ಚಿಕ್ಕನಾಯಕನಹಳ್ಳಿ: ‘ಪ್ರಧಾನಿ ಮೋದಿ ಅವರ ನಾಯಕತ್ವದಿಂದ ಭಾರತಕ್ಕೆ ಬೇರೆ ರಾಷ್ಟ್ರಗಳಿಗೆ ಸಹಾಯ ಮಾಡುವಷ್ಟು ಸಾಮರ್ಥ್ಯ ಬಂದಿದೆ’ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಹೇಳಿದರು.
ಬಿಜೆಪಿ ವಿಜಯ ಸಂಕಲ್ಪ ಅಭಿಯಾನದ ಅಂಗವಾಗಿ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬುಕ್ಕಾಪಟ್ಟಣ ಹೋಬಳಿಯ ಗಾಣದಹುಣಿಸೆ ಮತ್ತು ನೇರಳಗುಡ್ಡ ಬೂತ್‌ನಲ್ಲಿ ಪ್ರತಿ ಮನೆಗೆ ಭೇಟಿ ನೀಡಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ಸಾಧನೆಯ ಪಟ್ಟಿ ಒಳಗೊಂಡ ಕರಪತ್ರ ವಿತರಿಸಿ ಅವರು ಮಾತನಾಡಿದರು.
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಸಣ್ಣಪುಟ್ಟ ರಾಷ್ಟ್ರಗಳನ್ನು ಹಣಕ್ಕಾಗಿ ಬೇಡುವ ಪರಿಸ್ಥಿತಿ ಇತ್ತು. ಮೋದಿ ಒಂದು ಸಲ ಬಿಜೆಪಿಗೆ ಅಧಿಕಾರ ನೀಡಿದರೆ ದೇಶವನ್ನು ಆರ್ಥಿಕವಾಗಿ ಸದೃಢಗೊಳಿಸುವುದಾಗಿ ಹೇಳಿದ್ದರು. ಅದರಂತೆ ಭಾರತ ಇಂದು ಮುಂದುವರಿದ ದೇಶವಾಗಿ ಹೊರಹೊಮ್ಮಿದೆ ಎಂದು ಹೇಳಿದರು.
ರಾಜ್ಯದ ಜನರ ಹಿತ ಚಿಂತನೆ ಬಿಟ್ಟು ಕಾಂಗ್ರೆಸ್ ನಾಯಕರು ಕಿತ್ತಾಡುತ್ತಿದ್ದಾರೆ. ದೇಶಕ್ಕೆ ಮೋದಿ ಅವರ ನಾಯಕತ್ವದ ಅನಿವಾರ್ಯತೆ ಇದೆ ಎನ್ನುವುದನ್ನು ಕಾಂಗ್ರೆಸ್‌ನ ಕೆಲವು ನಾಯಕರೇ ಗುಟ್ಟಾಗಿ ಮಾತನಾಡಿಕೊಳ್ಳುತ್ತಿದ್ದಾರೆ. ಮುಂಬರುವ ಚುಣಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಮತ ನೀಡಿ ಜೆ.ಸಿ. ಮಾಧುಸ್ವಾಮಿ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿ, ಚುನಾವಣೆಯಲ್ಲಿ ಅಭಿವೃದ್ಧಿ ಕೆಲಸ ನೋಡಬೇಕು. ಜಾತಿ ನೋಡದೆ ಮತ ಹಾಕಬೇಕು. ಯಾರೂ ಇಂತಹ ಜಾತಿಯಲ್ಲೇ ಹುಟ್ಟಬೇಕೆಂದು ಅರ್ಜಿ ಹಾಕಿಕೊಂಡು ಹುಟ್ಟುವುದಿಲ್ಲ ಎಂದರು.
ಕ್ಷೇತ್ರದಲ್ಲಿ ಹೇಮಾವತಿ ನೀರು ಹರಿಸಿರುವುದು ನಮ್ಮ ಸಾಧನೆ. ಬುಕ್ಕಾಪಟ್ಟಣದ ಕೆಲವು ಕೆರೆಗಳಿಗೆ ಭದ್ರಾ ಮೇಲ್ದಂಡೆ ಯೋಜನೆಯಡಿ ನೀರು ಹರಿಸಲಾಗುವುದು. ಸಣ್ಣ ನೀರಾವರಿ ಇಲಾಖೆಯಿಂದ ₹ 250 ಕೋಟಿ ವೆಚ್ಚದಡಿ ಪೈಪ್‌ಲೈನ್ ಅಳವಡಿಸಿ ಕೆರೆಗಳನ್ನು ತುಂಬಿಸುವ ಕೆಲಸ ನಡೆದಿದೆ. ಪಕ್ಕದ ತಿಪಟೂರು ಕ್ಷೇತ್ರಕ್ಕೂ ₹ 280 ಕೋಟಿ ಅನುದಾನ ನೀಡಿ ಕೆಲಸ ಮಾಡಿಸಲಾಗುತ್ತಿದೆ ಎಂದು
ತಿಳಿಸಿದರು.
ವಿಧಾನ ಪರಿಷತ್ ಮುಖ್ಯ ಸಚೇತಕ ವೈ.ಎ. ನಾರಾಯಣಸ್ವಾಮಿ, ಬಿಜೆಪಿ ಮಂಡಲ ಅಧ್ಯಕ್ಷ ಆರ್. ಕೇಶವಮೂರ್ತಿ, ಪ್ರಧಾನ ಕಾರ್ಯದರ್ಶಿ ನಿರಂಜನ್ ಮೂರ್ತಿ, ಮುಖಂಡರಾದ ಬುಕ್ಕಾಪಟ್ಟಣ ಮಂಜುನಾಥ್, ಸತ್ಯನಾರಾಯಣ್, ನೇರಲಗುಡ್ಡ ಶಿವಕುಮಾರ್, ಶಾಂತಣ್ಣ, ಕರಿಯಣ್ಣ, ತಿಪ್ಪೇಸ್ವಾಮಿ, ಗಾಣದಹುಣಿಸೆ ಶಾಂತಣ್ಣ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.