ತೋವಿನಕೆರೆ: ರೈತನ ಹೆಸರಿನಲ್ಲಿ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಬಿಡುಗಡೆ ಮಾಡಿರುವ ‘ಲಕ್ಷ್ಮಣ’ ಹುಣಸೆ ತಳಿ ಮಾಲೀಕ ವಿನಯ್ ಕುಮಾರ್ ಅವರಿಗೆ ಬೆಳೆಗಾರರನ ಪಾಲಿನ ₹6.55 ಲಕ್ಷ ಚೆಕ್ ವಿತರಿಸಲಾಯಿತು.
ಮಡಿಕೇರಿಯ ಚಟ್ಟಳ್ಳಿ ಕೇಂದ್ರೀಯಾ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ಶನಿವಾರ ನಡೆದ ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯ್ದೆಯ ಜಾರಿ ಕುರಿತು ಸಮಾರಂಭದಲ್ಲಿ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ರೈತರು ಹಕ್ಕುಗಳ ಕಾಯ್ದೆ ಅಧ್ಯಕ್ಷ ತ್ರೀಲೋಚನ ಮಹಾಪಾತ್ರ ಚೆಕ್ ನೀಡಿದರು.
ಲಕ್ಷ್ಮಣ ಹುಣಸೆ ತಳಿ ಮಾಲೀಕರಿಗೆ ಮೂರು ವರ್ಷದಿಂದ ಮಾರಾಟ ಮಾಡಿರುವ ಕಸಿ ಕಟ್ಟಿದ ಹುಣಸೆ ಸಸಿಗಳಿಂದ ಬಂದ ಹಣದಲ್ಲಿ ಒಪ್ಪಂದದಂತೆ ಹಣ ಕೊಟ್ಟರು. ಒಪ್ಪಂದದ ನಂತರದ ಮೊದಲ ಚೆಕ್ ಇದಾಗಿದೆ.
ಜಿಲ್ಲೆಯ ಶಂಕರ ಹಲಸಿನ ತಳಿ ಮಾಲೀಕರಿಗೂ ಇದೇ ಸಮಾರಂಭದಲ್ಲಿ ₹2.40 ಲಕ್ಷದ ಚೆಕ್ ನೀಡಿದರು. ಶಂಕರ ಹಲಸಿನ ತಳಿ ಮಾಲೀಕರಿಗೆ ಈವರೆಗೆ ₹16 ಲಕ್ಷಕ್ಕೂ ಹೆಚ್ಚು ಹಣ ಸಂದಾಯವಾಗಿದೆ.
ಜಿಲ್ಲೆಯ ‘ಸಿದ್ಧು’ ಮತ್ತು ‘ಶಂಕರ’ ಹಲಸು, ನಂದಿಹಳ್ಳಿಯ ‘ಲಕ್ಷ್ಮಣ’ ಹುಣಸೆ, ಸಿ.ಎನ್.ದುರ್ಗ ಹೋಬಳಿ ಅಜ್ಜಿಹಳ್ಳಿಯ ಕುಮಾರ್ ಜಂಬು ನೇರಳೆ ತಳಿಗಳು ಸಸ್ಯ ತಳಿ ಸಂರಕ್ಷಣೆ ಮತ್ತು ರೈತ ಹಕ್ಕುಗಳ ಕಾಯ್ದೆ ಪ್ರಾಧಿಕಾರದಲ್ಲಿ ನೋಂದಣಿಯಾಗಿವೆ.
ಹೆಸರುಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ನಿರ್ದೇಶಕರಾದ ಟಿ.ಕೆ.ಬೇಹರಾ ಮತ್ತು ಹಿರೇಹಳ್ಳಿ ಕೇಂದ್ರದ ಮುಖ್ಯಸ್ಥ ಜಿ.ಕರುಣಾಕರನ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.