ADVERTISEMENT

ಮುಖ್ಯಮಂತ್ರಿ ಗಾದಿಗೆ ಕಾಂಗ್ರೆಸ್‌ನಲ್ಲಿ ಕಲಹ: ಟೀಕೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2024, 16:21 IST
Last Updated 29 ಜೂನ್ 2024, 16:21 IST
ಬಿ.ಸುರೇಶ್‌ಗೌಡ
ಬಿ.ಸುರೇಶ್‌ಗೌಡ   

ತುಮಕೂರು: ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸ್ಥಾನಕ್ಕೆ ನಡೆಯುತ್ತಿರುವ ಚರ್ಚೆಗಳು ಹಾದಿ, ಬೀದಿ ರಂಪ ಮಾಡಿವೆ. ಪೂರ್ಣ ಬಹುಮತ ಕೊಟ್ಟು ಅಧಿಕಾರಕ್ಕೆ ತಂದ ಜನರು ಪಶ್ಚಾತ್ತಾಪ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಬಿ.ಸುರೇಶ್‌ಗೌಡ ಟೀಕಿಸಿದ್ದಾರೆ.

ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ನೇರವಾಗಿ ಸಡ್ಡು ಹೊಡೆದಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದನ್ನು ತೋರಿಸುತ್ತದೆ ಎಂದು ದೂರಿದ್ದಾರೆ.

ಜನರು ಅಧಿಕಾರ ಕೊಡುವುದು ಜನಪರವಾಗಿ ಕೆಲಸ ಮಾಡಿ ರಾಜ್ಯವನ್ನು ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋಗಲೆಂದು. ಆದರೆ ಅನುಭವಿ ರಾಜಕಾರಣಿ, 15 ಬಾರಿ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಅವರಂತಹವರೇ ಮುಖ್ಯಮಂತ್ರಿ ಆಗಿದ್ದರೂ ರಾಜ್ಯದ ಆಡಳಿತ ತಿಕ್ಕು ತಪ್ಪಿದೆ ಎಂದು ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

ADVERTISEMENT

ಹುಸಿ ಗ್ಯಾರಂಟಿ ಯೋಜನೆಗಳ ಬಗ್ಗೆ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿರುವ ಸಿದ್ದರಾಮಯ್ಯ ಈಗ ಒಂದೊಂದೇ ಬೆಲೆ ಏರಿಸುತ್ತಿದ್ದಾರೆ. ಮುಂಗಾರು ಮಳೆ ಬೀಳುತ್ತಿದ್ದು, ರೈತರಿಗೆ ಸಕಾಲಕ್ಕೆ ಬಿತ್ತನೆ ಬೀಜ, ಗೊಬ್ಬರ ಪೂರೈಕೆ ಮಾಡುತ್ತಿಲ್ಲ ಎಂದು ದೂರಿದ್ದಾರೆ.

‘ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮೀಜಿ ಅವರು ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಹುದ್ದೆ ತ್ಯಾಗ ಮಾಡಬೇಕು’ ಎಂದು ಕರೆ ನೀಡಿರುವುದು ಗದ್ದುಗೆಯ ಗುದ್ದಾಟ ಎಲ್ಲಿಗೆ ಬಂದು ಮುಟ್ಟಿದೆ ಎನ್ನುವುದಕ್ಕೆ ಒಂದು ನಿದರ್ಶನವಾಗಿದೆ. ಇದು ರಾಜ್ಯದಲ್ಲಿ ಹಿಂದೆಂದೂ ಕೇಳರಿಯದ ಸಂಗತಿಯಾಗಿದೆ ಹೇಳಿದ್ದಾರೆ.

ನಿತ್ಯವೂ ಹೈಕಮಾಂಡ್ ಜಪ ಮಾಡುತ್ತಾ ಹಾದಿ, ಬೀದಿಯಲ್ಲಿ ಪಕ್ಷದ ವಿದ್ಯಮಾನಗಳನ್ನು ಚರ್ಚೆ ಮಾಡುತ್ತಿರುವುದನ್ನು ನೋಡಿದರೆ ಕಾಂಗ್ರೆಸ್‌ನಲ್ಲಿ ನಾಯಕತ್ವ ಇಲ್ಲ ಎನ್ನುವುದರ ಸಂಕೇತವಾಗಿದೆ. ಬೀದಿಗಿಳಿದು ಹೊಡೆದಾಡಿಕೊಳ್ಳಲಿ. ಆದರೆ, ರಾಜ್ಯದ ಜನರ ಸಂಕಷ್ಟಗಳಿಗೆ ಮೊದಲು ಸ್ಪಂದಿಸಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯ ಸರ್ಕಾರದಲ್ಲಿ ಅಂತಃಕಲಹ ಮೇರೆ ಮೀರಿದ್ದು, ದುರ್ಬಲವಾಗಿರುವ ಕಾಂಗ್ರೆಸ್ ಹೈಕಮಾಂಡ್ ಅದನ್ನು ನಿಯಂತ್ರಿಸುವ ಶಕ್ತಿ ಕಳೆದುಕೊಂಡಿದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಎರಡು ಅಂಕಿ ದಾಟದಂತೆ ಜನರು ನೋಡಿಕೊಂಡಿರುವುದನ್ನು ಗಮನಿಸಿದರೆ ರಾಜ್ಯದ ಭವಿಷ್ಯದ ರಾಜಕಾರಣ ಯಾವ ದಿಕ್ಕಿನತ್ತ ಸಾಗುತ್ತಿದೆ ಎಂಬುದು ತಿಳಿಯುತ್ತದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.