ಶಿರಾ: ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ₹1.25 ಕೋಟಿ ವೆಚ್ಚದಲ್ಲಿ ನಗರೋತ್ಥಾನ ಉಳಿಕೆ ಮೊತ್ತದ ಅನುದಾನದಲ್ಲಿ ಕ್ರಿಯಾ ಯೋಜನೆ ರೂಪಿಸಿ, ಕಾಮಗಾರಿ ಕೈಗೆತ್ತಿಕೊಳ್ಳುವುದಾಗಿ ನಗರಸಭೆ ಪೌರಾಯುಕ್ತ ರುದ್ರೇಶ್ ಅವರು ಮುಖ್ಯಮಂತ್ರಿ ಸಚಿವಾಲಯದ ಮುಖ್ಯಮಂತ್ರಿ ವಿಶೇಷ ಕರ್ತವ್ಯ ಅಧಿಕಾರಿಗಳಿಗೆ ಪತ್ರ ಬರೆದು ಮಾಹಿತಿ ನೀಡಿದ್ದಾರೆ.
‘ಪ್ರಜಾವಾಣಿ’ಯಲ್ಲಿ ಸೆಪ್ಟೆಂಬರ್ 9ರಂದು ‘ಸೌಕರ್ಯ ವಂಚಿತ ಖಾಸಗಿ ಬಸ್ ನಿಲ್ದಾಣ’ ವರದಿ ಪ್ರಕಟವಾಗಿತ್ತು.
ನಗರದ ಖಾಸಗಿ ಬಸ್ ನಿಲ್ದಾಣವನ್ನು ಪರಿಶೀಲಿಸಿ ಆವರಣದಲ್ಲಿ ಉಂಟಾಗಿರುವ ತಾತ್ಕಾಲಿಕ ಗುಂಡಿ ಮುಚ್ಚಿ ಸಂಚಾರಕ್ಕೆ ಅನುಕೂಲವಾಗುವಂತೆ 2024-25ನೇ ಸಾಲಿನ ನಗರಸಭಾ ಅನುದಾನದಡಿಯಲ್ಲಿ ತುರ್ತು ಕಾಮಗಾರಿ ಪೂರ್ಣಗೊಳಿಸಲಾಗುವುದು. ಈ ಪ್ರದೇಶದಲ್ಲಿ ಡಾಂಬರೀಕರಣಕ್ಕೆ ಸೂಕ್ತವಾಗಿಲ್ಲದಿರುವ ಕಾರಣ ಸಿ.ಸಿ ರಸ್ತೆ ನಿರ್ಮಾಣಕ್ಕೆ ಸೂಚಿಸಲಾಗಿದೆ.
ಶಿರಾ ನಗರ ರಾಷ್ಟ್ರೀಯ ಹೆದ್ದಾರಿ-48, ರಾಷ್ಟ್ರೀಯ ಹೆದ್ದಾರಿ 234, ರಾಜ್ಯ ಹೆದ್ದಾರಿ ಹಾಗೂ ಹಲವು ಜಿಲ್ಲಾ ಮುಖ್ಯ ರಸ್ತೆಗಳನ್ನು ಸಂಪರ್ಕಿಸಿಕೊಂಡು ವೇಗದಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಆದ್ದರಿಂದ ಪ್ರತಿ ನಿತ್ಯ ತಾಲ್ಲೂಕಿನ ಗ್ರಾಮೀಣ ಪ್ರದೇಶ ಹಾಗೂ ವಿವಿಧ ತಾಲ್ಲೂಕು ಕೇಂದ್ರಗಳಿಂದ, ರಾಜ್ಯ, ಅಂತರರಾಜ್ಯ ಮತ್ತು ಇತರೆ ಪ್ರದೇಶಗಳಿಗೆ ಹೋಗುವ ಜನರ ಸಂಚಾರ ಅಧಿಕವಾಗಿದೆ.
ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ನಗರೋತ್ಥಾನ-3ನೇ ಹಂತದ ಯೋಜನೆಯಲ್ಲಿ ಟೈಲ್ಸ್, ರೂಫಿಂಗ್ ಶೀಟ್ ಹಾಗೂ ಹೈಮಾಸ್ಟ್ ವಿದ್ಯುತ್ ದೀಪ ಹಾಗೂ ನಿತ್ಯ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಶುದ್ಧ ಕುಡಿಯುವ ನೀರಿನ ಘಟಕ ಕಾಮಗಾರಿ ಮಾಡಿದ್ದು, ಸಿಸಿ ರಸ್ತೆಯನ್ನು ನಗರೋತ್ಥಾನ-4ರಲ್ಲಿ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.