ADVERTISEMENT

ಡಿವೈಎಸ್‌ಪಿ ಸೇರಿ ನಾಲ್ವರು ಪೊಲೀಸರ ವಿರುದ್ಧ ಪ್ರಕರಣ

ವ್ಯಕ್ತಿ ಮೇಲೆ ಹಲ್ಲೆ ಆರೋಪ

​ಪ್ರಜಾವಾಣಿ ವಾರ್ತೆ
Published 12 ಜೂನ್ 2024, 5:57 IST
Last Updated 12 ಜೂನ್ 2024, 5:57 IST

ತುಮಕೂರು: ‘ತನಿಖೆ ನೆಪದಲ್ಲಿ ಠಾಣೆಗೆ ಕರೆತಂದು ಹಲ್ಲೆ ನಡೆಸಿದ್ದಾರೆ’ ಎಂಬ ಆರೋಪದ ಮೇರೆಗೆ ಕುಣಿಗಲ್‌ ಡಿವೈಎಸ್‌ಪಿ ಓಂಪ್ರಕಾಶ್‌, ಅಮೃತೂರು ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಮಾದವನಾಯಕ್‌, ಸಬ್‌ಇನ್‌ಸ್ಪೆಕ್ಟರ್‌ ಶವಂತ್‌ಗೌಡ, ಹೆಡ್‌ ಕಾನ್‌ಸ್ಟೇಬಲ್‌ ದಯಾನಂದ್‌ ವಿರುದ್ಧ ಕುಣಿಗಲ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಲ್ಲೂಕಿನ ಹೊನ್ನಮಾಚನಹಳ್ಳಿ ಗ್ರಾಮ ಪಂಚಾಯಿತಿ ವಾಟರ್‌ಮ್ಯಾನ್‌ ಪಿ.ಜಿ.ಗಂಗಾಧರ್‌ ಎಂಬುವರು ನೀಡಿದ ದೂರಿನ ಮೇರೆಗೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

‘ಮಾರ್ಚ್‌ 21ರಂದು ವಾಟರ್‌ಮ್ಯಾನ್‌ ಕೆಲಸಕ್ಕೆ ಹೋಗುವಾಗ ರಾಘವನಹೊಸೂರು ಕ್ರಾಸ್‌ ಬಳಿ ಸಬ್‌ಇನ್‌ಸ್ಪೆಕ್ಟರ್‌ ಶವಂತ್‌ಗೌಡ, ಹೆಡ್‌ ಕಾನ್‌ಸ್ಟೇಬಲ್‌ ದಯಾನಂದ್‌ ನನ್ನನ್ನು ತಡೆದು ನಿಲ್ಲಿಸಿ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸಬೇಕಿದೆ ಎಂದು ಕುಣಿಗಲ್‌ ಠಾಣೆಗೆ ಕರೆದುಕೊಂಡು ಹೋದರು. ನಂತರ ಅಲ್ಲಿ ಎಲ್ಲರು ಸೇರಿಕೊಂಡು ಹೊಡೆದಿದ್ದಾರೆ. ಹಲ್ಲೆಯ ನಂತರ ಅಮೃತೂರು ಠಾಣೆಗೆ ಕರೆದುಕೊಂಡು ಬಂದು ಸಂಜೆ 5.30 ಗಂಟೆ ವರೆಗೆ ವಶದಲ್ಲಿ ಇಟ್ಟುಕೊಂಡಿದ್ದರು’ ಎಂದು ಗಂಗಾಧರ್‌ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

‘ಸ್ನೇಹಿತರಾದ ನವೀನ, ಶಿವಕುಮಾರ್‌ ಮುಖಾಂತರ ನಮ್ಮ ಕುಟುಂಬದವರಿಗೆ ಈ ಮಾಹಿತಿ ತಿಳಿದಿದೆ. ನಂತರ ಅಮೃತೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದು, ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಾಗಿದ್ದೆ’ ಎಂದೂ ತಿಳಿಸಿದ್ದಾರೆ.

ಈ ಸಂಬಂಧ ದೂರು ದಾಖಲಿಸಿಕೊಳ್ಳಲು ನಿರ್ದೇಶನ ನೀಡುವಂತೆ ಕೋರಿ ಜೆಎಂಎಫ್‌ಸಿ ನ್ಯಾಯಾಲಯದ ಮೊರೆ ಹೋಗಿದ್ದರು. ಕೋರ್ಟ್ ಆದೇಶದ ಮೇಲೆ ದೂರು ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.