ADVERTISEMENT

ತುಮಕೂರು: ಊರಾಚೆ ಗುಡಿಸಲಲ್ಲಿ ಬಾಣಂತಿ, ಮಗು

ಬದಲಾಗದ ಗೊಲ್ಲರಹಟ್ಟಿಯ ಸಂಪ್ರದಾಯ

​ಪ್ರಜಾವಾಣಿ ವಾರ್ತೆ
Published 16 ಮೇ 2024, 19:29 IST
Last Updated 16 ಮೇ 2024, 19:29 IST
ತುಮಕೂರು ತಾಲ್ಲೂಕಿನ ಮಲ್ಲೇನಹಳ್ಳಿ ಗೊಲ್ಲರಹಟ್ಟಿ ಊರಾಚೆ ಬಾಣಂತಿ ಮತ್ತು ಮಗುವನ್ನು ಇಟ್ಟಿರುವ ಗುಡಿಸಲು
ತುಮಕೂರು ತಾಲ್ಲೂಕಿನ ಮಲ್ಲೇನಹಳ್ಳಿ ಗೊಲ್ಲರಹಟ್ಟಿ ಊರಾಚೆ ಬಾಣಂತಿ ಮತ್ತು ಮಗುವನ್ನು ಇಟ್ಟಿರುವ ಗುಡಿಸಲು   

ಕೋರ (ತುಮಕೂರು): ತುಮಕೂರು ತಾಲ್ಲೂಕು ಮಲ್ಲೇನಹಳ್ಳಿ ಗೊಲ್ಲರಹಟ್ಟಿಯ ಬಾಣಂತಿ ಹಾಗೂ ನವಜಾತ ಶಿಶುವನ್ನು ಊರಾಚೆಯ ಜಮೀನಿನಲ್ಲಿ ನಿರ್ಮಿಸಿರುವ ತಾತ್ಕಾಲಿಕ ಗುಡಿಸಲಿನಲ್ಲಿ ಇರಿಸಲಾಗಿದೆ.  

ವಿಷಯ ತಿಳಿದು ಸೋಮವಾರ ಗುಡಿಸಲಿಗೆ ತೆರಳಿದ ಬೆಳ್ಳಾವಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಯು ಬಾಣಂತಿಯ ಕುಟುಂಬ ಸದಸ್ಯರ ಮನವೊಲಿಸಿ ಆಸ್ಪತ್ರೆಗೆ ಸೇರಿಸಲು ನಡೆಸಿದ ಯತ್ನ ಫಲ ನೀಡಲಿಲ್ಲ.

‘ನಮ್ಮ ಸಮುದಾಯದಲ್ಲಿ ಸಂಪ್ರದಾಯದಂತೆ ಇನ್ನೂ ಕೆಲವು ದಿನ ತಾಯಿ ಮತ್ತು ಮಗುವನ್ನು ಗುಡಿಸಿಲಿನಲ್ಲಿಯೇ ಆರೈಕೆ ಮಾಡುತ್ತೇವೆ. ಸ್ವಲ್ಪ ದಿನ ಕಳೆದ ನಂತರ  ಹಟ್ಟಿಗೆ ಕರೆದೊಯ್ಯುತ್ತೇವೆ’ ಎಂದು ಬಾಣಂತಿ ಕುಟುಂಬದ ಹಿರಿಯರು ಹಟ ಹಿಡಿದರು.

ADVERTISEMENT

‘ಈ ರೀತಿ ಬಯಲಿನಲ್ಲಿ ನವಜಾತ ಶಿಶುವಿನೊಂದಿಗೆ ಬಾಣಂತಿ ವಾಸ ಮಾಡುವುದು ಒಳ್ಳೆಯದ್ದಲ್ಲ. ಸಂಪ್ರದಾಯದ ಹೆಸರಿನಲ್ಲಿ ತಾಯಿ, ಮಗುವಿನ ಜೀವಕ್ಕೆ ಕುತ್ತು ತರಬೇಡಿ ಎಂದು ಎಷ್ಟೇ ತಿಳಿ ಹೇಳಿದರೂ ಕುಟುಂಬ ಮನಸ್ಸು ಬದಲಿಸಲಿಲ್ಲ’ ಎಂದು ಬೆಳ್ಳಾವಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ರಾಧಕೃಷ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ಕಾಂಗರೂ ಮಾದರಿಯಲ್ಲಿ ತಾಯಿ ಮತ್ತು ಮಗುವಿನ ಆರೈಕೆ ಮತ್ತು ಸ್ವಚ್ಛತೆ ಬಗ್ಗೆ ಕುಟುಂಬ ಸದಸ್ಯರಿಗೆ ತಿಳಿ ಹೇಳಿ ಬಂದಿದ್ದೇವೆ ಎಂದರು.

ಬಾಲಕಿಯರು ಋತುಮತಿಯಾದಾಗ, ಮಹಿಳೆಯರ ಮಾಸಿಕ ಋತುಚಕ್ರ ಮತ್ತು ಹೆರಿಗೆ ಸಂದರ್ಭದಲ್ಲಿ ನಿರ್ದಿಷ್ಟ ದಿನಗಳವರೆಗೆ ಗ್ರಾಮದಿಂದ ಹೊರಗೆ ಗುಡಿಸಲಿನಲ್ಲಿ ಇರುವ ಪದ್ಧತಿ ಬುಡಕಟ್ಟು ಸಂಪ್ರದಾಯ ಪಾಲಿಸುವ ಗೊಲ್ಲ ಸಮುದಾಯದಲ್ಲಿ ಬಹಳ ಹಿಂದಿನಿಂದಲ್ಲೂ ನಡೆದುಕೊಂಡು ಬಂದಿದೆ.

ಗೊಲ್ಲ ಸಮುದಾಯ ಹೆಚ್ಚಾಗಿರುವ ತುಮಕೂರು ಜಿಲ್ಲೆಯ ಕೆಲವು ಗ್ರಾಮಗಳ ಹೊರವಲಯದಲ್ಲಿ ಕೃಷ್ಣ ಕುಟೀರ ನಿರ್ಮಾಣ ಮಾಡಲಾಗಿದ್ದು, ಇಂತಹ ಸಂದರ್ಭದಲ್ಲಿ ಹೆಣ್ಣುಮಕ್ಕಳು ಮೂರರಿಂದ ಐದು ದಿನ ಉಳಿದುಕೊಳ್ಳುತ್ತಾರೆ ಎಂದು ಸಮುದಾಯದ ಹಿರಿಯರೊಬ್ಬರು ತಿಳಿಸಿದರು. 

ತುಮಕೂರು ತಾಲ್ಲೂಕಿನ ಮಲ್ಲೇನಹಳ್ಳಿ ಗೊಲ್ಲರಹಟ್ಟಿ ಊರಾಚೆಯ ಗುಡಿಸಲಿನಲ್ಲಿರುವ ಬಾಣಂತಿ ಮತ್ತು ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನದಲ್ಲಿ ತೊಡಗಿರುವ ವೈದ್ಯಾಧಿಕಾರಿ ಮತ್ತು ಸಿಬ್ಬಂದಿ 
ತುಮಕೂರು ತಾಲ್ಲೂಕಿನ ಮಲ್ಲೇನಹಳ್ಳಿ ಗೊಲ್ಲರಹಟ್ಟಿ ಊರಾಚೆಯ ಗುಡಿಸಲಿನಲ್ಲಿರುವ ಬಾಣಂತಿ ಮತ್ತು ಮಗುವಿನ ಆರೋಗ್ಯ ಪರೀಕ್ಷಿಸಿದ ವೈದ್ಯಕೀಯ ಸಿಬ್ಬಂದಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.