ADVERTISEMENT

ತುಮಕೂರು | ಕೊಬ್ಬರಿ ಖರೀದಿ ವಿಳಂಬ: ರೈತರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2024, 6:45 IST
Last Updated 27 ಮಾರ್ಚ್ 2024, 6:45 IST
ಕೊಬ್ಬರಿ
ಕೊಬ್ಬರಿ   

ತುಮಕೂರು: ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿ ಮಾಡುವಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ವಿಫಲವಾಗಿದ್ದು, ಏ. 5ರ ಒಳಗೆ ನಾಫೆಡ್ ಖರೀದಿ ಕೇಂದ್ರ ಆರಂಭವಾಗದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಸಂಘ ಎಚ್ಚರಿಸಿದೆ.

ಕೊಬ್ಬರಿ ಮಾರಾಟ ಮಾಡಲು ರೈತರು ನೋಂದಣಿ ಮಾಡಿಸಿಕೊಂಡು ಕಾಯುತ್ತಿದ್ದರೂ ಈವರೆಗೂ ಖರೀದಿ ಆರಂಭಿಸಿಲ್ಲ. ಕಾಯಿ ಸಿಪ್ಪೆ ಸುಲಿದು ಕೊಬ್ಬರಿ ಸಿದ್ಧಮಾಡಿ ಇಟ್ಟುಕೊಂಡಿದ್ದು, ದಿನದಿಂದ ದಿನಕ್ಕೆ ತೂಕ ಕಡಿಮೆಯಾಗುತ್ತಿದೆ. ತಕ್ಷಣ ಖರೀದಿ ಆರಂಭಿಸಬೇಕು. ಇಲ್ಲವಾದರೆ ರೈತರಿಂದ ತೀವ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಗೋವಿಂದರಾಜು ತಿಳಿಸಿದ್ದಾರೆ.

ವಿದೇಶಗಳಿಂದ ಸುಂಕ ರಹಿತವಾಗಿ ಖಾದ್ಯ ತೈಲ, ಎಣ್ಣೆ ಕಾಳುಗಳು, ಕೊಬ್ಬರಿಯನ್ನು ಆಮದು ಮಾಡಿಕೊಳ್ಳುತ್ತಿದ್ದು, ಇದರಿಂದ ಕೊಬ್ಬರಿ ಬೆಲೆ ಕುಸಿದಿದೆ. ತಕ್ಷಣ ಆಮದು ನಿಲ್ಲಿಸಬೇಕು. ಕೃಷಿ ಬೆಲೆ ನಿಗದಿ ಆಯೋಗದ ವರದಿಯಂತೆ ಕೊಬ್ಬರಿ ಕ್ವಿಂಟಲ್‌ಗೆ ₹16,730 ನಿಗದಿಪಡಿಸಬೇಕು. ಶೇ 50ರಷ್ಟು ಲಾಭಾಂಶ ಸೇರಿಸಿ ₹25 ಸಾವಿರ ಬೆಲೆ ನಿಗದಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ADVERTISEMENT

ವಿದ್ಯುತ್ ಸಮಸ್ಯೆ ತೀವ್ರವಾಗಿದ್ದು, ದಿನಕ್ಕೆ 7 ಗಂಟೆ ಸರಬರಾಜು ಮಾಡುವುದಾಗಿ ಹೇಳಿದ್ದ ಸರ್ಕಾರ, ಈಗ ಒಂದು ಗಂಟೆಯೂ ಕೊಡುತ್ತಿಲ್ಲ. ಪರೀಕ್ಷೆ ಸಮಯದಲ್ಲಿ ವಿದ್ಯುತ್ ಕಡಿತದಿಂದ ಮಕ್ಕಳು ಅಭ್ಯಾಸ ಮಾಡುವುದು ಕಷ್ಟಕರವಾಗಿದೆ. ವಿದ್ಯುತ್ ಸಂಪರ್ಕ ‍ಪಡೆದುಕೊಳ್ಳಲು ಇನ್ನು ಮುಂದೆ ರೈತರೇ ಪರಿಕರಗಳನ್ನು ನೀಡುವಂತೆ ಅವೈಜ್ಞಾನಿಕವಾಗಿ ಹೊರಡಿಸಿರುವ ಆದೇಶವನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ಎಲ್ಲೆಡೆ ತೀವ್ರ ಬರಗಾಲವಿದ್ದು, ಜಾನುವಾರುಗಳಿಗೆ ಕುಡಿಯುವ ನೀರು, ಮೇವು ಸಿಗದಾಗಿದೆ. ಸರ್ಕಾರ ಮಾತ್ರ ಯಾವುದೇ ಪರಿಹಾರ ರೂಪಿಸಿಲ್ಲ. ಗೋಶಾಲೆ ತೆರೆಯಬೇಕು. ಬೇಡಿಕೆ ಹೆಚ್ಚಿದೆ ಎಂಬ ಕಾರಣಕ್ಕೆ ಕೊಳವೆ ಬಾವಿ ಕೊರೆಯಲು ಬೋರ್‌ವೆಲ್ ಯಂತ್ರಗಳ ಮಾಲೀಕರು ಅಡಿಗೆ ₹15–20 ಏರಿಕೆ ಮಾಡಿದ್ದಾರೆ. ಜಿಲ್ಲಾ ಆಡಳಿತ ಸಭೆ ನಡೆಸಿ ಹೆಚ್ಚಿಸಿರುವ ಬೆಲೆ ಕಡಿಮೆ ಮಾಡಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.