ತಿಪಟೂರು (ತುಮಕೂರು ಜಿಲ್ಲೆ): ಮಾರುಕಟ್ಟೆಯಲ್ಲಿ ಕೊಬ್ಬರಿ ಬೆಲೆ ದಿಢೀರ್ ಕುಸಿತ ಕಂಡಿದ್ದು ರೈತರು ಕಂಗಾಲಾಗಿದ್ದಾರೆ. ಮೂರೇ ದಿನದಲ್ಲಿ ₹1,300 ಕಡಿಮೆಯಾಗಿದೆ.
ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಸೆ. 11ರಂದು ಕ್ವಿಂಟಲ್ ಕೊಬ್ಬರಿ ₹15,022ಕ್ಕೆ ಹರಾಜಾಗಿತ್ತು. ಶನಿವಾರ ₹13,700ಕ್ಕೆ ಕುಸಿದಿದೆ. ಮೂರು ದಿನದ ಹಿಂದೆ 2,150 ಕ್ವಿಂಟಲ್ (5,002 ಚೀಲ) ಆವಕವಾಗಿತ್ತು. ಶನಿವಾರ 4,304 ಕ್ವಿಂಟಲ್ (10,011 ಚೀಲ) ಕೊಬ್ಬರಿಯನ್ನು ಮಾರುಕಟ್ಟೆಗೆ ತರಲಾಗಿತ್ತು. ಕನಿಷ್ಠ ₹13 ಸಾವಿರ ದರ ಸಿಕ್ಕಿದೆ.
ಜಿಲ್ಲೆಯ ವಿವಿಧ ಭಾಗದ ರೈತರು ಬೆಲೆ ಏರಿಕೆಯ ಆಶಾಭಾವನೆಯೊಂದಿಗೆ ಹಲವು ದಿನಗಳಿಂದ ಸಂಗ್ರಹಿಸಿಟ್ಟಿದ್ದ ಕೊಬ್ಬರಿಯನ್ನು ಮಾರುಕಟ್ಟೆಗೆ ತಂದಿದ್ದರು. ದರ ಇಳಿಕೆ ಆಗಿರುವುದನ್ನು ಕಂಡು ಸಪ್ಪೆ ಮೊರೆ ಹೊತ್ತು ಮನೆಗಳಿಗೆ ವಾಪಸಾದರು.
2023ರ ಜನವರಿಯಲ್ಲಿ ಕ್ವಿಂಟಲ್ ₹10 ಸಾವಿರಕ್ಕೆ ಇಳಿಕೆ ಕಂಡಿತ್ತು. ನಂತರ ದಿನಗಳಲ್ಲಿ ಸತತವಾಗಿ ಕುಸಿತ ಕಂಡು ₹8 ಸಾವಿರಕ್ಕೆ ತಲುಪಿತ್ತು. ಕಳೆದ ಎರಡು ತಿಂಗಳಿನಿಂದ ಬೆಲೆಯಲ್ಲಿ ಸ್ವಲ್ಪ ಚೇತರಿಕೆ ಕಂಡುಬಂದಿತ್ತು. ಆಗಸ್ಟ್ ಅಂತ್ಯಕ್ಕೆ ₹11,950, ಸೆ.4ರಂದು ₹12,555ಕ್ಕೆ ಬಂದು ನಿಂತಿತ್ತು.
ಕಳೆದ ಮಾರುಕಟ್ಟೆಯ ಹರಾಜಿನಲ್ಲಿ ದಾಖಲೆಯ ₹15 ಸಾವಿರ ದಾಟಿತ್ತು. ‘ಬೆಲೆ ಮತ್ತಷ್ಟು ಏರಿಕೆಯಾಗಬಹುದು. ಇಷ್ಟು ದಿನದ ಕಾಯುವಿಕೆಗೆ ಕೊನೆಗೂ ಮುಕ್ತಿ ಸಿಗಲಿದೆ’ ಎಂದು ಜಿಲ್ಲೆಯ ರೈತರು ಅಂದಾಜಿಸಿದ್ದರು. ಆದರೆ, ಕೊಬ್ಬರಿ ಬೆಲೆ ಮೂರೇ ದಿನಗಳಲ್ಲಿ ಇಳಿಕೆಯತ್ತ ಸಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.