿರ್ಮಾಣ ಕಾರ್ಯ

ಉದ್ಘಾಟನೆಗೂ ಮುನ್ನ ಮೇಲ್ದರ್ಜೆಗೆ

ಉದ್ಘಾಟನೆಗೂ ಮುನ್ನವೇ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲು ಯೋಜನೆ ರೂಪಿಸಲಾಗಿದೆ. ಮೊದಲಿಗೆ 100 ಹಾಸಿಗೆಯುಳ್ಳ ಆಸ್ಪತ್ರೆ ನಿರ್ಮಿಸಲು ಉದ್ದೇಶಿಸಲಾಗಿತ್ತು. ಈಗ 200 ಹಾಸಿಗೆಯುಳ್ಳ ಸುಸಜ್ಜಿತ ಸೌಲಭ್ಯ ಒಳಗೊಂಡ ಕಟ್ಟಡ ನಿರ್ಮಾಣಕ್ಕೆ ನೀಲನಕ್ಷೆ ತಯಾರಾಗಿದೆ. ಮುಂದಿನ 3 ತಿಂಗಳಲ್ಲಿ 100 ಹಾಸಿಗೆಯುಳ್ಳ ಆಸ್ಪತ್ರೆ ಆರಂಭವಾಗಲಿದೆ. ಇದರ ನಂತರ ಇದೇ ಕಟ್ಟಡದಲ್ಲಿ ಮತ್ತೊಂದು ಮಹಡಿ ನಿರ್ಮಿಸಲಾಗುತ್ತದೆ. ಒಟ್ಟು 200 ಹಾಸಿಗೆಯುಳ್ಳ ಆಸ್ಪತ್ರೆ ಜಿಲ್ಲೆಯ ಜನರ ಸೇವೆಗೆ ಲಭ್ಯವಾಗಲಿದೆ. 2021ರ ಸೆಪ್ಟೆಂಬರ್‌ 25ರಂದು ₹20 ಕೋಟಿ ಅನುದಾನದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಚಾಲನೆ ನೀಡಿದ್ದು 2023ರ ಮೇ ಅಂತ್ಯಕ್ಕೆ ಪೂರ್ಣಗೊಳ್ಳಬೇಕಿತ್ತು. ಈಗಾಗಲೇ ಒಂದೂವರೆ ವರ್ಷ ತಡವಾಗಿದೆ. ಮೂರು ಮಹಡಿಗಳಲ್ಲಿ ಆಸ್ಪತ್ರೆ ನಿರ್ಮಾಣವಾಗುತ್ತಿದೆ. ಪ್ರತ್ಯೇಕ ಹೆರಿಗೆ ವಾರ್ಡ್‌ ಮಕ್ಕಳ ವಿಭಾಗ ಮಕ್ಕಳ ತೀವ್ರ ನಿಗಾ ಘಟಕ ಒಳಗೊಂಡಂತೆ ಹೆರಿಗೆಯಾದ ನಂತರ ಮಕ್ಕಳು ಬಾಣಂತಿಯರ ಆರೈಕೆಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.