ADVERTISEMENT

ತುಮಕೂರು: ಬುಕ್ಕಾಪಟ್ಟಣದಲ್ಲಿ ವಿಷಕಾರಿ ಹವಳದ ಹಾವು ಪತ್ತೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2024, 18:38 IST
Last Updated 10 ಆಗಸ್ಟ್ 2024, 18:38 IST
ಶಿರಾ ತಾಲ್ಲೂಕಿನ ಬುಕ್ಕಾಪಟ್ಟಣ ವನ್ಯಜೀವಿ ಧಾಮದಲ್ಲಿ ಪತ್ತೆಯಾದ ಅತ್ಯಂತ ವಿಷಕಾರಿ ಸಣ್ಣ ಹವಳದ ಹಾವು
ಶಿರಾ ತಾಲ್ಲೂಕಿನ ಬುಕ್ಕಾಪಟ್ಟಣ ವನ್ಯಜೀವಿ ಧಾಮದಲ್ಲಿ ಪತ್ತೆಯಾದ ಅತ್ಯಂತ ವಿಷಕಾರಿ ಸಣ್ಣ ಹವಳದ ಹಾವು   

ತುಮಕೂರು: ದೇಶದಲ್ಲಿ ಕಂಡುಬರುವ ವಿಷಯುಕ್ತ ಹಾವುಗಳಲ್ಲಿ ಅತ್ಯಂತ ವಿಷಕಾರಿಯಾದ ತೆಳ್ಳಗಿನ ದೆಹದ ಹವಳದ ಹಾವು ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಪತ್ತೆಯಾಗಿದೆ.

ಇಂಗ್ಲಿಷ್‌ನಲ್ಲಿ ಕೋರಲ್‌ ಸ್ನೇಕ್‌ ಎಂದು ಕರೆಯಲಾಗುವ ಈ ಹಾವಿನ ವೈಜ್ಞಾನಿಕ ಹೆಸರು ಕ್ಯಾಲಿಯೋಫಿಸ್ ಮೆಲನರಸ್. ಶಿರಾ ತಾಲ್ಲೂಕಿನ ಬುಕ್ಕಾಪಟ್ಟಣ ವನ್ಯಜೀವಿ ಧಾಮದಲ್ಲಿ ಈ ಹಾವು ಕಂಡುಬಂದಿದೆ.

ಹವಳದ ಹಾವುಗಳು ಸುಮಾರು 30ರಿಂದ 40 ಸೆಂ.ಮೀ ಉದ್ದವಿರುತ್ತವೆ. ತಲೆಯಿಂದ ಬಾಲದವರೆಗೆ ತೆಳ್ಳಗಿನ ಸಿಲಿಂಡರ್ ಆಕಾರದಲ್ಲಿ ದೇಹ ಏಕರೂಪವಾಗಿರುತ್ತದೆ. ದೇಹದ ಮೇಲ್ಮೈ ಕಂದು ಬಣ್ಣ ಹೊಂದಿದ್ದರೆ, ಕೆಳ ಭಾಗ ಹಳದಿ ಮಿಶ್ರಿತ ಕಿತ್ತಳೆ ಬಣ್ಣದಿಂದ ಕೂಡಿರುತ್ತದೆ. ತಲೆ, ಕುತ್ತಿಗೆ ಕಪ್ಪು ಬಣ್ಣದ ಪಟ್ಟೆಗಳಿದ್ದು ಸಣ್ಣ ಕಣ್ಣುಗಳಿರುತ್ತವೆ. ಬಾಲದ ತುದಿ ಮೊಂಡಾಗಿದ್ದು, ಎರಡು ಕಪ್ಪು ಬಣ್ಣದ ಗೆರೆಗಳಿರುತ್ತವೆ. 

ADVERTISEMENT

ಇವು ನಿಶಾಚಾರಿಗಳಾಗಿದ್ದು, ರಾತ್ರಿ ವೇಳೆ ಚಟುವಟಿಕೆ ಹೆಚ್ಚಾಗಿರುತ್ತದೆ. ಹುಳುಹಾವು, ಗೆದ್ದಲು, ಇರುವೆ, ಇತರೆ ಕೀಟಗಳ ಮೊಟ್ಟೆಗಳನ್ನು ತಿಂದು ಬದುಕುತ್ತವೆ ಎಂದಿದ್ದಾರೆ.

ಈ ಹಾವುಗಳು ದಕ್ಷಿಣ ಭಾರತದ ದಖ್ಖನ್ ಪ್ರಸ್ಥಭೂಮಿಯ ಒಣ ಎಲೆ ಉದುರುವ ಕಾಡು ಹಾಗೂ ತೇವ ಭರಿತ ಎಲೆ ಉದುರುವ ಕಾಡುಗಳಲ್ಲಿ ಕಂಡುಬರುತ್ತವೆ. ತೇವ ಭರಿತ ಮೃದು ಮಣ್ಣು, ಕಲ್ಲುಗಳ ಕೆಳಗೆ ಒಣಗಿ ಬಿದ್ದು ಕೊಳೆಯುತ್ತಿರುವ ಮರಗಳು, ಒಣ ತರಗೆಲೆಗಳ ಕೆಳಗೆ ವಾಸಿಸುತ್ತವೆ ಎಂದು ಅಧ್ಯಯನ ನಡೆಸಿದ ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆ ಅಧ್ಯಕ್ಷ ಬಿ.ವಿ.ಗುಂಡಪ್ಪ ಮಾಹಿತಿ ನೀಡಿದ್ದಾರೆ.

ಈ ಅಧ್ಯಯನ ತಂಡದಲ್ಲಿ ಬಿ.ವಿ.ಗುಂಡಪ್ಪ, ಜಿ.ಎಸ್.ಮಹೇಶ್, ಡಿ.ಆರ್.ಪ್ರಸನ್ನಕುಮಾರ್, ಚಂದ್ರಶೇಖರ್, ವೆಂಕಟೇಶ್, ಎಂ.ಮಲ್ಲಿಕಾರ್ಜುನ್ ಭಾಗವಹಿಸಿದ್ದರು.

ಈವರೆಗೆ ಜಿಲ್ಲೆಯಲ್ಲಿ ಒಟ್ಟು 38 ಪ್ರಬೇಧದ ಹಾವುಗಳನ್ನು ಗುರುತಿಸಿದ್ದು, ಅದರಲ್ಲಿ ಆರು ವಿಷಯುಕ್ತ ಹಾವು. ಜಗತ್ತಿನಲ್ಲಿ ಸುಮಾರು 3,789 ಪ್ರಬೇಧದದ ಹಾವುಗಳಿದ್ದರೆ, ದೇಶದಲ್ಲಿ 300 ಪ್ರಬೇಧದ ಹಾವುಗಳಿವೆ. ಅವುಗಳಲ್ಲಿ 60 ವಿಷಯುಕ್ತ ಹಾವುಗಳಾಗಿವೆ. 40ಕ್ಕಿಂತ ಹೆಚ್ಚು ಅರೆ ವಿಷಕಾರಿ ಹಾವು ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.