ಪ್ರಜಾವಾಣಿ ವಾರ್ತೆ
ಶಿರಾ: ನಗರದ ಕಸ್ತೂರಿ ರಂಗಪ್ಪನಾಯಕನ ಕೋಟೆ ಹಾಗೂ ಕಂದಕದ ಸಂರಕ್ಷಿಸಲ್ಪಟ್ಟ (ನಿಷೇದಿತ) ಪ್ರದೇಶದಲ್ಲಿ ಅತಿಕ್ರಮ ಪ್ರವೇಶ ಮಾಡಿ ನಿಯಮ ಬಾಹಿರವಾಗಿ ಕಾಮಗಾರಿ ನಡೆಸುತ್ತಿರುವುದನ್ನು ಪ್ರಾಚ್ಯವಸ್ತು ಮತ್ತು ಸ್ಮಾರಕಗಳ ಸಂರಕ್ಷಣಾ ಸಂಸ್ಥೆ ಸಂಚಾಲಕ ಎಸ್.ಆರ್.ರಮೇಶ್ ತೀವ್ರವಾಗಿ ಖಂಡಿಸಿದ್ದಾರೆ.
ನಗರದ ಕಸ್ತೂರಿ ರಂಗಪ್ಪನಾಯಕನ ಕೋಟೆ ಹಾಗೂ ಕಂದಕವು ಪುರಾತತ್ವ ಇಲಾಖೆಗೆ ಸೇರಿದ್ದು, ಇದು ರಾಜ್ಯ ಸಂರಕ್ಷಿತ ಸ್ಮಾರಕವಾಗಿದೆ. ಇಲ್ಲಿ ಯಾವುದೇ ಕಾಮಗಾರಿ ನಡಸಬೇಕಾದರೂ ಪುರಾತತ್ವ ಇಲಾಖೆಯಿಂದ ಅನುಮತಿ ಪಡೆಯಬೇಕಿದೆ ಎಂದು ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪುರಾತತ್ವ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೆ ಏಕಾಏಕಿ ಕಸ್ತೂರಿ ರಂಗಪ್ಪನಾಯಕನ ಕೋಟೆ ಹಾಗೂ ಕಂದಕಕ್ಕೆ ಹೊಂದಿಕೊಂಡಂತೆ ಅನಧಿಕೃತವಾಗಿ ನಿರ್ಮಿಸಿರುವ ಎಚ್‌ಎಂಎಸ್ ಮೈದಾನಕ್ಕೆ ಹೋಗಲು ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂದರು.
ಗುತ್ತಿಗೆದಾರ ಕುರುಬರಹಳ್ಳಿ ಚಂದ್ರಣ್ಣ ಹೆಸರಿನಲ್ಲಿ ನಗರಸಭೆಯಿಂದ ಕಾರ್ಯಾದೇಶ ಪಡೆಯದೆ ಅನಧಿಕೃತವಾಗಿ ನಿರ್ಮಾಣ ಕಾರ್ಯ ಕೈಗೊಳ್ಳುತ್ತಿರುವುದು ಕಾನೂನು ಉಲ್ಲಂಘನೆಯಾಗಿದ್ದು, ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಪೋಲೀಸ್ ಉಪಾಧೀಕ್ಷಕರಿಗೆ ದೂರು ನೀಡಲಾಗಿದೆ ಎಂದರು.
‘ಕಾಮಗಾರಿ ಬಗ್ಗೆ ಪ್ರಶ್ನೆ ಮಾಡಿದ ಹಿನ್ನಲೆಯಲ್ಲಿ ನಗರಸಭೆ ಪೌರಾಯುಕ್ತರು ಕಾಮಗಾರಿಯ ಬಗ್ಗೆ ಸ್ವಷ್ಟೀಕರಣ ನೀಡಲಾಗುವುದು ಬನ್ನಿ ಎಂದು ಕರೆಯುತ್ತಾರೆ. ನಗರಸಭೆ ಅಧ್ಯಕ್ಷರು ಹಾಗೂ 15ನೇ ವಾರ್ಡ್ ಸದಸ್ಯೆ ಪತಿ ಬೆದರಿಕೆ ಹಾಕುತ್ತಿದ್ದಾರೆ. ನನಗೆ ರಕ್ಷಣೆ ನೀಡಬೇಕು’ ಎಂದು ಪೊಲೀಸರಿಗೆ ಮನವಿ ಮಾಡಲಾಗುವುದು ಎಂದರು.
ಶಿರಾ ನಗರ ನಿರ್ಮಾತೃ ಕಸ್ತೂರಿ ರಂಗಪ್ಪನಾಯಕನ ಕೋಟೆ ಮತ್ತು ಕಂದಕವನ್ನು ಸಂರಕ್ಷಿಸುವ ಬಗ್ಗೆ ನಗರಸಭೆ, ಪೊಲೀಸ್, ತಾಲ್ಲೂಕು ಹಾಗೂ ಜಿಲ್ಲಾ ಅಡಳಿತ ನಿರ್ಲಕ್ಷ್ಯವಹಿಸಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.