ತುಮಕೂರು: ಕೊಳವೆ ಮೂಲಕ ಮನೆಗಳಿಗೆ ಅಡುಗೆ ಅನಿಲ ಸಂಪರ್ಕ ಕಲ್ಪಿಸಿದ್ದರೂ ಸಮರ್ಪಕವಾಗಿ ಅನಿಲ
ಪೂರೈಕೆ ಮಾಡದಿರುವುದಕ್ಕೆ ಮಹಿಳೆಯರು ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಎಸ್‌ಐಟಿ ಮುಖ್ಯರಸ್ತೆಯಲ್ಲಿರುವ ಅನಿಲ ಪೂರೈಕೆ ಸಂಸ್ಥೆ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.
ಎಸ್‍ಐಟಿ ಮುಖ್ಯ ರಸ್ತೆಯಲ್ಲಿರುವ ಕೆಲ ಮನೆಗಳಲ್ಲಿ ಕಳೆದ ಕೆಲ ದಿನಗಳಿಂದ ಪೈಪ್‍ಲೈನ್‍ನಲ್ಲಿ ಅಡುಗೆ ಅನಿಲ ಸರಬರಾಜಾಗುತ್ತಿಲ್ಲ. ಇದರಿಂದ ಅಡುಗೆ ಮಾಡಲು ಪರದಾಡುವಂತಹ ಪರಿಸ್ಥಿತಿನಿರ್ಮಾಣವಾಗಿದೆ. ಅಲ್ಲದೆ ಸಿಲಿಂಡರ್‌ನಲ್ಲಿ ಗ್ಯಾಸ್ ವಾಸನೆ ಬರುತ್ತಿದೆ. ಈ ಬಗ್ಗೆ ಸಂಬಂಧಿಸಿದ ಸಂಸ್ಥೆಯವರಿಗೆ ಮಾಹಿತಿ ನೀಡಿದರೂ ಕ್ರಮ ಕೈಗೊಂಡಿಲ್ಲ. ಹಾರಿಕೆ ಉತ್ತರ ನೀಡುತ್ತಿದ್ದಾರೆ. ಅಡುಗೆ ಮಾಡುವುದು ಹೇಗೆ, ಊಟವಿಲ್ಲದೆ ಹಸಿವಿನಿಂದ ನರಳುವಂತಾಗಿದೆ. ಆದರೂ ಸಮಸ್ಯೆ ಸರಿಪಡಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಮೂರು ದಿನಗಳಿಂದ ಮನೆಯಲ್ಲಿ ಗ್ಯಾಸ್ ವಾಸನೆ ಬರುತ್ತಿದೆ. ಈ ಬಗ್ಗೆ ಸಂಸ್ಥೆಯವರಿಗೆ ಮಾಹಿತಿ ನೀಡಿದರೂ ಕ್ರಮ ಕೈಗೊಂಡಿಲ್ಲ. ಇದರಿಂದ ಅಡುಗೆ ಮನೆಯೊಳಗೆ ಹೋಗಲು ಹೆದರುವಂತಾಗಿದೆ. ನಮಗೆ ಸಮರ್ಪಕ ಮಾಹಿತಿ ನೀಡದೆ ಇರುವುದರಿಂದ ತುಂಬಾ ತೊಂದರೆಯಾಗಿದೆ’ ಎಂದು 26ನೇ ವಾರ್ಡ್‍ನ ಗೃಹಿಣಿ ಜ್ಯೋತಿ ಆರೋಪಿಸಿದರು.
ಗ್ಯಾಸ್ ಪೈಪ್‍ಲೈನ್ ಅಳವಡಿಕೆಯಿಂದಾಗಿ ಬೇರೆ ಗ್ಯಾಸ್ ಸಿಲಿಂಡರ್ ಅಳವಡಿಸಿಕೊಂಡಿಲ್ಲ. ಕೂಡಲೇ ಸಂಸ್ಥೆಯವರು ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ತಿಲಕ್‍ಪಾರ್ಕ್ ಠಾಣೆ ಸರ್ಕಲ್‌ಇನ್ಸ್‌ಪೆಕ್ಟರ್ ಮುನಿರಾಜು, ಹೊಸಬಡಾವಣೆ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ರಾಮಕೃಷ್ಣಪ್ಪ ಭೇಟಿ ನೀಡಿ ಗ್ಯಾಸ್ ಸಂಸ್ಥೆಯವರ ಜತೆ ಚರ್ಚಿಸಿದರು. ಕೂಡಲೇ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.