ತಿಪಟೂರು: ಕಲ್ಪತರು ನಾಡಿನಲ್ಲಿ ಒಮ್ಮೆ ಗೆದ್ದವರು ಮರು ಆಯ್ಕೆ ಕಷ್ಟಸಾಧ್ಯ ಎನ್ನುವುದು ಮತ್ತೊಮ್ಮೆ ಸಾಬೀತಾಗಿದ್ದು, ನೂತನ ಶಾಸಕರಾಗಿ ಕೆ.ಷಡಕ್ಷರಿ ಆಯ್ಕೆಯಾಗಿದ್ದಾರೆ.
ಕೆ.ಷಡಕ್ಷರಿ ಮೂರನೇ ಬಾರಿಗೆ ಆಯ್ಕೆಯಾಗಿ ತಿಪಟೂರು ವಿಧಾನಸಭಾ ಕ್ಷೇತ್ರದಲ್ಲಿ ದಾಖಲೆ ಬರೆದಿದ್ದಾರೆ. ಎರಡು ಬಾರಿ ಶಾಸಕರಾಗಿ ಕಾರ್ಯನಿರ್ವಹಿಸಿದ್ದರೂ ಅವರ ಮುಂದೆ ಸಾಗರದಷ್ಟು ಸವಾಲು, ಸಾವಿರದಷ್ಟು ನಿರೀಕ್ಷೆಗಳಿವೆ. ಇವುಗಳನ್ನು ಸರಿದೂಗಿಸಿಕೊಂಡು ಆಡಳಿತ ನಡೆಸುವುದು ಅವರ ಎದುರಿಗಿರುವ ಸದ್ಯದ ಸವಾಲು.
‘ಕಲ್ಪತರು ನಾಡು’, ‘ಕೊಬ್ಬರಿ ಕಣಜ’ ಎಂದೇ ಪ್ರಖ್ಯಾತಿ ಪಡೆದಿರುವ ತಾಲ್ಲೂಕು ತಿಪಟೂರು. ಏಷ್ಯಾದಲ್ಲಿಯೇ ಅತ್ಯಂತ ದೊಡ್ಡ ಕೊಬ್ಬರಿ ಮಾರುಕಟ್ಟೆ ಹೊಂದಿದೆ. ಕಳೆದ ವರ್ಷ ಕ್ವಿಂಟಲ್ ಕೊಬ್ಬರಿ ದರ ₹19 ಸಾವಿರ ತಲುಪಿತ್ತು. ಆದರೆ ಐದು ತಿಂಗಳಿನಿಂದ ಕೊಬ್ಬರಿ ದರದಲ್ಲಿ ಭಾರಿ ಕುಸಿತವಾಗಿರುವುದು ರೈತರ ಕೆಂಗೆಡಿಸಿತ್ತು.
ತಾಲ್ಲೂಕು ರೈತ ಸಂಘ ಕೊಬ್ಬರಿ ಬೆಲೆ ಏರಿಕೆಗೆ ಒತ್ತಾಯಿಸಿ 35 ದಿನ ಧರಣಿ ನಡೆಸಿತ್ತು. ಆಗ ಸ್ಥಳಕ್ಕೆ ಕೆ.ಷಡಕ್ಷರಿ ತೆರಳಿ ಬೆಂಬಲ ವ್ಯಕ್ತಪಡಿಸಿದ್ದರು. ಚುನಾವಣೆ ಪ್ರಚಾರ ವೇಳೆ ತಾಲ್ಲೂಕಿಗೆ ಬಂದಿದ್ದ ಸಿದ್ದರಾಮಯ್ಯ ಕೊಬ್ಬರಿ ಬೆಲೆಯನ್ನು ₹15 ಸಾವಿರಕ್ಕೆ ಏರಿಸುವ ಭರವಸೆ ನೀಡಿದ್ದರು. ಹಾಗಾಗಿ ರೈತರು ಆಸೆ ಕಂಗಳಿನಿಂದ ಎದುರು ನೋಡುತ್ತಿದ್ದಾರೆ.
ಈಗಾಲೇ ರೈತರ ಬಳಿ ಕೊಬ್ಬರಿ ಶೇಖರಣೆಯಾಗಿದ್ದು ತುಂಬಾ ತಡವಾದರೆ ಕೊಬ್ಬರಿಯ ಗುಣಮಟ್ಟ ಹಾಳಾಗುವ ಆತಂಕದಲ್ಲಿದ್ದಾರೆ. ಇನ್ನೂ ಕೊಬ್ಬರಿ ಬೆಲೆ ಕುಸಿತ ಕಂಡಾಗ ಕೊಬ್ಬರಿ ಹಾಳಾಗದಂತೆ ಶೇಖರಣೆ ಮಾಡಲು ಶಿತಲೀಕರಣ ಘಟಕದ ಅಗತ್ಯವಿದೆ. ಎಪಿಎಂಸಿಯಲ್ಲಿ ರೈತರದ್ದೇ ಸಾಕಷ್ಟು ಹಣ ಇದ್ದು ಅದನ್ನು ಸದ್ಬಳಕೆ ಮಾಡಿಕೊಂಡು ಶಿತಲೀಕರಣ ಘಟಕ ಸ್ಥಾಪಿಸಬೇಕು ಎನ್ನುವುದು ರೈತರ ಬಹುದಿನದ ಬೇಡಿಕೆ.
2013ರಲ್ಲಿ ಕೆ.ಷಡಕ್ಷರಿ ಶಾಸಕರಾದಾಗ ತಿಪಟೂರು ತಾಲ್ಲೂಕು ಗಣಿಬಾಧಿತ ಪ್ರದೇಶವಾಗಿರುವುದರಿಂದ ಸುಮಾರು ₹750 ಕೋಟಿ ಅನುದಾನ ಪ್ರದೇಶ ಅಭಿವೃದ್ಧಿಗೆ ಮೀಸಲಾಗಿದೆ. ಮೂರು ಜಿಲ್ಲೆಗಳಿಗೆ ಅನುಕೂಲವಾಗುವಂತಹ ಸರ್ಕಾರಿ ಹೈಟೆಕ್ ಸೂಪರ್ ಸ್ಫೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುವ ಗುರಿ ಹೊಂದಿದೆ. ಅದಕ್ಕಾಗಿ ತಾಲ್ಲೂಕಿನ ತಿಮ್ಲಾಪುರದ ಬಳಿ ಜಾಗ ಗುರುತಿಸಲಾಗಿತ್ತು. ಇದೀಗ ಆಸ್ಪತ್ರೆ ನಿರ್ಮಾಣ ಕಾರ್ಯ ಜಾರಿಗೆ ಬರುವ ನಿರೀಕ್ಷೆ ಜನರದ್ದು.
ತಾಲ್ಲೂಕಿನ ಜನರ ಬೇಡಿಕೆಯಾದ ನಗರದ ನೀಲಕಂಠಸ್ವಾಮಿ ವೃತ್ತದಲ್ಲಿ ಬಸವೇಶ್ವರ ಪುತ್ಥಳಿ ನಿರ್ಮಾಣ ಮಾಡುವ ಕಾರ್ಯವನ್ನು ವರ್ಷದಲ್ಲಿಯೇ ಮುಗಿಸುವ ಭರವಸೆ ನೀಡಿದ್ದು, ತ್ವರಿತವಾಗಿ ಕಾರ್ಯಪ್ರವೃತ್ತರಾಗುವ ಅಗತ್ಯವಿದೆ. ಕೆಲ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿ ಬಾಕಿ ಇದ್ದು ಶಾಸಕರ ಅನುದಾನದಲ್ಲಿ, ವಿಶೇಷ ಅನುದಾನದಲ್ಲಿ ಆಗುವ ಸಾಧ್ಯತೆ ಇದೆ. ಗ್ರಾಮೀಣ ಭಾಗದಲ್ಲಿ ಮನೆ, ಮನೆಗೆ ಜಲಜೀವನ್ ಮಿಷನ್ ಅಡಿಯಲ್ಲಿ ನೀರು ಸರಬರಾಜು ಮಾಡುತ್ತಿದ್ದು ಶುದ್ಧ ಕುಡಿಯುವ ನೀರಿನ ಅಭಾವ ಇದೆ. ಅದಕ್ಕಾಗಿ ಅನೇಕ ಗ್ರಾಮಗಳಿಗೆ ಶುದ್ಧ ನೀರಿನ ಘಟಕ ನಿರ್ಮಾಣ ಮಾಡಬೇಕಿದೆ.
ನಗರದ ಕಸ ವಿಲೇವಾರಿ ಸಮಸ್ಯೆಗೆ ಪರಿಹಾರ ದೊರೆತಿಲ್ಲ. ಕಸ ಕೊಂಡೊಯ್ಯುವವರ ಅಭಾವದಿಂದಾಗಿ ಖಾಲಿ ಜಾಗದಲ್ಲಿ ಕಸದ ರಾಶಿಗೆ ಕಡಿವಾಣ ಇಲ್ಲವಾಗಿದೆ. ವಾರ್ಡ್‍ವಾರು ಹೈಟೆಕ್ ಕಸ ನಿರ್ವಹಣೆ ಬೂತ್ ನಿರ್ಮಾಣ ಮಾಡಿ ಜನರೇ ಹಸಿ ಕಸ, ಒಣ ಕಸ ಬೇರ್ಪಡಿಸಿ ತೆಗೆದುಕೊಂಡು ಕೊಡುವಂತಾಗಬೇಕು. ನಗರದ ಸ್ವಚ್ಛತೆ ಹಾಗೂ ಅಂದವನ್ನು ಕಾಪಾಡುವ ಹೊಣೆಗಾರಿಕೆ ನೂತನ ಶಾಸಕರ ಮೇಲಿದೆ.
Cut-off box - ಜಿಲ್ಲಾ ಕೇಂದ್ರದ ಕೂಗು ಕಳೆದ ಹಲವು ವರ್ಷಗಳಿಂದಲೂ ತಾಲ್ಲೂಕನ್ನು ಜಿಲ್ಲಾ ಕೇಂದ್ರವನ್ನಾಗಿ ಪರಿಗಣಿಸಬೇಕು ಎಂಬ ಕೂಗು ಕೇಳುತ್ತಿದೆ. ಸದ್ಯ ಜಿಲ್ಲೆ ಕೇಂದ್ರಕ್ಕೆ ತೆರಳಲು ತಿಪಟೂರು ಗಡಿಯಿಂದ 100 ಕಿ.ಮೀ ಕ್ರಮಿಸುವ ಅಗತ್ಯವಿದೆ. ತುಮಕೂರು ದೊಡ್ಡ ಜಿಲ್ಲೆಯಾಗಿದ್ದು ಆಡಳಿತ ಅಭಿವೃದ್ಧಿಗೆ ಜಿಲ್ಲೆಯ ವಿಭಜನೆ ಪೂರಕವಾಗಲಿದೆ. ಈಗಾಗಲೇ ತಾಲ್ಲೂಕಿನಲ್ಲಿ ಮಿನಿ ವಿಧಾನಸೌಧ ಸೇರಿದಂತೆ ಹಲವು ಸೌಕರ್ಯಗಳಿವೆ. ಜಿಲ್ಲೆಯಲ್ಲಿ ತುಮಕೂರು ಬಿಟ್ಟರೆ ದೊಡ್ಡ ವಾಣಿಜ್ಯ ಕೇಂದ್ರವೂ ಆಗಿದೆ. ಹಾಗಾಗಿ ಜನರು ಜಿಲ್ಲಾ ಕೇಂದ್ರವಾಗುವ ನಿರೀಕ್ಷೆಯಲ್ಲಿದ್ದಾರೆ.
Cut-off box - ನೀಗುವುದೇ ನೀರಿನ ಕೊರತೆ ಬರಗಾಲ ಪೀಡಿತ ಪ್ರದೇಶ ತಿಪಟೂರು ತಾಲ್ಲೂಕು ಹೇಮಾವತಿ ನೀರಿನಿಂದ ತನ್ನ ದಾಹ ನೀಗಿಸಿಕೊಳ್ಳುತ್ತಿದೆ. ಹೊನ್ನವಳ್ಳಿ ಭಾಗಕ್ಕೆ ಏತ ನೀರಾವರಿ ಯೋಜನೆಯನ್ನು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದರೂ ಸಮರ್ಪಕ ನೀರು ಸರಬರಾಜು ಆಗುತ್ತಿಲ್ಲ. ಈ ನಿಟ್ಟಿನಲ್ಲಿ ಹಲವು ಹೋರಾಟ ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕಾರದ ಮೂಲಕ ಜನರು ಈಗಾಗಲೇ ಆಕ್ರೋಶ ಹೊರಹಾಕಿದ್ದರು. ಈ ಬಾರಿಯಾದರೂ ವೈಜ್ಞಾನಿಕ ನೀರಾವರಿ ಸೌಕರ್ಯ ಸಿಗುವ ಭರವಸೆಯಲ್ಲಿ ಜನರಿದ್ದಾರೆ. ತಾಲ್ಲೂಕಿನ ಹಲವೆಡೆ ಕುಡಿಯುವ ನೀರಿಗೂ ಕೊರತೆಯಿದ್ದು ನೂತನ ಶಾಸಕರು ಸ್ಪಂದಿಸುತ್ತಾರೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ.
Cut-off box - ಜನರ ನಂಬಿಕೆ ಉಳಿಸುವ ಯತ್ನ ರಾಜ್ಯದಲ್ಲಿಯೂ ಕಾಂಗ್ರೆಸ್ ಸರ್ಕಾರವೇ ಆಡಳಿತ ನಡೆಸುವುದರಿಂದ ತಾಲ್ಲೂಕಿನ ಅಭಿವೃದ್ಧಿಗೆ ಸರ್ವ ಪ್ರಯತ್ನ ಮಾಡಲಾಗುವುದು. ಈಗಾಗಲೇ ಅನೇಕ ಯೋಜನೆ ಜಾರಿಗೆ ತಂದಿದ್ದು ಸಾವಿರಾರು ಕೋಟಿ ಅನುದಾನವನ್ನು ಹಿಂದೆಯೂ ತಂದಿದ್ದೇನೆ. ಮುಂದಿನ ದಿನಗಳಲ್ಲಿ ಹಲವು ನೂತನ ಯೋಜನೆಗಳೊಂದಿಗೆ ಸಮಗ್ರ ಅಭಿವೃದ್ಧಿಗೆ ಶ್ರಮಿಸಿ ಜನರ ನಂಬಿಕೆ ಉಳಿಸಿಕೊಳ್ಳುತ್ತೇನೆ. ಕೆ.ಷಡಕ್ಷರಿ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.