ADVERTISEMENT

ಭ್ರಷ್ಟಾಚಾರದ ಸರಮಾಲೆ: ಬಿಜೆಪಿ ಟೀಕೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2024, 5:07 IST
Last Updated 4 ಜುಲೈ 2024, 5:07 IST
ಸುರಭಿ ಹೊದಿಗೆರೆ
ಸುರಭಿ ಹೊದಿಗೆರೆ   

ತುಮಕೂರು: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದ್ದು, ದಿನಕ್ಕೊಂದು ಹಗರಣಗಳು ಹೊರ ಬರುತ್ತಿವೆ ಎಂದು ಬಿಜೆಪಿ ರಾಜ್ಯ ವಕ್ತಾರರಾದ ಸುರಭಿ ಹೊದಿಗೆರೆ ಇಲ್ಲಿ ಬುಧವಾರ ವಾಗ್ದಾಳಿ ನಡೆಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ₹187 ಕೋಟಿ ದುರುಪಯೋಗ ಹಗರಣ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆದಿರುವ ₹5 ಸಾವಿರ ಕೊಟಿ ಹಗರಣವನ್ನು ಸಿಬಿಐಗೆ ವಹಿಸಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ಪರಿಶಿಷ್ಟ ಪಂಗಡದವರ ಅಭಿವೃದ್ಧಿಗೆ ಮೀಸಲಾಗಿದ್ದ ವಾಲ್ಮೀಕಿ ಅಭಿವೃದ್ಧಿ ನಿಗಮದ ₹187 ಕೋಟಿ ಲೂಟಿ ಮಾಡಲಾಗಿದೆ. ಮುಡಾದಲ್ಲಿ ದೊಡ್ಡ ಹಗರಣ ನಡೆದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಪತ್ನಿ ಹೆಸರಿನಲ್ಲಿ ನಿಯಮ ಬಾಹಿರವಾಗಿ ಬೆಲೆ ಬಾಳುವ ನಿವೇಶನ ಪಡೆದುಕೊಂಡಿದ್ದಾರೆ. ಸರ್ಕಾರದಲ್ಲಿ ನಡೆದಿರುವ ದೊಡ್ಡ ಪ್ರಮಾಣದ ಹಗರಣಗಳಲ್ಲಿ ಕಾಂಗ್ರೆಸ್‍ನ ದೊಡ್ಡ ನಾಯಕರು ಭಾಗಿಯಾಗಿದ್ದಾರೆ. ಹಾಗಾಗಿ ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.

ADVERTISEMENT

‘ಬಜೆಟ್ ಬ್ರಹ್ಮ’ ಎಂದು ಕರೆಸಿಕೊಳ್ಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭ್ರಷ್ಟಾಚಾರ ಹಾಗೂ ಸುಳ್ಳುಗಳ ಮೇಲೆ ಸರ್ಕಾರ ನಡೆಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ರಾಜ್ಯವನ್ನು ದಿವಾಳಿಯತ್ತ ತೆಗೆದುಕೊಂಡು ಹೋಗುತ್ತಿದ್ದಾರೆ. ಇದು ಅಭಿವೃದ್ಧಿ ಶೂನ್ಯ ಸರ್ಕಾರ. ರಾಜ್ಯ ಸರ್ಕಾರವನ್ನು ಕಾಂಗ್ರೆಸ್ ಪಕ್ಷದವರು ಎಟಿಎಂ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದರು.

ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಯಾವುದೇ ಅಭಿವೃದ್ಧಿ ಕೆಲಸಕ್ಕೆ ಚಾಲನೆ ನೀಡಿಲ್ಲ. ಕನಿಷ್ಠ ರಸ್ತೆಗಳ ಗುಂಡಿ ಮುಚ್ಚುವ ಕೆಲಸಗಳೂ ಆಗಿಲ್ಲ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಬೆಲೆ ಏರಿಕೆ ಮಾಡಿ ಜನಸಾಮಾನ್ಯರಿಗೆ ಬರೆ ಎಳೆದಿದೆ ಎಂದು ಆರೋಪಿಸಿದರು.

‘ಕಟಾ ಕಟ್’ ಎಂದು ಜುಲೈ ಒಂದರಿಂದ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಹಾಕುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲೋಕಸಭೆ ಚುನಾವಣೆ ಸಮಯದಲ್ಲಿ ಹೇಳಿದ್ದರು. ರಾಜ್ಯದಲ್ಲಿ ಅವರದ್ದೇ ಸರ್ಕಾರವಿದ್ದರೂ ಅದು ಜಾರಿಯಾಗಿದೆಯೇ ಎಂದು ಪ್ರಶ್ನಿಸಿದರು.

ಮಹಿಳಾ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷೆ ಸುಮಿತ್ರಮ್ಮ, ವಕ್ತಾರ ಟಿ.ಆರ್.ಸದಾಶಿವಯ್ಯ, ಮಾಧ್ಯಮ ಪ್ರಮುಖ್ ಜೆ.ಜಗದೀಶ್, ಜಿ.ಎಸ್.ನಂದಿನಾಥ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.