ADVERTISEMENT

ತುಮಕೂರು: ಕ್ವಿಂಟಲ್‌ಗೆ ₹15 ಸಾವಿರ ದಾಟಿದ ಕೊಬ್ಬರಿ ಬೆಲೆ

ತಗ್ಗಿದ ಆವಕ, ಹೆಚ್ಚಿದ ಬೇಡಿಕೆ; ಉತ್ತರ ಭಾರದ ರಾಜ್ಯಗಳಿಂದಲೂ ಖರೀದಿ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2024, 15:45 IST
Last Updated 11 ಸೆಪ್ಟೆಂಬರ್ 2024, 15:45 IST
ಕೊಬ್ಬರಿ
ಕೊಬ್ಬರಿ   

ತುಮಕೂರು: ಏರಿಕೆಯತ್ತ ಮುಖ ಮಾಡಿರುವ ಕೊಬ್ಬರಿ ಬೆಲೆ ಬುಧವಾರ ಕ್ವಿಂಟಲ್‌ಗೆ ₹15 ಸಾವಿರ ದಾಟಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಕ್ವಿಂಟಲ್‌ ಕೊಬ್ಬರಿ ₹15,022ಕ್ಕೆ ಹರಾಜಾಗಿದೆ. ಕನಿಷ್ಠ ₹13,800 ದರ ಸಿಕ್ಕಿದೆ. ಮಾರುಕಟ್ಟೆಗೆ ಬುಧವಾರ 2,150 ಕ್ವಿಂಟಲ್ (5,002 ಚೀಲ) ಆವಕವಾಗಿತ್ತು. ಕಳೆದ ಬುಧವಾರದ ಹರಾಜಿನಲ್ಲಿ ಕ್ವಿಂಟಲ್ ₹12,555ಕ್ಕೆ ಮಾರಾಟವಾಗಿತ್ತು. ಒಂದೇ ವಾರದ ಅಂತರದಲ್ಲಿ ₹2,500 ಹೆಚ್ಚಳ ದಾಖಲಿಸಿದೆ.

ಮೂರು ವಾರದ ಹಿಂದೆ ಕ್ವಿಂಟಲ್ ₹12 ಸಾವಿರ ದಾಟಿತ್ತು. ನಂತರದ ದಿನಗಳಲ್ಲಿ ಮತ್ತೆ ಇಳಿಕೆಯತ್ತ ಸಾಗಿತ್ತು. ಕೆಲವು ವಾರ ಏರಿಳಿತ ಕಂಡ ಧಾರಣೆ ಈಗ ಒಮ್ಮೆಲೆ ₹15 ಸಾವಿರ ದಾಟಿದೆ. ಅರಸೀಕೆರೆ ಮಾರುಕಟ್ಟೆಯಲ್ಲೂ ಇದೇ ಬೆಲೆಗೆ ಕೊಬ್ಬರಿ ಮಾರಾಟವಾಗಿದೆ.

ADVERTISEMENT

ಆಯುಧ ಪೂಜೆ, ದೀಪಾವಳಿ ಹಬ್ಬ ಬರುತ್ತಿದ್ದು, ಉತ್ತರ ಭಾರತದಲ್ಲಿ ಇಲ್ಲಿನ ಕೊಬ್ಬರಿಗೆ ಬೇಡಿಕೆ ಬಂದಿದೆ. ಜತೆಗೆ ತಮಿಳುನಾಡು, ಕೇರಳದಲ್ಲಿ ಕೊಬ್ಬರಿ ಎಣ್ಣೆ ಹಾಗೂ ಇತರೆ ಉಪ ಉತ್ಪನ್ನಗಳ ತಯಾರಿಕೆ ಉದ್ಯಮಗಳು ಆರಂಭವಾಗಿದ್ದು, ಹೆಚ್ಚು ಗುಣಮಟ್ಟ ಹೊಂದಿರುವ ತಿಪಟೂರು ಭಾಗದ ಕೊಬ್ಬರಿಯನ್ನು ಅಧಿಕ ಪ್ರಮಾಣದಲ್ಲಿ ಖರೀದಿಸಲಾಗುತ್ತಿದೆ. ಇದರಿಂದಲೂ ಬೇಡಿಕೆ ಹೆಚ್ಚಾಗಿದ್ದು, ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.

ಕೊಬ್ಬರಿಗಿಂತ ಎಳನೀರು ಮಾರಾಟ ಲಾಭದಾಯಕ

ಹಬ್ಬದ ಸಮಯದಲ್ಲಿ ಬೇಡಿಕೆ ಹೆಚ್ಚಾಗಿದ್ದು ನಿರೀಕ್ಷಿಸಿದಷ್ಟು ಆವಕ ಬರುತ್ತಿಲ್ಲ. ಕಳೆದ ವರ್ಷ ತೀವ್ರ ಬರದಿಂದಾಗಿ ಇಳುವರಿ ಗಣನೀಯವಾಗಿ ಕಡಿಮೆಯಾಗಿದೆ. ಜತೆಗೆ ಎಳನೀರಿಗೆ ಬೇಡಿಕೆ ಇರುವುದರಿಂದ ಕೊಬ್ಬರಿ ಮಾಡುವ ಬದಲು ಎಳನೀರು ಮಾರಾಟ ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಒಂದು ಎಳನೀರು ₹50ರಿಂದ ₹60ರ ವರೆಗೆ ಮಾರಾಟವಾಗುತ್ತಿದೆ. ರೈತರಿಂದ ₹25ರಿಂದ ₹30ರ ವರೆಗೂ ಖರೀದಿ ಮಾಡಲಾಗುತ್ತಿದೆ. ಕೊಬ್ಬರಿಗಿಂತ ಎಳನೀರಿಗೆ ಉತ್ತಮ ಬೆಲೆ ಸಿಗುತ್ತಿದ್ದು ಸಾಕಷ್ಟು ರೈತರು ಕೊಬ್ಬರಿ ಆಗುವವರೆಗೂ ಕಾಯದೆ ಮಾರಾಟಕ್ಕೆ ಮುಂದಾಗಿದ್ದಾರೆ. ಹಾಗಾಗಿ ಕೊಬ್ಬರಿ ಉತ್ಪಾದನೆ ಕಡಿಮೆಯಾಗಿದ್ದು ಬೇಡಿಕೆ ಕಂಡುಕೊಂಡಿದೆ ಎಂದು ವರ್ತಕರು ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.