ADVERTISEMENT

ಶುಚಿ, ರುಚಿ ‘ಪರಿಮಳ’ ಹೋಟೆಲ್‌

​ಪ್ರಜಾವಾಣಿ ವಾರ್ತೆ
Published 30 ಜೂನ್ 2024, 6:01 IST
Last Updated 30 ಜೂನ್ 2024, 6:01 IST
ಕುಣಿಗಲ್‌ ಪಟ್ಟಣದ ಪರಿಮಳ ಹೋಟೆಲ್‌
ಕುಣಿಗಲ್‌ ಪಟ್ಟಣದ ಪರಿಮಳ ಹೋಟೆಲ್‌   

ಕುಣಿಗಲ್: ಪಟ್ಟಣದಲ್ಲಿ 43 ವರ್ಷಗಳಿಂದ ಗುಣಮಟ್ಟದ ಆಹಾರದ ಜತೆಗೆ ಪರಿ ಶುದ್ಧತೆಗೆ ಹೆಸರಾಗಿರುವ ಪರಿಮಳ ಹೋಟೆಲ್ ನಿತ್ಯವೂ ಸಾವಿರಾರು ಗ್ರಾಹಕರನ್ನು ಸೆಳೆದು ಸಂತೃಪ್ತಿ ಪಡಿಸುತ್ತಿದೆ.

ತಾಲ್ಲೂಕು ಕೇಂದ್ರದಲ್ಲಿರುವ ಒಂದು ಉತ್ತಮ ಹೋಟೆಲ್‌ ಎಂಬ ಹೆಸರು ಪಡೆದಿದೆ. ಪಟ್ಟಣ ಸೇರಿದಂತೆ ಹೊರ ಊರುಗಳಿಂದ ಬಂದವರಿಗೆ ಹೊರೆಯಾಗದಂತೆ ಊಟ, ತಿಂಡಿ ಜತೆಗೆ ಉತ್ತರ ಭಾರತ ಶೈಲಿಯ ಆಹಾರ ಪೂರೈಸುತ್ತಿದೆ. ಇಡ್ಲಿ, ಚಿತ್ರಾನ್ನ, ಅನ್ನ– ಸಾಂಬಾರ್‌ ಇತರೆ ಆಹಾರ ಪದಾರ್ಥಗಳು ಪರಿಮಳದಲ್ಲಿ ಲಭ್ಯವಿದೆ.

ಪಟ್ಟಣದ ಬಹುತೇಕ ಜನರಿಗೆ ಪರಿಮಳ ಕಾಫಿ, ಟೀ ಸೇವನೆಯ ನಂತರವೇ ದಿನಚರಿ ಪ್ರಾರಂಭವಾಗುತ್ತದೆ. ಹೋಟೆಲ್‌ ಸದಾ ಕಾಲ ಗ್ರಾಹಕರಿಂದ ತುಂಬಿರುತ್ತದೆ. ವಾರಾಂತ್ಯದ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಿರುತ್ತದೆ. ಹೋಟೆಲ್‌ನ ಇಡ್ಲಿಯ ರುಚಿ ನೋಡಲು ಆಹಾರ ಪ್ರಿಯರು ಇತ್ತ ಬರುತ್ತಾರೆ.

ADVERTISEMENT

ಕೃಷ್ಣಮೂರ್ತಿ ಹೆಬ್ಬಾರ್ ಮಾಲೀಕತ್ವದ ಪರಿಮಳ ಹೋಟೆಲ್ 1981ರಲ್ಲಿ ಪ್ರಾರಂಭವಾಯಿತು. ಅವರ ನಂತರ ಮಗ ರಾಘವೇಂದ್ರ ಹೆಬ್ಬಾರ್ ನೇತೃತ್ವದಲ್ಲಿ ಮುಂದುವರೆದಿದೆ. ಕಾಲಕ್ಕೆ ತಕ್ಕಂತೆ, ಗ್ರಾಹಕರ ಅಭಿರುಚಿಗೆ ತಕ್ಕಂತೆ ಬದಲಾವಣೆ ಮಾಡಿಕೊಂಡು ಇದೀಗ ಆಧುನಿಕತೆಯ ಸ್ಪರ್ಶ ನೀಡಲಾಗಿದೆ. ದಿನಕ್ಕೊಂದರಂತೆ ವಿಶೇಷತೆಯಲ್ಲಿ ಸಸ್ಯಾಹಾರ ಸಿದ್ಧಪಡಿಸಿ ಗ್ರಾಹಕರಿಗೆ ಉಣಬಡಿಸಲಾಗುತ್ತಿದೆ. ನಿಯಮಾವಳಿಗಳ ಪ್ರಕಾರ ದರಪಟ್ಟಿ ಪ್ರಕಟಿಸಿದೆ.

ಗ್ರಾಹಕರ ಅನುಕೂಲಕ್ಕಾಗಿ ಶುದ್ಧ ಕುಡಿಯುವ ನೀರಿನ ಘಟಕ ವ್ಯವಸ್ಥೆ ಮಾಡಲಾಗಿದೆ. ಹೋಟೆಲ್‌ ನಿರ್ವಹಣೆಗೂ ಆದ್ಯತೆ ಕೊಟ್ಟಿದ್ದಾರೆ. ‘ಗ್ರಾಹಕ ನೀಡುವ ಹಣಕ್ಕೆ ಮೋಸವಾಗದಂತೆ ಸೇವೆ ನೀಡುವುದೇ ಗುರಿಯಾಗಿದೆ. ಪ್ರಸ್ತುತ ದರದಲ್ಲಿ ಗುಣಮಟ್ಟದ ಆಹಾರ ನೀಡುವುದು ಕಷ್ಟವಾಗಿದ್ದರೂ, ಉತ್ತಮ ಗುಣಮಟ್ಟದ ದಿನಸಿ ಪದಾರ್ಥ ಬಳಸಿ ನೀಡಲಾಗುತ್ತಿದೆ’ ಎಂದು ರಾಘವೇಂದ್ರ ಹೆಬ್ಬಾರ್‌ ಪ್ರತಿಕ್ರಿಯಿಸಿದರು.

‘ಪಟ್ಟಣದಲ್ಲಿ ಸಾರ್ವಜನಿಕ ಶೌಚಾಲಯ ಅವ್ಯವಸ್ಥೆಯಿಂದ ಕೂಡಿರುವ ಕಾರಣಕ್ಕೆ ಹೆಚ್ಚಿನ ಸಂಖ್ಯೆಯ ಜನರು ಪರಿಮಳ ಹೋಟೆಲ್‌ನತ್ತ ಬರುತ್ತಾರೆ. ತಿಂಡಿ, ಊಟ, ಕಾಫಿ ಜತೆಗೆ ಶೌಚಾಲಯ ಬಳಕೆಯೂ ಜನರಿಗೆ ಲಭ್ಯವಾಗಿದೆ’ ಎಂದು ಗ್ರಾಹಕ ಸುಪ್ರೀತ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.