ADVERTISEMENT

ಸಿರಿಧಾನ್ಯದ ಸವಿರುಚಿ; ತರಹೇವಾರಿ ಖಾದ್ಯ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2024, 5:45 IST
Last Updated 16 ನವೆಂಬರ್ 2024, 5:45 IST
ತುಮಕೂರಿನಲ್ಲಿ ಶುಕ್ರವಾರ ಕೃಷಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಸಿರಿಧಾನ್ಯ ಪಾಕ ಮೇಳದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಖಾದ್ಯ ಸವಿದರು. ಜಿ.ಪಂ ಸಿಇಒ ಜಿ.ಪ್ರಭು, ಜಂಟಿ ಕೃಷಿ ನಿರ್ದೇಶಕ ರಮೇಶ್ ಇತರರು ಪಾಲ್ಗೊಂಡಿದ್ದರು
ತುಮಕೂರಿನಲ್ಲಿ ಶುಕ್ರವಾರ ಕೃಷಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಸಿರಿಧಾನ್ಯ ಪಾಕ ಮೇಳದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಖಾದ್ಯ ಸವಿದರು. ಜಿ.ಪಂ ಸಿಇಒ ಜಿ.ಪ್ರಭು, ಜಂಟಿ ಕೃಷಿ ನಿರ್ದೇಶಕ ರಮೇಶ್ ಇತರರು ಪಾಲ್ಗೊಂಡಿದ್ದರು   

ತುಮಕೂರು: ಕೃಷಿ ಇಲಾಖೆಯಿಂದ ಸಿರಿಧಾನ್ಯ ಪಾಕ ಸ್ಪರ್ಧೆಯನ್ನು ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು. ಸಿರಿಧಾನ್ಯ ಬಳಸಿ ತಯಾರಿಸಿದ್ದ ವಿವಿಧ ಬಗೆಯ ತಿನಿಸುಗಳು ಗಮನ ಸೆಳೆದವು. ಹಲವರ ಬಾಯಲ್ಲಿ ನೀರೂರಿಸುವಂತೆ ಮಾಡಿತು.

ಸಿರಿಧಾನ್ಯ ಬಳಸಿ ತಯಾರಿಸಿದ ಸಾಮೆ ಪಾಲಾಕ್ ಪನ್ನೀರ್ ರೈಸ್, ರಾಗಿ ಉಪ್ಪಿಟ್ಟು, ನವಣೆ ಹಲ್ವಾ, ಹುರುಳಿ ಕಾಳು ತೊಕ್ಕು, ರಾಗಿ ಉಪ್ಪಿಟ್ಟು, ಪೊಂಗಲ್, ಪಾಯಸ, ಕರ್ಚಿಕಾಯಿ, ಮತ್ತಿತರ ತಿನಿಸುಗಳು ಗಮನ ಸೆಳೆದವು.

ಸಿರಿಧಾನ್ಯ ಖಾದ್ಯ ವಿಭಾಗ ಸ್ಪರ್ಧೆಯಲ್ಲಿ ಜೆ.ನಾಗರತ್ನ (ಪ್ರಥಮ), ಬಿ.ತುಳಸಿ (ದ್ವಿತೀಯ), ಎಸ್.ಆರ್.ಶಶಿಕಲಾ (ತೃತೀಯ) ಹಾಗೂ ಮರೆತು ಹೋದ ಖಾದ್ಯ ವಿಭಾಗದಲ್ಲಿ ಕೆ.ನಳಿನಾ (ಪ್ರಥಮ), ಜಿ.ಆರ್.ಪ್ರಗತಿ (ದ್ವಿತೀಯ), ಸಿ.ವಿ.ನಾಗಶ್ರೀ (ತೃತೀಯ) ಬಹುಮಾನಕ್ಕೆ ಪಾತ್ರರಾದರು. ವಿಜೇತರಿಗೆ ಪ್ರಥಮ ₹5 ಸಾವಿರ, ದ್ವಿತೀಯ ₹3 ಸಾವಿರ, ತೃತೀಯ ₹2 ಸಾವಿರ ನಗದು ಬಹುಮಾನ ನೀಡಲಾಯಿತು.

ADVERTISEMENT

ತುಮಕೂರಿನ ಎಚ್.ಡಿ.ನಾಗರತ್ನಮ್ಮ ತಯಾರಿಸಿದ ತಂಬಿಟ್ಟು, ಪ್ರಣತಿ ಅವರ ರಾಗಿ ಉಪ್ಪಿಟ್ಟು, ಶಾರದಾಂಬ ಅವರ ನವಣೆ ಬಿಸಿಬೇಳೆ ಬಾತ್, ರಮೇಶ್ ಅವರ ಬರಗು ಪೊಂಗಲ್, ವೀಣಾ ಮಲ್ಲಪ್ಪ ಅವರ ಸಾಮೆ ಇಡ್ಲಿ, ಮರಗೆಣಸು ಸಿಹಿ ಚಟ್ನಿ, ಚಿಕ್ಕತಾಯಮ್ಮ ಅವರ ನವಣೆ ಪಾಯಸ, ಸಿಹಿ ಉಂಡೆ, ನಳಿನಾ ಅವರ ಬುತ್ತಿ ಖಾರದ ಗೊಜ್ಜು, ಹುರುಳಿ ಕಾಳು ತೊಕ್ಕು, ಶಶಿಕಲಾ ಅವರ ಸಾಮೆ ಕಡುಬು, ಒತ್ತು ಶಾವಿಗೆ, ನಿರ್ಮಲ ಅವರ ಸಾಮೆ ಹುಗ್ಗಿ, ತುಳಸಿ ಬಾಲರಾಜು ಅವರ ನವಣೆ ಹಲ್ವ, ಸಜ್ಜೆ ನಿಪ್ಪಟ್ಟು, ಕೆ.ಜೆ.ನಾಗರತ್ನ ಅವರ ಸಾಮೆ ಪಾಲಾಕ್ ಪನ್ನೀರ್ ರೈಸ್, ನವಣೆ ಗಟ್ಟಕ್ಕಿ ಪಾಯಸ, ಮುರ್‍ಮುರೆ, ಸುಧಾಮಣಿ ಅವರ ನಿಪಟ್ಟು, ಸುರುಳಿ ಪೂರಿ, ಊರುಕೆರೆ ಸೌಮ್ಯ ಅವರ ದಿಲ್‍ಪಸಂದ್, ಸಮೋಸ, ಪ್ರಭಾವತಮ್ಮ ಅವರ ರಾಗಿ ಉಂಡೆ, ಸಿಹಿ– ಖಾರ ಪೊಂಗಲ್, ಶಿರಾ ತಾಲ್ಲೂಕಿನ ಎಸ್.ಅನು ಅವರ ಸಾಮೆ ಸಿಹಿ ಪೊಂಗಲ್, ನಾಗಶ್ರೀ ಅವರ ಅಂಬಲಿ, ತಿಪಟೂರಿನ ಲತಾಮಣಿ ಅವರ ನವಣೆ ಒಬ್ಬಟ್ಟು, ಲೋಕಮ್ಮ ಅವರ ನವಣೆ, ಕರ್ಜಿಕಾಯಿ, ಹಾರಕ ನಿಪ್ಪಟ್ಟು, ಕಜ್ಜಾಯ, ಊದಲು ಲಡ್ಡು ಖಾದ್ಯಗಳು ಆಕರ್ಷಿಸಿದವು.

ಮೇಳದಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಖಾದ್ಯ ಸವಿದರು.

ಜಿಲ್ಲೆಯಲ್ಲಿ 3 ಲಕ್ಷ ಹೆಕ್ಟೇರ್ ಪ್ರದೇಶದ ಕೃಷಿ ಭೂಮಿಯಲ್ಲಿ 6 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಸಿರಿಧಾನ್ಯ ಬೆಳೆಯಲಾಗುತ್ತಿದೆ. ಇದನ್ನು 10 ಸಾವಿರ ಹೆಕ್ಟೇರ್‌ಗೆ ವಿಸ್ತರಿಸುವ ಗುರಿ ಹೊಂದಲಾಗಿದೆ. ಸಿರಿಧಾನ್ಯ ಬೆಳೆ ಪ್ರೋತ್ಸಾಹಿಸಲು ಪ್ರತಿ ಹೆಕ್ಟೇರ್‌ಗೆ ₹10 ಸಾವಿರ ಪ್ರೋತ್ಸಾಹ ಧನವನ್ನು ಸರ್ಕಾರ ನೀಡುತ್ತಿದೆ ಎಂದು ಶುಭ ಕಲ್ಯಾಣ್ ತಿಳಿಸಿದರು.

ಹಲವಾರು ರೋಗಗಳಿಗೆ ಸಿರಿಧಾನ್ಯ ಬಳಕೆ ರಾಮಬಾಣವಾಗಿದೆ. ನಮ್ಮ ಪಾರಂಪರಿಕ ಆಹಾರ ಪದ್ಧತಿಯಲ್ಲಿ ಸಿರಿಧಾನ್ಯಗಳನ್ನು ಹೆಚ್ಚಾಗಿ ಬಳಸಲಾಗುತ್ತಿತ್ತು. ಜನರು ತಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಬಳಸಿದರೆ ರೋಗ ಮುಕ್ತರಾಗಬಹುದು ಎಂದು ಜಿ.ಪ್ರಭು ಸಲಹೆ ಮಾಡಿದರು.

ರಾಜ್ಯದಲ್ಲಿ ಸಿರಿಧಾನ್ಯ ಹೆಚ್ಚಾಗಿ ಬೆಳೆಯುವ ಜಿಲ್ಲೆಗಳಲ್ಲಿ ಚಿತ್ರದುರ್ಗ ಮೊದಲು, ತುಮಕೂರು ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ಸಿರಿಧಾನ್ಯ ಖಾದ್ಯ ತಯಾರಿಸುವವರು ಮುಂದೆ ಬಂದರೆ ಅಗತ್ಯ ತರಬೇತಿ, ಮಾರುಕಟ್ಟೆ ವ್ಯವಸ್ಥೆ, ಸಹಾಯ ಧನ, ₹4 ಲಕ್ಷದ ವರೆಗೆ ಸಾಲ ಸೌಲಭ್ಯ ನೀಡಲಾಗುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕ ರಮೇಶ್ ಹೇಳಿದರು.

ಕೃಷಿ ಉಪನಿರ್ದೇಶಕ ಹುಲಿರಾಜು, ಎಚ್.ಸಿ.ಚಂದ್ರಕುಮಾರ್, ಸಹಾಯಕ ನಿರ್ದೇಶಕಿ ಗಿರಿಜಮ್ಮ ಉಪಸ್ಥಿತರಿದ್ದರು. ಸ್ಪರ್ಧೆ ತೀರ್ಪುಗಾರರಾಗಿ ಕೊನೆಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಪಿ.ಬಿ.ಸಿಂಧು, ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ರಾಧಾ ಬಣಕಾರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.