ತುಮಕೂರು: ನಗರದ ದಾನ ಪ್ಯಾಲೇಸ್ ಹಿಂಭಾಗದ ಕುರಿಪಾಳ್ಯದಲ್ಲಿರುವ ಪರಿಶಿಷ್ಟರ ಸ್ಮಶಾನಕ್ಕೆ ಯುಜಿಡಿ ಮತ್ತು ಚರಂಡಿ ನೀರು ಹರಿಯುತ್ತಿದ್ದು, ಅಂತ್ಯ ಸಂಸ್ಕಾರಕ್ಕಾಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಅವೈಜ್ಞಾನಿಕ ಕಾಮಗಾರಿ ಮಾಡಿದ್ದು, ಚರಂಡಿ ತುಂಬಿ ಹರಿದರೆ ಕಲುಷಿತ ನೀರು ಸೀದಾ ಸ್ಮಶಾನಕ್ಕೆ ಹರಿಯುತ್ತವೆ. ಒಂದು ಹೆಜ್ಜೆ ಮುಂದಿಡಲು ಆಗದ ರೀತಿಯಲ್ಲಿ ನೀರು ತುಂಬಿಕೊಂಡಿವೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸುವುದನ್ನೇ ಮರೆತಿದ್ದಾರೆ. ಹಲವರು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ರವಿಕುಮಾರ್, ನರಸಿಂಹಮೂರ್ತಿ ಗೌಡ, ಕಿಶೋರ್ ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿ ವರ್ಷ ಇದೇ ರೀತಿಯ ಸಮಸ್ಯೆಯಾಗುತ್ತದೆ. ಮಳೆಗಾಲದಲ್ಲಂತೂ ನಮ್ಮ ಕಷ್ಟ ದೇವರಿಗೆ ಪ್ರೀತಿ ಎಂಬಂತಾಗುತ್ತದೆ. ಅಂತ್ಯಸಂಸ್ಕಾರಕ್ಕೆ ಹೋಗಲು ಸರಿಯಾದ ವ್ಯವಸ್ಥೆ ಇಲ್ಲದೆ ಸಂಕಷ್ಟ ಅನುಭವಿಸುವಂತಾಗಿದೆ. ಪರಿಶಿಷ್ಟ ಸಮುದಾಯದ ಜನರು ಹೆಚ್ಚಾಗಿ ವಾಸಿಸುತ್ತಿರುವುದರಿಂದ ಈ ಪ್ರದೇಶದ ಅಭಿವೃದ್ಧಿ, ಅಗತ್ಯ ಮೂಲಭೂತ ಸೌಕರ್ಯ ಒದಗಿಸಲು ಅಧಿಕಾರಿಗಳು ಇಚ್ಛಾಶಕ್ತಿ ತೋರುತ್ತಿಲ್ಲ ಎಂದು ದೂರಿದರು.
ಚರಂಡಿ ನಿರ್ಮಾಣ ಮತ್ತು ಯುಜಿಡಿ ಕಾಮಗಾರಿಯೂ ಸರಿಯಾಗಿ ನಡೆದಿಲ್ಲ. ಕಲುಷಿತ ನೀರು ಸರಾಗವಾಗಿ ಹರಿದು ಹೋಗಲು ಯಾವುದೇ ರೀತಿಯ ವ್ಯವಸ್ಥೆ ಮಾಡಿಲ್ಲ. ಶಾಸಕರು, ಸಂಸದರು, ಅಧಿಕಾರಿಗಳು ಸೇರಿದಂತೆ ಎಲ್ಲರು ಪರಿಶಿಷ್ಟರ ಬಗ್ಗೆ ನಿರ್ಲಕ್ಷ್ಯ ಭಾವನೆ ತೋರುತ್ತಿದ್ದಾರೆ. ಜನಪ್ರತಿನಿಧಿಗಳಿಗೆ ಚುನಾವಣೆಯ ಹೊತ್ತಲ್ಲಿ ಮಾತ್ರ ನಾವು ನೆನಪಾಗುತ್ತೇವೆ. ನಂತರ ಸಂಪೂರ್ಣವಾಗಿ ಮರೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.