ಕೊರಟಗೆರೆ: ಇಲ್ಲಿನ ಗಂಗಾಧರೇಶ್ವರ ಬೆಟ್ಟದ ಮೇಲಿನ ಕಲ್ಯಾಣಿಯನ್ನು ಪಟ್ಟಣ ಪಂಚಾಯಿತಿಯಿಂದ ಸ್ವಚ್ಛಗೊಳಿಸಲಾಯಿತು.
ಬಹಳ ವರ್ಷಗಳಿಂದ ಕಲ್ಯಾಣಿಯಲ್ಲಿ ನೀರು ನಿಂತು ಮಲಿನವಾಗಿದ್ದರಿಂದ ಹಾಗೂ ಈಚೆಗೆ ಪಟ್ಟಣದ ವ್ಯಕ್ತಿಯೊಬ್ಬರು ಕಾಲು ಜಾರಿ ಬಿದ್ದು ಮೃತಪಟ್ಟಿದ್ದರಿಂದ ಸ್ವಚ್ಛ ಮಾಡಲಾಗಿದೆ.
ಸದಸ್ಯ ಎ.ಡಿ.ಬಲರಾಮಯ್ಯ ಮಾತನಾಡಿ, ಕಲ್ಯಾಣಿಯಲ್ಲಿ ಹೂಳು ತುಂಬಿಕೊಂಡಿತ್ತು. ದೇವಸ್ಥಾನದ ಕಾರ್ಯಗಳಿಗೆ ಇದೇ ನೀರನ್ನು ನಿತ್ಯ ಬಳಸಲಾಗುತ್ತದೆ. ಬೆಟ್ಟದ ತಪ್ಪಲಿನಿಂದ ದನಕರು ಮೇಯಿಸಲು ಬರುವವರು ಈ ದೊಣೆ ನೀರಿನಿಂದ ದಣಿವಾರಿಸಿಕೊಳ್ಳುತ್ತಾರೆ. ದೊಣೆಯಲ್ಲಿ ಆಕಸ್ಮಿಕವಾಗಿ ಜನರು ಬೀಳುವ ಸಾಧ್ಯತೆ ಇದುದ್ದರಿಂದ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರು ಸೇರಿ ಕಲ್ಯಾಣಿ ಶುದ್ಧೀಕರಿಸುತ್ತಿದ್ದೇವೆ ಎಂದರು.
ಪಟ್ಟಣ ಪಂಚಾಯಿತಿ ಸದಸ್ಯ ಲಕ್ಷ್ಮಿನಾರಾಯಣ ಮಾತನಾಡಿ, ಗಂಗಾಧರೇಶ್ವರ ದೇವಸ್ಥಾನಕ್ಕೆ ಪುರಾತನ ಇತಿಹಾಸವಿದೆ. ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿದೆ. ಆದರೆ ದೇಗುಲಕ್ಕೆ ಮೂಲ ಸೌಕರ್ಯದ ಕೊರತೆ ಇದೆ. ದೇವಾಲಯಕ್ಕೆ ಬರುವ ಅನೇಕರು ಈ ದೊಣೆಯಲ್ಲಿ ಕಾಲು ಜಾರಿ ಬೀಳುವ ಸಂಭವವಿದೆ. ಪಟ್ಟಣ ಪಂಚಾಯಿತಿಯಿಂದ ಕಲ್ಯಾಣಿ ಶುದ್ಧೀಕರಣ ಮಾಡಲಾಗಿದೆ. ಮುಂದೆ ಕಲ್ಯಾಣಿ ಪುನಃಶ್ಚೇತನ ಕಾಮಗಾರಿ ಕೈಗೆತ್ತಿಕೊಳ್ಳುವ ಉದ್ದೇಶವಿದೆ ಎಂದರು.
ಸದಸ್ಯರಾದ ಪುಟ್ಟನರಸಯ್ಯ, ಕೆ.ಆರ್ ಓಬಳರಾಜು, ನಾಗರಾಜು, ನಂದೀಶ್, ಮುಖಂಡರಾದ ಸತ್ಯನಾರಾಯಣ್, ಗಣೇಶ್, ತುಂಗಾ ಮಂಜುನಾಥ್, ಸುನೀಲ್, ಗೋಪಿನಾಥ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.