ADVERTISEMENT

ತುಮಕೂರು: ಜ.24ರಂದು ಕೊಬ್ಬರಿ ಖರೀದಿ ಕೇಂದ್ರ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2024, 6:00 IST
Last Updated 23 ಜನವರಿ 2024, 6:00 IST
ಬಿ.ಸುರೇಶ್‌ಗೌಡ
ಬಿ.ಸುರೇಶ್‌ಗೌಡ   

ತುಮಕೂರು: ಸರ್ಕಾರ ಫೆ.1ರಿಂದ ನಾಫೆಡ್‌ ಮೂಲಕ ಕೊಬ್ಬರಿ ಖರೀದಿಗೆ ಮುಂದಾಗಿದ್ದು, ಜ.24ರಂದು ಬೆಳಗ್ಗೆ 11 ಗಂಟೆಗೆ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಕೊಬ್ಬರಿ ಖರೀದಿ ಕೇಂದ್ರ ಉದ್ಘಾಟಿಸಲಿದ್ದಾರೆ.

‘ಕಳೆದ ವರ್ಷ ಕ್ವಿಂಟಲ್‌ ಕೊಬ್ಬರಿ ಬೆಲೆ ₹8 ಸಾವಿರಕ್ಕೆ ಕುಸಿದಿತ್ತು. ₹13 ಸಾವಿರ ಬೆಂಬಲ ಬೆಲೆ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಈಗ ₹12 ಸಾವಿರ ನಿಗದಿ ಪಡಿಸಿದೆ. ಕೊಬ್ಬರಿ ಖರೀದಿ ಮತ್ತು ನೋಂದಣಿಗೆ ಸರ್ಕಾರ ಇದೀಗ ಅವಕಾಶ ಕಲ್ಪಿಸಿದೆ ಎಂದು ಶಾಸಕ ಬಿ.ಸುರೇಶ್‌ಗೌಡ ಇಲ್ಲಿ ಸೋಮವಾರ ತಿಳಿಸಿದರು.

ರಾಜ್ಯ ಸರ್ಕಾರ ಕೊಬ್ಬರಿ ಖರೀದಿಗೆ ವಿಳಂಬ ನೀತಿ ಅನುಸರಿಸುತ್ತಿದೆ. ಈ ಮೊದಲು ಜ.20ರಿಂದ ಕೊಬ್ಬರಿ ಖರೀದಿಸಲಾಗುವುದು ಎಂದು ತಿಳಿಸಿದ್ದರು. ಈಗ ಅದನ್ನು ಮುಂದೂಡಿದ್ದಾರೆ. ದಲ್ಲಾಳಿಗಳ ಕಾಟ ತಪ್ಪಿಸಲು ಬಯೋಮೆಟ್ರಿಕ್‌ ಕಡ್ಡಾಯ ಮಾಡಲಾಗುತ್ತಿದೆ. ಇದರಿಂದ ಖರೀದಿ ಪ್ರಕ್ರಿಯೆ ತಡವಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಆದರೆ, ಖರೀದಿ ಪ್ರಕ್ರಿಯೆ ವಿಳಂಬ ರೈತರಿಗೆ ಸಂಕಷ್ಟ ತಂದೊಡ್ಡಿದೆ ಎಂದು ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಒಟ್ಟು 6.25 ಲಕ್ಷ ಕ್ವಿಂಟಲ್‌ ಕೊಬ್ಬರಿ ಖರೀದಿಯ ಗುರಿ ನಿಗದಿ ಪಡಿಸಲಾಗಿದೆ. 3 ತಿಂಗಳು ಕಾಲ ಕೊಬ್ಬರಿ ಖರೀದಿ ಪ್ರಕ್ರಿಯೆ ನಡೆಯಲಿದೆ. ಜಿಲ್ಲೆಯಲ್ಲಿ ಒಟ್ಟು 21 ಖರೀದಿ ಕೇಂದ್ರಗಳನ್ನು ಆರಂಭಿಸಲಾಗುವುದು. ಕೊಬ್ಬರಿ ಮಾರಾಟ ಮಾಡಿದ ಒಂದು ವಾರದಲ್ಲಿ ರೈತರ ಖಾತೆಗಳಿಗೆ ಹಣ ವರ್ಗಾವಣೆಯಾಗಲಿದೆ ಎಂದು ಮಾಹಿತಿ ನೀಡಿದರು.

ಕಾಂಗ್ರೆಸ್‌ ನಾಯಕರು ಕೇವಲ ‘ಗ್ಯಾರಂಟಿ’ಗಳ ಜಪ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ರಾಜ್ಯದ ಎಲ್ಲ ಶಾಸಕರು ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಅಭಿವೃದ್ಧಿಗಾಗಿ ಇದುವರೆಗೆ ಒಂದು ಪೈಸೆಯೂ ಬಿಡುಗಡೆಯಾಗಿಲ್ಲ. ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.

ಸಂಸದ ಜಿ.ಎಸ್.ಬಸವರಾಜು, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ‌ ಎಚ್.ಎಸ್.ರವಿಶಂಕರ್‌, ರಾಜ್ಯ ಕಾರ್ಯದರ್ಶಿ ಆರ್.ಅಂಬಿಕಾ, ಪದಾಧಿಕಾರಿಗಳಾದ ಟಿ.ಆರ್.ಸದಾಶಿವಯ್ಯ, ಜಗದೀಶ್‌ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.