ತೋವಿನಕೆರೆ: ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಹೆರಿಗೆ ವಾರ್ಡ್‌ನಲ್ಲಿ ವಿದ್ಯುತ್ ಸಂಪರ್ಕವಿಲ್ಲದೇ, ಮೇಣದ ಬತ್ತಿಯ ಬೆಳಕಿನಲ್ಲಿ ಹೆರಿಗೆ ಮಾಡಿಸಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.
ಕುರಂಕೋಟೆ ಪಂಚಾಯಿತಿ ವ್ಯಾಪ್ತಿಯ ಬಂಡೇಹಳ್ಳಿ ಗೊಲ್ಲರಹಟ್ಟಿಯ ನಾಗರಾಜು ಅವರ ಪತ್ನಿ ಮಂಗಳಮ್ಮ ಹೆರಿಗೆಗಾಗಿ ತೋವಿನಕೆರೆ ಆಸ್ಪತ್ರೆಗೆ ದಾಖಲಾಗಿದ್ದರು.
ಕೆಲವು ವರ್ಷದಿಂದ ಹೆರಿಗೆ ವಾರ್ಡ್ ಮಳೆ ನೀರಿನಿಂದ ಸೋರುತ್ತಿದ್ದರೂ ದುರಸ್ತಿಯಾಗಿಲ್ಲ. ನೀರು ಸೋರುವುದರಿಂದ ವಿದ್ಯುತ್ ಸ್ವಿಚ್ ಹಾಕಿದರೆ ಶಾಕ್ ಹೊಡೆಯಬಹುದು ಎನ್ನುವ ಕಾರಣದಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.
ಮಂಗಳಮ್ಮನ ಹೆರಿಗೆ ಮಾಡಲೇಬೇಕಾದ ಸ್ಥಿತಿ ಇದ್ದುದರಿಂದ ಮೇಣದ ಬತ್ತಿಗಳನ್ನು ತರಿಸಿ, ಸುತ್ತಲೂ ಹಚ್ಚಿಕೊಂಡು ಹೆರಿಗೆ ಮಾಡಿಸಲಾಗಿದೆ.
‘ತೋವಿನಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರ ಸರ್ಕಾರ ನಿಗದಿ ಪಡಿಸಿರುವುದಕ್ಕಿಂತಲೂ ಹೆಚ್ಚು ಹೆರಿಗೆಗಳನ್ನು ಮಾಡಿಸಿ ರಾಜ್ಯದಲ್ಲಿ ಹೊಸ ಇತಿಹಾಸ ಸೃಷ್ಟಿಸಿತ್ತು. ಅಂತಹ ಸ್ಥಳದಲ್ಲಿ ಹೆರಿಗೆ ವಾರ್ಡ್‌ನಲ್ಲಿ ವಿದ್ಯುತ್ ಇಲ್ಲದೆ ಮೇಣದ ಬತ್ತಿಯಲ್ಲಿ ಹೆರಿಗೆ ಮಾಡಿಸಿರುವುದು ನೋವಿನ ಸಂಗತಿ’ ಎಂದು ಮಾಜಿ ಶಾಸಕ ಪಿ.ಆರ್. ಸುಧಾಕರಲಾಲ್ ಬೇಸರ ವ್ಯಕ್ತಪಡಿಸಿದರು.
‘ಮೊಂಬತ್ತಿ ಬೆಳಕಿನಲ್ಲಿ ಹೆರಿಗೆ ಮಾಡಿಸುತ್ತಿದ್ದಾಗ ನರ್ಸ್‌ಗಳು ಬಹಳ ಅತಂಕದಲ್ಲಿದ್ದರು. ಕೊನೆಯ ಹಂತದಲ್ಲಿ ಸಮೀಪದ ಅಂಗಡಿಯವರಿಂದ ಟಾರ್ಚ್‌ಗಳನ್ನು ತಂದು ಕೊಡಲಾಗಿತ್ತು. ತೋವಿನಕೆರೆ ಸುತ್ತಮುತ್ತಲಿನ 40 ಹಳ್ಳಿಗಳ ಜನರು ಈ ಆಸ್ಪತ್ರೆಯನ್ನು ನಂಬಿಕೊಂಡಿದ್ದಾರೆ. ವರ್ಷಕ್ಕೆ ನೂರಾರು ಹೆರಿಗೆಯಾಗುತ್ತಿದೆ’ ಎನ್ನುತ್ತಾರೆ ಮಂಗಳಮ್ಮನ ಪತಿ ನಾಗರಾಜು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.