ADVERTISEMENT

ಮಕ್ಕಳ ಸಾವು: ಸ್ವಯಂಪ್ರೇರಿತ ದೂರು

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಕೆ.ಟಿ ತಿಪ್ಪೇಸ್ವಾಮಿ ಮಾಹಿತಿ

​ಪ್ರಜಾವಾಣಿ ವಾರ್ತೆ
Published 8 ಜನವರಿ 2024, 7:16 IST
Last Updated 8 ಜನವರಿ 2024, 7:16 IST
ಕೊರಟಗೆರೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಕೆ.ಟಿ. ತಿಪ್ಪೇಸ್ವಾಮಿ ಅಧಿಕಾರಿಗಳ ಸಭೆ ನಡೆಸಿದರು
ಕೊರಟಗೆರೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಕೆ.ಟಿ. ತಿಪ್ಪೇಸ್ವಾಮಿ ಅಧಿಕಾರಿಗಳ ಸಭೆ ನಡೆಸಿದರು   

ಕೊರಟಗೆರೆ: ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಸಾರಿಗೆ ಸಂಪರ್ಕ ಇಲ್ಲದೆ ಮಕ್ಕಳು ಪರದಾಡುತ್ತಿದ್ದಾರೆ. ಕಡಿಮೆ ಬಸ್ ಸಂಪರ್ಕ ಇರುವ ಪ್ರದೇಶಗಳಲ್ಲಿ ಬಸ್ ಹತ್ತುವ ವೇಳೆ ಮಕ್ಕಳು ಗಾಯಗೊಂಡು ಮೃತಪಟ್ಟಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಸ್ವಯಂಪ್ರೇರಿತ ದೂರು ದಾಖಲಿಸಲಾಗಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಕೆ.ಟಿ ತಿಪ್ಪೇಸ್ವಾಮಿ ತಿಳಿಸಿದರು.

ತಾಲ್ಲೂಕಿನ ಮೆಟ್ರಿಕ್ ಪೂರ್ವ ಬಾಲಕರ, ಬಾಲಕಿಯರ ವಸತಿ ನಿಲಯ, ತಾಲ್ಲೂಕು ಆಸ್ಪತ್ರೆ, ಪೋಲಿಸ್ ಠಾಣೆಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ತಾಲ್ಲೂಕಿನ ಗ್ರಾಮೀಣ ಮಕ್ಕಳು ಬಸ್ ಸಮಸ್ಯೆ ಬಗ್ಗೆ ಮನವಿ ಮಾಡಿದ್ದು, ಕೆಎಸ್ಆರ್‌ಟಿಸಿ ಅಧಿಕಾರಿಗಳಿಗೆ ಮಕ್ಕಳ ಸ್ನೇಹಿ ಸಾರಿಗೆ ವ್ಯವಸ್ಥೆಯನ್ನು ರೂಪಿಸಿಕೊಳ್ಳುವಂತೆ ತಿಳಿಸಲಾಗಿದೆ ಎಂದರು.

ADVERTISEMENT

ಸರ್ಕಾರಿ, ಖಾಸಗಿ ಸೇರಿದಂತೆ ವಿವಿಧ ಇಲಾಖೆಗಳಡಿ ಕಾರ್ಯನಿರ್ವಹಿಸುವ ಶಾಲೆಗಳಲ್ಲಿ ಕಡ್ಡಾಯವಾಗಿ ಮಕ್ಕಳ ಸುರಕ್ಷತಾ ಸಮಿತಿ ರಚಿಸಬೇಕು. ಮಕ್ಕಳ ರಕ್ಷಣಾ ನೀತಿ 2016ರ ಪರಿಣಾಮಕಾರಿ ಅನುಷ್ಠಾನಕ್ಕೆ ಎಲ್ಲ ಹಂತದ ಅಧಿಕಾರಿಗಳು ಪ್ರಯತ್ನಿಸಿಬೇಕು ಎಂದರು.

ಮಕ್ಕಳ ರಕ್ಷಣಾ ನೀತಿ ಅನುಷ್ಠಾನದ ಕಾರ್ಯಸೂಚಿಗಳನ್ನು ಈಗಾಗಲೇ ಹೊರಡಿಸಲಾಗಿದೆ. ಪ್ರತಿ ಶಾಲೆಗಳಲ್ಲೂ ಮಕ್ಕಳ ಸುರಕ್ಷತಾ ಸಮಿತಿ, ಮಕ್ಕಳ ಸಹಾಯ ಗುಂಪು ರಚನೆ ಮಾಡಬೇಕು. ದೂರು ಪೆಟ್ಟಿಗೆಗಳನ್ನು ಕಡ್ಡಾಯವಾಗಿ ಶಾಲೆಗಳಲ್ಲಿ ಇಡಬೇಕು. ಎಲ್ಲ ಖಾಸಗಿ ಶಾಲೆಗಳ ಆರಂಭಕ್ಕೂ ಮುನ್ನಾ ಆಡಳಿತ ಮಂಡಳಿಗಳು ಮಕ್ಕಳ ರಕ್ಷಣಾ ಬದ್ಧತೆ ಪತ್ರಕ್ಕೆ ಕಡ್ಡಾಯವಾಗಿ ಸಹಿ ಹಾಕಬೇಕು. ಮುಂದಿನ ಸಭೆಯಲ್ಲಿ ಇಂದು ಚರ್ಚಿಸಲಾದ ವಿಷಯಗಳು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬಂದು ನಿರಂತರ ಪ್ರಗತಿ ಪರಿಶೀಲನಾ ಸಭೆ ನಡೆಸಬೇಕು ಎಂದು ಹೇಳಿದರು.

ತಹಶೀಲ್ದಾರ್ ಕೆ.ಮಂಜುನಾಥ್, ತಾಲ್ಲೂಕು ಪಂಚಾಯಿತಿ ಇಒ ಅಪೂರ್ವ, ಸಿಪಿಐ ಆರ್.ಪಿ. ಅನಿಲ್, ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಅನುಷಾ, ಜಿಲ್ಲಾ ಮಹಿಳಾ ಅಭಿವೃದ್ಧಿ ಅಧಿಕಾರಿ ಪವಿತ್ರ, ಸಿಡಿಪಿಒ ಅಂಬಿಕಾ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

ತಾಲ್ಲೂಕು ಆಸ್ಪತ್ರೆಯ ವ್ಯವಸ್ಥೆ ಬದಲಾಗಲಿ

ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡಿದ್ದಾಗ ಎನ್‌ಆರ್‌ಸಿ ವಾರ್ಡ್‌ಗೆ ಬೀಗ ಹಾಕಿತ್ತು. ತೆರೆಸಿ ನೋಡಿದಾಗ ದೂಳು ಹಿಡಿದಿರುವುದು ಕಂಡು ಬಂತು. ಸ್ಥಳದಲ್ಲೇ ತನಿಖಾಧಿಕಾರಿಗೆ ವಾರ್ಡ್ ಶುಚಿ ಮಾಡುವಂತೆ ಸೂಚಿಸಲಾಯಿತು. ಬಾಣಂತಿಯರ ವಾರ್ಡ್‌ನಲ್ಲಿ ಬಿಸಿ ನೀರಿನ ವ್ಯವಸ್ಥೆ ಇಲ್ಲ ಎಂಬ ದೂರು ಕೇಳಿ ಬಂತು. ಸಾರ್ವಜನಿಕ ಆಸ್ಪತ್ರೆಯಲ್ಲಿ ವ್ಯವಸ್ಥೆ ಸಾಕಷ್ಟು ಬದಲಾಗಬೇಕಿದೆ. ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ಟಿ.ಕೆ. ತಿಪ್ಪೇಸ್ವಾಮಿ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.