ADVERTISEMENT

ಹಿಂದಿನಂತೆ ವಾರದಲ್ಲಿ 2 ದಿನ ಕೊಬ್ಬರಿ ಹರಾಜು

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 14:37 IST
Last Updated 18 ಅಕ್ಟೋಬರ್ 2024, 14:37 IST
ಕೊಬ್ಬರಿ
ಕೊಬ್ಬರಿ   

ತಿಪಟೂರು: ಇಲ್ಲಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಹಿಂದಿನಂತೆ ವಾರದಲ್ಲಿ ಎರಡು ದಿನ ಕೊಬ್ಬರಿ ಹರಾಜು ನಡೆಯಲಿದೆ. ಆದರೆ ಹರಾಜಿನ ದಿನ ಮಾತ್ರ ಬದಲಾಗಿದೆ.

ಪ್ರಸ್ತುತ ಬುಧವಾರ, ಶನಿವಾರ ನಡೆಯುತ್ತಿದ್ದ ಹರಾಜು ಪ್ರಕ್ರಿಯೆ ನ. 1ರಿಂದ ಸೋಮವಾರ ಹಾಗೂ ಗುರುವಾರ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ. ಹೊಸ ವ್ಯವಸ್ಥೆಯಲ್ಲಿ ನ. 4ರಂದು ಹರಾಜು ಪ್ರಕ್ರಿಯೆ ಆರಂಭವಾಗಲಿದೆ.

ಬುಧವಾರ, ಶನಿವಾರ ಮಧ್ಯಾಹ್ನ 2 ಗಂಟೆಗೆ ನಡೆಯುತ್ತಿದ್ದ ಹರಾಜು ಪ್ರಕ್ರಿಯೆ ಬದಲಿಸಿ ವಾರದಲ್ಲಿ ಸೋಮವಾರ, ಬುಧವಾರ, ಶುಕ್ರವಾರ ಹರಾಜು ನಡೆಸಲು ನಿರ್ಧರಿಸಲಾಗಿತ್ತು. ಆದರೆ ಈಗ ಮತ್ತೆ ಹರಾಜಿನ ದಿನ ಬದಲಿಸಿದ್ದು, ಸೋಮವಾರ, ಗುರುವಾರ ನಡೆಸಲು ನಿರ್ಧರಿಸಲಾಗಿದೆ.

ADVERTISEMENT

ರೈತರು, ದಲ್ಲಾಲರು, ಟ್ರೇಡರ್ಸ್‌ಗಳ ಸಭೆಯಲ್ಲಿ ಚರ್ಚಿಸಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಶಾಸಕ ಕೆ.ಷಡಕ್ಷರಿ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.

ಹಿಂದೆ ಶನಿವಾರ ನಡೆಯುತ್ತಿದ್ದ ಹರಾಜಿನಿಂದ ರೈತರು, ವರ್ತಕರಿಗೆ ಸಮಸ್ಯೆಯಾಗಿತ್ತು. ಎರಡು ಹಾಗೂ ನಾಲ್ಕನೇ ಶನಿವಾರ ಬ್ಯಾಂಕ್ ರಜೆಯಿಂದಾಗಿ ಕೊಬ್ಬರಿ ಮಾರಾಟ ಮಾಡಿದ ರೈತರಿಗೆ ಹಣ ಬಟವಾಡೆ ಮಾಡುವುದು ಕಷ್ಟಕರವಾಗಿತ್ತು. ಮುಂದಿನ ದಿನಗಳಲ್ಲಿ ಎಲ್ಲಾ ಶನಿವಾರ ಬ್ಯಾಂಕ್‌ಗಳಿಗೆ ರಜೆ ನೀಡುವ ಸಾಧ್ಯತೆ ಇದೆ. ಹಾಗಾಗಿ ಶನಿವಾರದ ಬದಲು ಗುರುವಾರ ಹರಾಜು ನಡೆಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಎಪಿಎಂಸಿ ಮಾರುಕಟ್ಟೆಗೆ ರೈತರು ಕೊಬ್ಬರಿ ತಗೆದುಕೊಂಡು ಬಂದ ಸಮಯದಲ್ಲಿ ಮುಖ್ಯ ದ್ವಾರದಲ್ಲಿ ದಾಸ್ತಾನು ನೋಂದಣಿ ಕಡ್ಡಾಯ ಮಾಡಲಾಗಿದೆ. ದಲ್ಲಾಲರು ತಮ್ಮ ಅಂಗಡಿಯಲ್ಲಿ ನಿಗದಿಯಾಗುವ ಅತಿ ಹೆಚ್ಚಿನ ಟೆಂಡರ್ ಬೆಲೆಯನ್ನು ರೈತರಿಗೆ ನೀಡಬೇಕು. ಬೇರೆ ಅಂಗಡಿಯ ಧಾರಣೆ ನೋಡಿಕೊಂಡು ಗದಿಪಡಿಸುವಂತಿಲ್ಲ. ಹರಾಜಿನ ದಿನ ನಿಗದಿಪಡಿಸುವ ಬೆಲೆ ರೈತರಿಗೆ ಒಪ್ಪಿಗೆ ಆಗದಿದ್ದರೆ ಟೆಂಡರ್ ರದ್ದುಪಡಿಸಿ, ಮುಂದಿನ ಟೆಂಡರ್‌ಗೆ ಬಿಡಬಹುದು ಎಂದು ಹೇಳಿದರು.

ರೈತರು ತಂದ ಕೊಬ್ಬರಿಯನ್ನು ಗರಿಷ್ಠ ಮೂರು ಟೆಂಡರ್ ವರೆಗೆ ದಲ್ಲಾಲರ ಅಂಗಡಿಯಲ್ಲಿ ಇಡಬಹುದು. ಅದಕ್ಕಿಂತ ಹೆಚ್ಚಿನ ಸಮಯ ಇಡುವಂತಿಲ್ಲ. ಒಂದು ವೇಳೆ ಹೆಚ್ಚು ದಿನ ಇಟ್ಟುಕೊಂಡರೆ ಅಂತಹ ಅಂಗಡಿಗಳ ಮೇಲೆ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಕೊಬ್ಬರಿ ಮಾರುಕಟ್ಟೆ ಉತ್ತೇಜಿಸಲು ತಾಲ್ಲೂಕಿನಲ್ಲಿ ಉಪ ಮಾರುಕಟ್ಟೆಗಳನ್ನು ತೆರೆಯಲಾಗುವುದು ಎಂದರು.

ಎಪಿಎಂಸಿ ಸಹಕಾರ್ಯದರ್ಶಿ ಹನುಮಂತರಾಜು ಗೋಷ್ಠಿಯಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.