ತುಮಕೂರು: ಕನಕದಾಸರ ಕೀರ್ತನೆ, ಚಿಂತನೆ, ವಿಚಾರಗಳು 500 ವರ್ಷಗಳ ನಂತರವೂ ನಿಗಿ ನಿಗಿ ಹೊಳೆಯುವ ಕೆಂಡದಂತಿವೆ. ಸಮಾಜ, ಪ್ರಭುತ್ವವನ್ನು ಎಚ್ಚರಿಸುತ್ತಿವೆ ಎಂದು ಪ್ರಾಧ್ಯಾಪಕಿ ಎನ್.ಆರ್.ಲಲಿತಾಂಬ ಅಭಿಪ್ರಾಯಪಟ್ಟರು.
ನಗರದಲ್ಲಿ ಸೋಮವಾರ ಜಿಲ್ಲಾ ಆಡಳಿತ, ಕಾಳಿದಾಸ ವಿದ್ಯಾವರ್ಧಕ ಸಂಘ, ಕನ್ನಡ ಸಾಹಿತ್ಯ ಪರಿಷತ್ತು, ವಿವಿಧ ಕುರುಬ ಸಮುದಾಯದ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕನಕದಾಸರ ಜಯಂತ್ಯುತ್ಸವ ಆಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಕನಕದಾಸರು ಎಲ್ಲ ದಾಸರಗಿಂತ ಭಿನ್ನ. ಆಹಾರದ ರಾಜಕಾರಣ, ಜಾತಿ, ವರ್ಗದ ತಾರತಮ್ಯದ ಬಗ್ಗೆ ಚಿಂತಿಸುತ್ತಿದ್ದರು. ಧರ್ಮ, ಮತ, ಭಕ್ತಿಯಿಂದ ಸಮಾಜ ಬದಲಾವಣೆ ಸಾಧ್ಯವಿಲ್ಲ. ಇದಕ್ಕೆ ಪ್ರಭುತ್ವದ ಇಚ್ಛಾಶಕ್ತಿ ಬೇಕು. ಯಾವುದೇ ಒಂದು ಚಿಂತನೆಯನ್ನು ಕಾರ್ಯರೂಪಕ್ಕೆ ತರಲು ಪ್ರಭುತ್ವದ ಆಸಕ್ತಿಯೂ ಮುಖ್ಯ ಎಂದು ನಂಬಿದ್ದರು. ಕುಲ ಭೇದಗಳನ್ನು ಮರೆತು ಸಹಬಾಳ್ವೆ ಹೇಳುವ ಕೊಂಡಿಯಾಗಿ ಕನಕರು ಕಾಣಿಸುತ್ತಾರೆ ಎಂದು ಸ್ಮರಿಸಿದರು.
ಪ್ರತಿಯೊಬ್ಬರು ವ್ಯಕ್ತಿ ನೆಲೆಯಲ್ಲಿ ಮನುಷ್ಯರಾಗುವುದು ಹೇಗೆ ಎಂಬುವುದನ್ನು ತಮ್ಮ ಕೀರ್ತನೆಯಲ್ಲಿ ಹೇಳಿದ್ದಾರೆ. ಕೀರ್ತನೆ ಅರ್ಥೈಸಿಕೊಳ್ಳಲು, ಅನುಷ್ಠಾನಗೊಳಿಸಲು ಚಿಂತಿಸಬೇಕು. ಸಂತನನ್ನು ಜೀವಂತವಾಗಿ ಇಡಬೇಕಾದ್ದು ನಮ್ಮ ಜವಾಬ್ದಾರಿ. ಯುವ ಸಮುದಾಯ ಭಕ್ತಿಯ ಜತೆಗೆ ವೈಚಾರಿಕತೆ, ಸಹಜ ವಿನಯ, ಸನ್ನಡತೆ, ಸರಳ ನಡವಳಿಕೆ ಅಳವಡಿಸಿಕೊಳ್ಳಬೇಕು. ಹೊಸ ಪೀಳಿಗೆಗೆ ಕನಕದಾಸರ ಕೀರ್ತನೆ ತಿಳಿಸಬೇಕು ಎಂದು ಸಲಹೆ ಮಾಡಿದರು.
ಜಿಲ್ಲಾಧಿಕಾರಿ ಶುಭ ಕಲ್ಯಾಣ್, ‘ಭಕ್ತಿ, ಶ್ರದ್ಧೆಯಿಂದ ಕೆಲಸ ಮಾಡಿದರೆ ಫಲ ಸಿಗುತ್ತದೆ. ದೇವರ ಆಶೀರ್ವಾದ ಲಭಿಸುತ್ತದೆ. ಕನಕದಾಸರ ಮೌಲ್ಯ ಸ್ಮರಿಸಿ, ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರ ಹಾದಿಯಲ್ಲಿ ಸಾಗಬೇಕು’ ಎಂದು ತಿಳಿಸಿದರು.
ಜಯಂತಿ ಅಂಗವಾಗಿ ಶಿರಾಗೇಟ್‌ನಿಂದ ಗುಬ್ಬಿ ವೀರಣ್ಣ ಕಲಾಕ್ಷೇತ್ರದ ವರೆಗೆ ಕನಕದಾಸರ ಭಾವಚಿತ್ರದ ಮೆರವಣಿಗೆ ನಡೆಯಿತು. ತಾಲ್ಲೂಕಿನ ಡಿ.ಎಂ.ಪಾಳ್ಯದ ಗುರುರೇವಣ ಸಿದ್ದೇಶ್ವರ ಮಠದ ಬಿಂಧುಶೇಖರ್ ಒಡೆಯರ್ ಸ್ವಾಮೀಜಿ, ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ, ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ಶ್ರೀದೇವಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್, ಕಾಳಿದಾಸ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಮೈಲಪ್ಪ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಟಿ.ಆರ್.ಸುರೇಶ್, ಪತ್ರಕರ್ತ ಎಸ್.ನಾಗಣ್ಣ, ಮುಖಂಡರಾದ ಭೀಮರಾಜು, ಎ.ಮಹಾಲಿಂಗಯ್ಯ, ಪಿ.ಕೆಂಪರಾಜು ಮೊದಲಾದವರು ಪಾಲ್ಗೊಂಡಿದ್ದರು.
ಸನ್ಮಾನಿತರು ಮರಳೂರಿನ ಟಿ.ಎಚ್.ಹನುಮಂತಪ್ಪ ಲಿಂಗಾಪುರದ ಶಿವಣ್ಣ ಹರಳಕಟ್ಟೆಯ ಚಿಕ್ಕಲಿಂಗಯ್ಯ ಮೆಳೇಕೋಟೆಯ ಎಂ.ಪಿ.ರಮೇಶ್ ಕಾಳಮ್ಮನಗುಡಿ ಬೀದಿಯ ಸಿ.ಎಲ್.ರವಿಕುಮಾರ್ ಆರ್.ತಿಪ್ಪೇಸ್ವಾಮಿ ವೈ.ಎನ್.ಹೊಸಕೋಟೆಯ ಪೂಜಾರಿ ಚೌಡಪ್ಪ ಉಪ್ಪಾರಹಳ್ಳಿಯ ಡಾ.ಶಶಿಧರ್ ಕಾರಂಜಿಗುಡಿ ಬೀದಿಯ ಟಿ.ಎಸ್.ಎಂ.ಪಿ.ಕುಮಾರಸ್ವಾಮಿ ಅವರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.