ಚಿಕ್ಕನಾಯಕನಹಳ್ಳಿ: ಅಖಿಲ ಭಾರತ 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ-ಜ್ಯೋತಿ ರಥಯಾತ್ರೆ ಶುಕ್ರವಾರ ತಾಲ್ಲೂಕಿಗೆ ಆಗಮಿಸಿತು.
ತಾಲ್ಲೂಕು ಆಡಳಿತ ಸೇರಿದಂತೆ ಕನ್ನಡಪರ ಸಂಘಟನೆಗಳು ಅದ್ದೂರಿಯಾಗಿ ರಥವನ್ನು ಸ್ವಾಗತಿಸಿ, ಮೆರವಣಿಗೆ ನಡೆಸಿದ ನಂತರ ರಥಯಾತ್ರೆಯನ್ನು ಬೀಳ್ಕೊಡಲಾಯಿತು.
ಗಡಿ ಗ್ರಾಮ ಗೋಪಾಲನಹಳ್ಳಿ ಬಳಿ ಸ್ವಾಗತಿಸಿ ತಾಲ್ಲೂಕಿಗೆ ಕರೆತರಲಾಯಿತು. ಅಲ್ಲಿಂದ ಶೆಟ್ಟಿಕೆರೆ ಹೋಬಳಿ ಕೇಂದ್ರದ ಮೂಲಕ ಚಿಕ್ಕನಾಯಕನಹಳ್ಳಿ ಪಟ್ಟಣಕ್ಕೆ ರಥಯಾತ್ರೆ ತೆರಳಿತು.
ಶೆಟ್ಟಿಕೆರೆ ಗೇಟ್‌ನಿಂದ ನೆಹರೂ ವೃತ್ತ ಹಾದು ಪ್ರವಾಸಿ ಮಂದಿರದವರೆಗೆ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ವಿವಿಧ ಜನಪದ ಕಲಾತಂಡಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಕನ್ನಡಪರ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
ತಾಲ್ಲೂಕು ಕಸಾಪ ಅಧ್ಯಕ್ಷ ಎಂ.ಎಸ್ ರವಿಕುಮಾರ್ ಮಾತನಾಡಿ, ಡಿಸೆಂಬರ್ 20ರಿಂದ 22ರ ವೆರೆಗೆ ಮಂಡ್ಯದಲ್ಲಿ ಆಯೋಜಿಸಲಾಗಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ರಾಜ್ಯದಾದ್ಯಂತ ಕನ್ನಡ ಜ್ಯೋತಿ ರಥಯಾತ್ರೆ ನಡೆಯುತ್ತಿದೆ ಎಂದರು.
ಮೆರವಣಿಗೆಯಲ್ಲಿ ಗ್ರೇಡ್ -2 ತಹಶೀಲ್ದಾರ್ ಕೀರ್ತಿ, ಬಿಇಒ ಕಾಂತರಾಜು, ಪುರಸಭಾ ಮಾಜಿ ಅದ್ಯಕ್ಷ ಸಿ.ಡಿ.ಚಂದ್ರಶೇಖರ್, ಜಿಲ್ಲಾ ಕಸಾಪ ಕಾರ್ಯದರ್ಶಿ ಕಂಟಲಗೆರೆ ಸಣ್ಣಹೊನ್ನಯ್ಯ, ಕನ್ನಡ ಸಂಘದ ಅಧ್ಯಕ್ಷ ಸಿ.ಬಿ.ರೇಣುಕಸ್ವಾಮಿ, ಸಿಡಿಪಿಒ ಇಲಾಖೆ ಮೇಲ್ವಿಚಾರಕಿ ರೇಖಾ, ಎಸ್‌ಐ ದ್ರಾಕ್ಷಾಯಣಮ್ಮ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.