ADVERTISEMENT

ತುಮಕೂರು | ಸೇತುವೆ ಕಾಮಗಾರಿ ಪೂರ್ಣಕ್ಕೆ ಆಗ್ರಹ: ಸಿಐಟಿಯು ವತಿಯಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 5:45 IST
Last Updated 27 ಅಕ್ಟೋಬರ್ 2024, 5:45 IST
<div class="paragraphs"><p>ತುಮಕೂರು ತಾಲ್ಲೂಕಿನ ರಂಗಾಪುರದ ಬಳಿ ಶುಕ್ರವಾರ ಸಂಜೆ ರಾಷ್ಟ್ರೀಯ ಹೆದ್ದಾರಿ 48ರ ಸರ್ವೀಸ್‌ ರಸ್ತೆ ದುರಸ್ತಿ, ಮೇಲ್ಸೇತುವೆ ಕಾಮಗಾರಿ ಪೂರ್ಣಕ್ಕೆ ಆಗ್ರಹಿಸಿ ಸಿಐಟಿಯು ವತಿಯಿಂದ ಪ್ರತಿಭಟನೆ ನಡೆಯಿತು.&nbsp;</p></div>

ತುಮಕೂರು ತಾಲ್ಲೂಕಿನ ರಂಗಾಪುರದ ಬಳಿ ಶುಕ್ರವಾರ ಸಂಜೆ ರಾಷ್ಟ್ರೀಯ ಹೆದ್ದಾರಿ 48ರ ಸರ್ವೀಸ್‌ ರಸ್ತೆ ದುರಸ್ತಿ, ಮೇಲ್ಸೇತುವೆ ಕಾಮಗಾರಿ ಪೂರ್ಣಕ್ಕೆ ಆಗ್ರಹಿಸಿ ಸಿಐಟಿಯು ವತಿಯಿಂದ ಪ್ರತಿಭಟನೆ ನಡೆಯಿತು. 

   

ತುಮಕೂರು: ರಾಷ್ಟ್ರೀಯ ಹೆದ್ದಾರಿ 48ರ ಸರ್ವೀಸ್‌ ರಸ್ತೆ ದುರಸ್ತಿ, ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಕ್ಕೆ ಆಗ್ರಹಿಸಿ ಸಿಐಟಿಯು ವತಿಯಿಂದ ತಾಲ್ಲೂಕಿನ ರಂಗಾಪುರದ ಬಳಿ ಶುಕ್ರವಾರ ಸಂಜೆ ಪ್ರತಿಭಟನೆ ನಡೆಯಿತು.

‘ಹೆದ್ದಾರಿ ಮೂರು–ನಾಲ್ಕು ರಾಜ್ಯ, ಸುಮಾರು 18 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಅಂತರಸನಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ರಂಗಾಪುರದ ಬಳಿ ಹೆದ್ದಾರಿಯಲ್ಲಿ ಮೇಲ್ಸೇತುವೆ ನಿರ್ಮಿಸಲಾಗುತ್ತಿದೆ. ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಕಳೆದ 7 ತಿಂಗಳಿನಿಂದ ಕೆಲಸ ಸ್ಥಗಿತಗೊಂಡಿದೆ’ ಎಂದು ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಸೈಯದ್‌ ಮುಜೀಬ್‌ ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ನಿತ್ಯ ನೂರಾರು ವಾಹನಗಳು ರಸ್ತೆಯಲ್ಲಿ ಸಂಚರಿಸುತ್ತವೆ. ಶಾಲಾ–ಕಾಲೇಜು ವಿದ್ಯಾರ್ಥಿಗಳು, ರೈತರು, ಕಾರ್ಮಿಕರು ಓಡಾಡುತ್ತಾರೆ. ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ಎಲ್ಲ ವಾಹನ ಸರ್ವೀಸ್‌ ರಸ್ತೆಯಲ್ಲಿ ಸಾಗುತ್ತಿದ್ದು ರಸ್ತೆ ಸಂಪೂರ್ಣವಾಗಿ ಹಾಳಾಗಿದೆ. ಗುಂಡಿಗಳು ಬಿದ್ದಿದ್ದು, ಜೀವ ಕೈಯಲ್ಲಿಡಿದು ಸಂಚರಿಸಬೇಕಿದೆ ಎಂದರು.

ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್‌.ಕೆ.ಸುಬ್ರಮಣ್ಯ, ‘ಕಾಮಗಾರಿ ವಿಳಂಬದಿಂದ ಪ್ರತಿ ದಿನ ವಾಹನ ದಟ್ಟಣೆ ಉಂಟಾಗುತ್ತದೆ. ಹಬ್ಬದ ಸಮಯ, ವಾರಾಂತ್ಯದಲ್ಲಿ ಸುಮಾರು 10 ಕಿ.ಮೀ ಉದ್ದ ವಾಹನಗಳು ನಿಂತಿರುತ್ತವೆ. ವಾಹನ ಸವಾರರು ರಸ್ತೆ ದಾಟಲು ಪರದಾಡುತ್ತಾರೆ. ಕಾಮಗಾರಿಗೆ ವೇಗ ನೀಡಿ ನಿಗದಿತ ಸಮಯದಲ್ಲಿ ಕೆಲಸ ಪೂರ್ಣಗೊಳಿಸಬೇಕು’ ಎಂದು ಆಗ್ರಹಿಸಿದರು.

ಸಿಪಿಐ ಜಿಲ್ಲಾ ಕಾರ್ಯದರ್ಶಿ ಗಿರೀಶ್‌, ಸಿಐಟಿಯು ಪದಾಧಿಕಾರಿಗಳಾದ ಎ.ಲೋಕೇಶ್, ಬಿ.ಉಮೇಶ್, ಸುಜಿತ್‌ ನಾಯಕ್‌, ಷಣ್ಮುಖಪ್ಪ, ರಂಗಧಾಮಯ್ಯ, ಶಿವಕುಮಾರಸ್ವಾಮಿ, ಪುಟ್ಟೇಗೌಡ, ರಾಮಕೃಷ್ಣ, ಮಂಜುನಾಥ್, ಅಜ್ಜಪ್ಪ, ರಾಜಮ್ಮ, ಟಿ.ಆರ್‌.ಕಲ್ಪನಾ, ವಾಸಿಂ ಅಕ್ರಂ ಇತರರು ಪಾಲ್ಗೊಂಡಿದ್ದರು.

ತಡಬಡಾಯಿಸಿದ ಅಧಿಕಾರಿ

ಮನವಿ ಸ್ವೀಕರಿಸಲು ಬಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಪ್ರತಿಭಟನಕಾರರ ಪ್ರಶ್ನೆಗಳಿಗೆ ಉತ್ತರಿಸಲು ತಡಬಡಾಯಿಸಿದರು. ಸರಿಯಾಗಿ ಕನ್ನಡ ಮಾತನಾಡಲು ಬಾರದೆ ಪೇಚಿಗೆ ಸಿಲುಕಿದರು. ಮುಂದಿನ 3 ದಿನದಲ್ಲಿ ಸರ್ವೀಸ್‌ ರಸ್ತೆಯಲ್ಲಿನ ಗುಂಡಿ ಮುಚ್ಚಿಸಲಾಗುವುದು. ಡಾಂಬರೀಕರಣಕ್ಕೆ ಕ್ರಮಕೈಗೊಳ್ಳಲಾಗುವುದು. ಮೇಲ್ಸೇತುವೆ ನಿರ್ಮಾಣ ಕಾರ್ಯಕ್ಕೆ ಶೀಘ್ರವೇ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.