ADVERTISEMENT

ತುಮಕೂರು | 5 ದಿನದಲ್ಲಿ 3 ಹೆಬ್ಬಾವು ಸೆರೆ

ಜನ ವಸತಿ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಹೆಬ್ಬಾವು

​ಪ್ರಜಾವಾಣಿ ವಾರ್ತೆ
Published 28 ಜುಲೈ 2024, 14:16 IST
Last Updated 28 ಜುಲೈ 2024, 14:16 IST
ತುಮಕೂರಿನ ಸಿದ್ಧಗಂಗಾ ಮಠದ ಹಿಂಭಾಗ ಶನಿವಾರ ಉರಗ ತಜ್ಞ ಹರೀಶ್‌ ಹೆಬ್ಬಾವು ರಕ್ಷಿಸಿದರು
ತುಮಕೂರಿನ ಸಿದ್ಧಗಂಗಾ ಮಠದ ಹಿಂಭಾಗ ಶನಿವಾರ ಉರಗ ತಜ್ಞ ಹರೀಶ್‌ ಹೆಬ್ಬಾವು ರಕ್ಷಿಸಿದರು   

ತುಮಕೂರು: ಜಿಲ್ಲೆಯ ವಿವಿಧ ಜನ ವಸತಿ ಪ್ರದೇಶಗಳಲ್ಲಿ ಹೆಬ್ಬಾವುಗಳು ಕಾಣಿಸುತ್ತಿದ್ದು, ಜನರನ್ನು ಆತಂಕಕ್ಕೆ ತಳ್ಳಿದೆ. ಕಳೆದ 5 ದಿನಗಳ ಅಂತರದಲ್ಲಿ 3 ಹೆಬ್ಬಾವು ಸೆರೆಯಾಗಿವೆ.

ಜುಲೈ 23, 26, 27ರಂದು ತಾಲ್ಲೂಕು ವ್ಯಾಪ್ತಿಯಲ್ಲೇ 3 ಹೆಬ್ಬಾವು ರಕ್ಷಿಸಿ ಕಾಡಿಗೆ ಬಿಡಲಾಗಿದೆ. ಸಿದ್ಧಗಂಗಾ ಮಠದ ಬಳಿಯ ರಾಮದೇವರ ಬೆಟ್ಟದ ಪ್ರದೇಶದಲ್ಲಿ ಹೆಬ್ಬಾವುಗಳು ಕಾಣಿಸಿಕೊಳ್ಳುತ್ತಿವೆ. ಕೆರೆಕಲ್‌ಪಾಳ್ಯದ ಹತ್ತಿರ 13 ಅಡಿ, ಊರ್ಡಿಗೆರೆ ಹೋಬಳಿಯ ಅಯ್ಯನಪಾಳ್ಯ ಗ್ರಾಮದ ಹೊರವಲಯದಲ್ಲಿ 13 ಅಡಿ, ಸಿದ್ಧಗಂಗಾ ಮಠದ ಹಿಂಭಾಗದಲ್ಲಿ 10 ಅಡಿ ಉದ್ದದ ಹೆಬ್ಬಾವು ಸೆರೆ ಹಿಡಿಯಲಾಗಿದೆ.

ಶನಿವಾರ ರೈತರೊಬ್ಬರು ಡೈರಿಗೆ ಹಾಲು ತೆಗೆದುಕೊಂಡು ಹೋಗುವಾಗ ಸುಮಾರು 10 ಅಡಿ ಉದ್ದದ ಹೆಬ್ಬಾವು ಕಾಣಿಸಿದೆ. ಉರಗ ತಜ್ಞ ಹರೀಶ್‌ ಕಾರ್ಯಾಚರಣೆ ನಡೆಸಿ ಹಾವು ರಕ್ಷಿಸಿದರು. ಸುರಕ್ಷಿತವಾಗಿ ದೇವರಾಯನ ದುರ್ಗ ಅರಣ್ಯ ಪ್ರದೇಶದಲ್ಲಿ ಬಿಡಲಾಯಿತು. ಮನೆಯ ಹಿತ್ತಲು, ಜಮೀನುಗಳಲ್ಲಿ ಹೆಬ್ಬಾವು ಕಂಡು ಜನರು ಗಾಬರಿಯಾಗುತ್ತಿದ್ದಾರೆ. ರಾತ್ರಿ ಸಮಯದಲ್ಲಿ ಮನೆಯಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ.

ADVERTISEMENT

ಕಳೆದ ವರ್ಷ ತೋವಿನಕೆರೆ ಹೋಬಳಿಯ ಮಣುವಿನಕುರಿಕೆ ಗ್ರಾಮದಲ್ಲಿ 2 ಹೆಬ್ಬಾವು ಕಾಣಿಸಿಕೊಂಡಿದ್ದವು. ಇದರಿಂದ ರಾತ್ರಿ ಸಮಯದಲ್ಲಿ ಜಮೀನಿಗೆ ನೀರು ಬಿಡಲು ಹೋಗುವ ರೈತರು ಭಯಭೀತರಾಗಿದ್ದರು. ಇದೀಗ ನಗರ ಪ್ರದೇಶದತ್ತ ಬರುವುದು ಹೆಚ್ಚಾಗಿದ್ದು, ಜನರು ಆತಂಕದಲ್ಲಿ ದಿನ ದೂಡುವಂತಾಗಿದೆ.

‘ಕಳೆದ ಆರು ತಿಂಗಳಲ್ಲಿ ಜಿಲ್ಲೆಯ ವಿವಿಧೆಡೆ 6 ಹೆಬ್ಬಾವು ಸೆರೆ ಸಿಕ್ಕಿವೆ. ಜಾಸ್ತಿ ಮಳೆಯಾದ ಸಂದರ್ಭದಲ್ಲಿ ಹೆಬ್ಬಾವು ಜನ ವಸತಿ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಅರಣ್ಯ ಪ್ರದೇಶದಲ್ಲಿ ಆಹಾರ ಸಿಗದಿದ್ದಾಗ ಮೇಕೆಗಳ ವಾಸನೆ ಹಿಡಿದು ಆಹಾರ ಅರಸಿ ಹಟ್ಟಿಗಳತ್ತ, ಬೆಟ್ಟದ ಬುಡದಲ್ಲಿರುವ ಮನೆಗಳತ್ತ ಜಾಸ್ತಿ ಬರುತ್ತವೆ’ ಎಂದು ಉರಗ ತಜ್ಞ ದಿಲೀಪ್‌ ಮಾಹಿತಿ ನೀಡಿದರು.

‘10 ವರ್ಷಗಳಿಂದ ಹಾವು ರಕ್ಷಣೆಯ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ. ಜಿಲ್ಲೆಯಲ್ಲಿ ಈಚೆಗೆ ಹೆಚ್ಚಾಗಿ ಹೆಬ್ಬಾವು ಕಾಣಿಸಿಕೊಳ್ಳುತ್ತಿದೆ. ಈ ಹಿಂದೆ ಜಾಸ್ತಿ ಸಿಗುತ್ತಿರಲಿಲ್ಲ. ನಮ್ಮ ಭಾಗದಲ್ಲಿ 15 ಅಡಿ ಉದ್ದದ ಹೆಬ್ಬಾವು ಇದೆ ಎಂಬುವುದು ನಮಗೆ ಆಶ್ಚರ್ಯದ ವಿಷಯ’ ಎಂದು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.