ADVERTISEMENT

ಚಿಕ್ಕನಾಯಕನಹಳ್ಳಿ: ಯರೆಕಟ್ಟೆ ಶಾಲೆಯಲ್ಲಿ ಮತ್ತೆ ಮಕ್ಕಳ ಕಲರವ

10 ವರ್ಷಗಳ ಬಳಿಕ ತೆರೆಯಿತು ಶಾಲೆಯ ಬಾಗಿಲು

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2021, 4:48 IST
Last Updated 25 ಸೆಪ್ಟೆಂಬರ್ 2021, 4:48 IST
ಯರೆಕಟ್ಟೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹತ್ತು ವರ್ಷಗಳ ನಂತರ ಮಕ್ಕಳು ದಾಖಲಾಗಿದ್ದಾರೆ
ಯರೆಕಟ್ಟೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹತ್ತು ವರ್ಷಗಳ ನಂತರ ಮಕ್ಕಳು ದಾಖಲಾಗಿದ್ದಾರೆ   

ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಬರಗೂರು ಕ್ಲಸ್ಟರ್‌ ವ್ಯಾಪ್ತಿಯ ಯರೆಕಟ್ಟೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ್ತೆ ಮಕ್ಕಳ ಕಲರವ ಆರಂಭವಾಗಿದ್ದು, ಶಾಲೆಗೆ ಮರುಜೀವ ಬಂದಿದೆ.

ಮಕ್ಕಳ ಸಂಖ್ಯೆ ಇಳಿಮುಖದಿಂದ 10 ವರ್ಷಗಳ ಹಿಂದೆ ಶಿಕ್ಷಣ ಇಲಾಖೆ ಆದೇಶದಂತೆ ಶಾಲೆಯನ್ನು ಮುಚ್ಚಲಾಗಿತ್ತು. ಶಾಲೆ ಮುಚ್ಚುವ ವೇಳೆ ಶಾಲೆಯ ವಿದ್ಯಾರ್ಥಿಗಳ ಹಾಜರಾತಿ ಸಂಖ್ಯೆ 2ಕ್ಕೆ ಇಳಿದಿತ್ತು. ನಂತರ ಶಾಲೆಯ ದಾಖಲಾತಿಗಳನ್ನು ಪಕ್ಕದ ಬರಗೂರು ಸರ್ಕಾರಿ ಶಾಲೆಗೆ ವರ್ಗಾವಣೆ ಮಾಡಲಾಗಿತ್ತು. ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಒಳಗಾಗಿದ್ದ ಕೆಲವು ಪೋಷಕರು ತಮ್ಮ ಮಕ್ಕಳನ್ನು ದೂರದ ಶಾಲೆಗಳಿಗೆ ದಾಖಲಿಸಿದ್ದರು. ಇನ್ನೂ ಕೆಲವರ ಮಕ್ಕಳು ಮಾತ್ರ ಅನಿವಾರ್ಯವಾಗಿ ಅಕ್ಕಪಕ್ಕದ ಶಾಲೆಗಳಿಗೆ ಹೋಗುತ್ತಿದ್ದರು.

ಯರೆಕಟ್ಟೆ ಗ್ರಾಮದ ಕೆಲವು ಯುವಕರು ಗ್ರಾಮದಲ್ಲಿ ಸಭೆ ನಡೆಸಿ ತಮ್ಮೂರಿನ ಶಾಲೆಯನ್ನು ಮತ್ತೆ ಪ್ರಾರಂಭಿಸುವ ಪಣತೊಟ್ಟು ಶಾಲೆಯ ಆರಂಭಕ್ಕೆ ಕಾರಣರಾಗಿದ್ದಾರೆ. ಮತ್ತೆ ಶಾಲೆಗೆ 1ರಿಂದ 5ನೇ ತರಗತಿವರೆಗೆ 17 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಹತ್ತು ವರ್ಷಗಳಿಂದ ಬಣಗೊಡುತ್ತಿದ್ದ ಶಾಲೆಯ ಕಟ್ಟಡದಲ್ಲಿ ಮತ್ತೆ ಮಕ್ಕಳ ನಗು ಚಲ್ಲಾಡುತ್ತಿದೆ.

ADVERTISEMENT

‘ಹತ್ತು ವರ್ಷಗಳ ಹಿಂದೆ ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಿದ್ದ ಶಾಲೆ ಆರಂಭಗೊಂಡಿರುವುದು ಸಂತಸ ತಂದಿದೆ. ನಾನು ಸಹ ನನ್ನ ಮಗನನ್ನು ಒಂದನೇ ತರಗತಿಗೆ ದಾಖಲು ಮಾಡಿದ್ದೇನೆ. ಮುಖ್ಯವಾಗಿ ಕೊರೊನಾ ಕಂಟಕ ಎಲ್ಲ ಕ್ಷೇತ್ರಗಳಿಗೂ ತಟ್ಟಿದೆ. ಕೊರೊನಾದಿಂದ ನಮ್ಮೂರ ಶಾಲೆ ಆರಂಭವಾಗಿದ್ದು ಜನ ಸಾಮಾನ್ಯರು ನಿಧಾನವಾಗಿ ಸರ್ಕಾರಿ ಶಾಲೆಗಳತ್ತ ಮುಖ ಮಾಡುತ್ತಿರುವುದು ಉತ್ತಮ ಬೆಳವಣಿಗೆ’ ಎಂದು ಯರೆಕಟ್ಟೆಯ ಕೆ.ದೇವರಾಜು ಹೇಳಿದರು..

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.