ತುಮಕೂರು: ಮಹಾನಗರ ಪಾಲಿಕೆ ವ್ಯಾಪ್ತಿಯ ಪೌರ ಕಾರ್ಮಿಕರ ಆರೋಗ್ಯ ತಪಾಸಣೆಯಲ್ಲಿ ಅಕ್ರಮ ನಡೆದಿದ್ದು, ತನಿಖೆ ನಡೆಸುವಂತೆ ಸಾಮಾಜಿಕ ಕಾರ್ಯಕರ್ತರು ಮುಖ್ಯಮಂತ್ರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಅಕ್ರಮದ ಬಗ್ಗೆ ದೂರುಗಳು ಕೇಳಿಬಂದ ನಂತರ ಪಾಲಿಕೆ ಆಯುಕ್ತರು ತನಿಖೆಗೆ ಆದೇಶಿಸಿದ್ದರು. ಪಾಲಿಕೆಯ ಉಪ ಆಯುಕ್ತ (ಆಡಳಿತ), ಮುಖ್ಯ ಲೆಕ್ಕಾಧಿಕಾರಿ, ಪಾಲಿಕೆ ಆರೋಗ್ಯಾಧಿಕಾರಿ ನೇತೃತ್ವದ ತಂಡ ತನಿಖೆ ನಡೆಸಿ, ಆರೋಗ್ಯ ತಪಾಸಣೆಯಲ್ಲಿ ಅಕ್ರಮ ನಡೆದಿರುವುದನ್ನು ಗುರುತಿಸಿದೆ. ಹಾಗಾಗಿ ಇಲಾಖಾ ಹಂತದಲ್ಲಿ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಹೋರಾಟಗಾರ ಇಮ್ರಾನ್ ಪಾಷ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಎಸ್‌ಸಿಎಸ್‌ಪಿ, ಟಿಎಸ್‌ಪಿ ಯೋಜನೆಯಲ್ಲಿ 2021ರಲ್ಲಿ ಪೌರ ಕಾರ್ಮಿಕರ ‘ಸಮಗ್ರ ಆರೋಗ್ಯ ತಪಾಸಣೆ’ ನಡೆಸಿದ್ದು, ಅದಕ್ಕಾಗಿ ₹29.6 ಲಕ್ಷ ವೆಚ್ಚ ಮಾಡಲಾಗಿದೆ. ನಗರದ ಶ್ರೀದೇವಿ ಚಾರಿಟಬಲ್ ಟ್ರಸ್ಟ್‌ಗೆ ಇದರ ಜವಾಬ್ದಾರಿ ವಹಿಸಲಾಗಿತ್ತು. 87 ಮಹಿಳಾ ಹಾಗೂ 383 ಪುರುಷ ಪೌರ ಕಾರ್ಮಿಕರು ಸೇರಿ ಒಟ್ಟು 471 ಮಂದಿಗೆ ಆರೋಗ್ಯ ತಪಾಸಣೆ ನಡೆಸಿ ಹಣ ಪಾವತಿಸಲಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾ ಮಟ್ಟದ ಸರ್ಕಾರಿ ಆಸ್ಪತ್ರೆ ಇದ್ದರೂ ಖಾಸಗಿ ಆಸ್ಪತ್ರೆಗೆ ವಹಿಸಿದ್ದು, ಸ್ವಜನ ಪಕ್ಷಪಾತದ ಗುಮಾನಿ ಇದೆ. ಎಲ್ಲಾ ಮಹಿಳಾ ಪೌರ ಕಾರ್ಮಿಕರಿಗೂ ಗರ್ಭಕೋಶ, ಸ್ತನ ಕ್ಯಾನ್ಸರ್ ತಪಾಸಣೆ ಮಾಡಿಸಿಲ್ಲ. ಗರ್ಭಕೋಶ, ಸ್ತನ ಕ್ಯಾನ್ಸರ್ ತಪಾಸಣೆಗೆ ವಿಧಿಸುವಷ್ಟೇ ಶುಲ್ಕವನ್ನು ಪುರುಷರ ಆರೋಗ್ಯ ತಪಾಸಣೆಗೂ ವಿಧಿಸಲಾಗಿದೆ. ಮಹಿಳೆಯರು ಹಾಗೂ ಪುರುಷರ ತಪಾಸಣೆಯ ಪ್ರತ್ಯೇಕ ಪಟ್ಟಿ ಸಿದ್ಧಪಡಿಸದೆ ಇಬ್ಬರಿಗೂ ಏಕ ರೀತಿಯಲ್ಲಿ ದರ ನಿಗದಿಪಡಿಸಿ ಅಕ್ರಮ ಎಸಗಲಾಗಿದೆ ಎಂದು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.