ತುಮಕೂರು: ನಗರದ ಕ್ಸಾತ್ಸಂದ್ರ ವಸತಿ ಗೃಹವೊಂದರ ಮೇಲೆ ಸೋಮವಾರ ಪೊಲೀಸರು ದಾಳಿ ನಡೆಸಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದು, ಐವರು ಪುರುಷರನ್ನು ಬಂಧಿಸಿದ್ದಾರೆ.ರಾಷ್ಟ್ರೀಯ ಹೆದ್ದಾರಿ 4ರ ಕ್ಯಾತ್ಸಂದ್ರ ಸೇತುವೆ ಸಮೀಪ ಕಳೆದ ಕೆಲ ದಿನಗಳ ಹಿಂದೆ ಕಾಂಡೋಮ್ಗಳ ರಾಶಿ ಚೆಲ್ಲಾಡಿದ್ದರ ಹಿಂದೆ ಈ ವಸತಿಗೃಹದ ಕೈವಾಡ ಇದೆ ಎಂದು ತಿಳಿದು ಬಂದಿದೆ.
ಈ ಸಮಯದಲ್ಲಿ ಒಬ್ಬ ಮಹಿಳೆ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ವಸತಿ ಗೃಹದಲ್ಲಿ ಸುರಂಗ ಕೊರೆದು ಮಹಿಳೆಯರನ್ನು ಬಚ್ಚಿಟ್ಟು ವೇಶ್ಯಾವಾಟಿಕೆ ನಡೆಸುತ್ತಿರುವುದು ಪತ್ತೆಯಾಗಿದೆ. ಪೊಲೀಸರು ದಾಳಿ ಮಾಡಲು ತೆರಳಿದ ಸಮಯದಲ್ಲಿ ಸೂಚನೆ ನೀಡುವ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಈ ಸೂಚನೆ ಬರುತ್ತಿದ್ದಂತೆ ಮಹಿಳೆಯರು ಹಾಗೂ ಪುರುಷರನ್ನು ಗುಹೆಯಲ್ಲಿ ಬಚ್ಚಿಡಲಾಗುತಿತ್ತು. ಸುರಂಗ ಮಾರ್ಗ ಇರುವುದು ಗೊತ್ತಾಗದಂತೆ ನೋಡಿಕೊಳ್ಳಲಾಗಿತ್ತು.
ಮೈಸೂರಿನ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ, ಪರಶುರಾಮ್ ಅವರು ಈ ವಿಚಾರವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಮನಕ್ಕೆ ತಂದಿದ್ದರು. ಅವರ ನೇತೃತ್ವದಲ್ಲಿ ದಾಳಿ ನಡೆದಿದ್ದು, ವೇಶ್ಯಾವಾಟಿಕೆ ನಡೆಯುತ್ತಿದ್ದು, ಖಚಿತಪಟ್ಟಿದೆ.
ರಾಷ್ಟ್ರೀಯ ಹೆದ್ದಾರಿ 4ರ ಕ್ಯಾತ್ಸಂದ್ರ ಸೇತುವೆ ಸಮೀಪ ಕಳೆದ ಕೆಲ ದಿನಗಳ ಹಿಂದೆ ಕಾಂಡೋಮ್ಗಳ ರಾಶಿ ಚೆಲ್ಲಾಡಿದ್ದು ಪತ್ತೆಯಾಗಿತ್ತು. ಈ ಮಾಹಿತಿಯ ಜಾಡು ಹಿಡಿದು ವಿವರ ಸಂಗ್ರಹಿಸಿದಾಗ ವಸತಿ ಗೃಹದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವುದು ಗೊತ್ತಾಯಿತು. ಈ ವಿಚಾರವನ್ನು ಎಸ್ಪಿ ಗಮನಕ್ಕೆ ತಂದ ನಂತರ ದಾಳಿ ನಡೆದಿದೆ ಎಂದು ಸ್ಟ್ಯಾನ್ಲಿ ತಿಳಿಸಿದರು.
‘ಅಡಗುದಾಣಗಳನ್ನು ನಿರ್ಮಿಸಿ ವೇಶ್ಯಾವಾಟಿಕೆ ನಡೆಸುವ ವಸತಿಗೃಹ, ಇತರ ಕಟ್ಟಡಗಳನ್ನು ಪೊಲೀಸರು ವಶಕ್ಕೆ ಪಡೆದು ನೆಲಸಮ ಮಾಡುವಂತೆ ಕೋರ್ಟ್ ಆದೇಶವಿದೆ. ಹಾಗಾಗಿ ಈ ವಸತಿ ಗೃಹವನ್ನು ಪೊಲೀಸರು ವಶಕ್ಕೆ ಪಡೆದುಕೊಳ್ಳಬೇಕು. ತನಿಖೆ ನಂತರ ನೆಲಸಮ ಮಾಡಲು ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.