ADVERTISEMENT

ಜನಕ್ಕೆ ವಿಷ ಉಣಿಸುತ್ತಿರುವ ಕಾಂಗ್ರೆಸ್‌: ಬಿಜೆಪಿ ಟೀಕೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2024, 4:39 IST
Last Updated 16 ಜೂನ್ 2024, 4:39 IST
ಕೆ.ಎಸ್.ನವೀನ್‌
ಕೆ.ಎಸ್.ನವೀನ್‌   

ತುಮಕೂರು: ಕಾಂಗ್ರೆಸ್‌ ಸರ್ಕಾರ ಕಳೆದ ಒಂದು ವರ್ಷದಿಂದ ಜನರಿಗೆ ವಿಷ ಉಣಿಸುತ್ತಿದೆ ಎಂದು ವಿಧಾನ ಪರಿಷತ್‌ ಸದಸ್ಯ ಕೆ.ಎಸ್.ನವೀನ್‌ ಇಲ್ಲಿ ಶನಿವಾರ ಆರೋಪಿಸಿದರು.

ಜನರಿಗೆ ಕೊಡುತ್ತಿರುವುದು ನೀರೋ, ವಿಷವೋ ಎನ್ನುವುದು ತಿಳಿಯುತ್ತಿಲ್ಲ. ಹನ್ನೆರಡು ತಿಂಗಳ ಅವಧಿಯಲ್ಲಿ ಯಾದಗಿರಿ ಜಿಲ್ಲೆಯಿಂದ ಶುರುವಾಗಿ ರಾಯಚೂರು, ಹೊಸಪೇಟೆ, ಕೊಪ್ಪಳ, ಚಿತ್ರದುರ್ಗ, ಈಗ ಮಧುಗಿರಿಯ ಚಿನ್ನೇನಹಳ್ಳಿಯಲ್ಲಿ ಕಲುಷಿತ ನೀರಿನಿಂದ ಘೋರ ದುರಂತ ನಡೆದಿದೆ. ಜಾತ್ರೆಯ ಸಂಭ್ರಮದಲ್ಲಿ ಇದ್ದವರು ಮಸಣ ಸೇರಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನೀರಿನ ಶುದ್ಧತೆ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಅಧಿಕಾರಿಗಳ ನಿರಂತರ ನಿರ್ಲಕ್ಷ್ಯದಿಂದ ಆರು ಜನ ಸಾವನ್ನಪ್ಪಿದ್ದಾರೆ. ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಅಸಮರ್ಥರು. ತಮಗೆ ಸಂಬಂಧ ಇಲ್ಲದ ವಿಷಯದ ಬಗ್ಗೆ ಮಾತನಾಡುತ್ತಾರೆ. ಕುಡಿಯುವ ನೀರಿನ ಕುರಿತು ಒಂದೇ ಒಂದು ಹೇಳಿಕೆ ನೀಡುತ್ತಿಲ್ಲ. ಅವರು ನೈತಿಕ ಹೊಣೆ ಹೊತ್ತು ಕೂಡಲೇ ರಾಜೀನಾಮೆ ಸಲ್ಲಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಜನರ ಸಾವಿನ ಕುರಿತು ಗಮನ ಹರಿಸದಿರುವುದು ಅಪರಾಧ. ಪಂಚಾಯಿತಿಗಳಿಗೆ ರಾಜ್ಯ ಸರ್ಕಾರ ಬಿಡಿಗಾಸು ಹಣ ಕೊಡುತ್ತಿಲ್ಲ. ಕೇಂದ್ರದ ಜಲ ಜೀವನ್‌ ಮಿಷನ್‌ ಕಾಮಗಾರಿ ಸ್ಥಗಿತಗೊಂಡಿದೆ. ಕಳೆದ ವರ್ಷದಿಂದ ಯಾವುದೇ ಪ್ರಗತಿ ಕಾಣುತ್ತಿಲ್ಲ. ರಾಜ್ಯ ತನ್ನ ಪಾಲಿನ ಹಣ ಕೊಡುತ್ತಿಲ್ಲ. ಗ್ರಾಮೀಣ ಭಾಗದ ಜನರು ಶೋಚನೀಯ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಸರ್ಕಾರ ಸಾಮಾನ್ಯ ಜನರ ಜೀವನದ ಜತೆ ಚೆಲ್ಲಾಟ ಆಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಿನ್ನೇನಹಳ್ಳಿಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಬೇಕು. ಪರಿಹಾರ ಕೊಡಬೇಕು. ಬಡವರು ಸತ್ತಾಗ ನಿರ್ಲಕ್ಷ್ಯ ವಹಿಸುವುದು ಜನರಿಗೆ ಮಾಡುವ ಅವಮಾನ. ಎಲ್ಲ ಜಿಲ್ಲೆಗಳಲ್ಲಿ ಸ್ವಚ್ಛತೆ, ಶುದ್ಧತೆಗೆ ಕ್ರ‌ಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಎಲ್ಲ ಜಿಲ್ಲಾ ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಎಸ್.ರವಿಶಂಕರ್, ಮುಖಂಡರಾದ ಟಿ.ಆರ್.ಸದಾಶಿವಯ್ಯ, ಕುಮಾರ್‌ಗೌಡ, ಎಚ್.ಚಂದ್ರಶೇಖರ್, ಜೆ.ಜಗದೀಶ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.