ADVERTISEMENT

ಶಿರಾ: ಇ- ಖಾತೆಗೆ ₹10 ಸಾವಿರ ಲಂಚ

ಭ್ರಷ್ಟಾಚಾರದ ಕೂಪವಾದ ನಗರಸಭೆ: ಅಧ್ಯಕ್ಷೆ ಪೂಜಾ ಆರೋಪ

​ಪ್ರಜಾವಾಣಿ ವಾರ್ತೆ
Published 9 ಜುಲೈ 2024, 14:07 IST
Last Updated 9 ಜುಲೈ 2024, 14:07 IST
ಶಿರಾದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಶಾಸಕ ಟಿ.ಬಿ.ಜಯಚಂದ್ರ ಮಾತನಾಡಿದರು
ಶಿರಾದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಶಾಸಕ ಟಿ.ಬಿ.ಜಯಚಂದ್ರ ಮಾತನಾಡಿದರು   

ಶಿರಾ: ನಗರಸಭೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಇ- ಖಾತೆ ಮಾಡಿಕೊಡಲು ₹10 ಸಾವಿರ ಲಂಚ ಪಡೆಯುತ್ತಿದ್ದಾರೆ. ಅಕ್ರಮ ಕಟ್ಟಡಗಳಿಗೆ ಕಡಿವಾಣ ಹಾಕಿಲ್ಲ. ನಗರಸಭೆಯ ಪ್ರತಿ ಕೆಲಸದಲ್ಲಿ ಅವ್ಯವಹಾರ ನಡೆಯುತ್ತಿದ್ದು, ಭ್ರಷ್ಟಾಚಾರದ ಕೂಪವಾಗಿದೆ ಎಂದು ಅಧ್ಯಕ್ಷೆ ಪೂಜಾ ಆರೋಪಿಸಿದರು.

ನಗರದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಪ್ರತಿ ಅವ್ಯವಹಾರಕ್ಕೆ ನನ್ನ ಬಳಿ ಸಾಕ್ಷಿ ಇದೆ. ಸದಸ್ಯರು ಬೆಂಬಲಿಸಿದರೆ ತನಿಖೆ ನಡೆಸಲಾಗುವುದು’ ಎಂದರು.

ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಪ್ರತಿಕ್ರಿಯಿಸಿ, ಅಧ್ಯಕ್ಷ ಸ್ಥಾನದಲ್ಲಿ ಕುಳಿತು ಅಧಿಕಾರಿಗಳ ಮೇಲೆ ಹಿಡಿತ ಸಾಧಿಸಿ ಉತ್ತಮ ಆಡಳಿತ ನೀಡಬೇಕಾದವರೇ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಹೇಳುವುದು ನಾಚಿಕೆಗೇಡು. ಇದು ನಿಮ್ಮ ಅಸಮರ್ಥತೆಯನ್ನು ತೋರಿಸುತ್ತದೆ. ನೈತಿಕ ಹೊಣೆ ಹೊತ್ತು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದು ಸೂಕ್ತ. ಸರ್ಕಾರಕ್ಕೆ ಈ ಬಗ್ಗೆ ಪತ್ರ ಬರೆದರೆ ವಿಧಾನ ಮಂಡಲದಲ್ಲಿ ಚರ್ಚೆ ನಡೆಸಲಾಗುವುದು ಎಂದರು.

ADVERTISEMENT

‘ನಗರಸಭೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಲಿಖಿತವಾಗಿ ದೂರು ನೀಡಿದರೆ ಲೋಕಾಯುಕ್ತರಿಂದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇನೆ. ಸದಸ್ಯರು ದೂರು ನೀಡಲು ಸಿದ್ಧರಿರುವಿರಾ’ ಎಂದು ಶಾಸಕ ಟಿ.ಬಿ.ಜಯಚಂದ್ರ ಪ್ರಶ್ನಿಸಿದರು. ಅಧ್ಯಕ್ಷರನ್ನು ಹೊರತುಪಡಿಸಿ ಯಾರು ಸಹ ಲಿಖಿತ ದೂರು ನೀಡಲು ಮುಂದೆ ಬರಲಿಲ್ಲ.

ನಗರಸಭೆ ಪೌರಾಯುಕ್ತರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಇವರು ಬಂದ ನಂತರ ನಿಗದಿಪಡಿಸಿದ ಕಂದಾಯ ₹2.8 ಕೋಟಿಗಿಂತ ಹೆಚ್ಚು ಕಂದಾಯ ವಸೂಲಿ ಮಾಡಿದ್ದಾರೆ. ಜೊತೆಗೆ ₹2 ಕೋಟಿ ಬಾಡಿಗೆ ವಸೂಲಿ ಮಾಡಿ ನಗರಸಭೆಗೆ ಹೆಚ್ಚಿನ ಸಂಪನ್ಮೂಲ ಕ್ರೋಡಿಕರಿಸುತ್ತಿದ್ದಾರೆ ಎಂದು ಕೆಲವು ಸದಸ್ಯರು ಅವರ ಪರವಾಗಿ ಬ್ಯಾಟ್ ಬೀಸಿದರೆ ಕೆಲವರು ವಿರುದ್ಧವಾಗಿ ಚರ್ಚೆ ನಡೆಸಿದರು.

‘ನಗರದಲ್ಲಿ ವಾರದ ಸಂತೆ ನಡೆಸಲು ಸೂಕ್ತ ಜಾಗ ಗುರುತಿಸುವಂತೆ ಪ್ರತಿ ಸಭೆಯಲ್ಲಿ ಚರ್ಚೆ ನಡೆಯುತ್ತಿದೆ. ನಾನೇ ಸ್ಥಳದ ಬಗ್ಗೆ ತೀರ್ಮಾನ ತೆಗೆದುಕೊಂಡರೆ ಪಕ್ಷಪಾತ ಮಾಡಿದ್ದಾರೆ ಎನ್ನುತ್ತಾರೆ. ಆದ್ದರಿಂದ ಸಮಿತಿ ರಚಿಸಿ ನೀವು ಕೊಡುವ ವರದಿಯಂತೆ ತಿಂಗಳಲ್ಲಿ ಹೊಸ ಜಾಗದಲ್ಲಿ ಸಂತೆ ನಡೆಸಲಾಗುವುದು’ ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರೂ ಸಮಿತಿ ರಚಿಸಲು ಸದಸ್ಯರು ನಿರಾಸಕ್ತಿ ತೋರಿಸಿದರು.

‘ಜೆಡಿಎಸ್ ಮತ್ತು ಬಿಜೆಪಿ ನಗರಸಭೆಯ ಆಡಳಿತ ಹಿಡಿದ ಸಮಯದಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ ಅವರ ಪಕ್ಷದವರು ಅಧ್ಯಕ್ಷರಾದರೆ ಹೆಚ್ಚು ಅಭಿವೃದ್ದಿಯಾಗುವುದು ಎಂದು ನನ್ನನ್ನು ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಸಿ 11 ತಿಂಗಳು ಕಳೆದರೂ ಶಾಸಕ ಟಿ.ಬಿ.ಜಯಚಂದ್ರ ಅವರು ಒಂದು ಪೈಸೆ ಅನುದಾನ ತಂದಿಲ್ಲ. ಅಧ್ಯಕ್ಷರು ಹಾಗೂ ಪೌರಾಯುಕ್ತರ ನಡುವಿನ ಮುಸುಕಿನ ಗುದ್ದಾಟದಿಂದಾಗಿ ನಗರಸಭೆ ಆಡಳಿತ ದಿಕ್ಕುತಪ್ಪಿ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ಸದಸ್ಯ ಅಂಜಿನಪ್ಪ ಹೇಳಿದರು.

ನಾಲ್ಕು ತಿಂಗಳ ನಂತರ ನಗರಸಭೆ ಸಾಮಾನ್ಯ ಸಭೆ ನಡೆಯುತ್ತಿದೆ. ಅದರೆ ಜಮಾ ಖರ್ಚಿನ ವಿವರ ಸಭೆಯಲ್ಲಿ ನೀಡಿದ್ದೀರಿ ಈ ಬಗ್ಗೆ ಚರ್ಚೆ ನಡೆಸಬೇಕು. ಆದ್ದರಿಂದ ಈ ದಿನ ಸಭೆ ನಡೆಸದೆ ಮುಂದೂಡುವಂತೆ ಸದಸ್ಯ ಆರ್.ರಾಮು, ರಂಗನಾಥ್, ರಂಗರಾಜು, ಅಂಜಿನಪ್ಪ ಪಟ್ಟು ಹಿಡಿದರು.

ನಗರಸಭೆ ಪೌರಾಯುಕ್ತ ರುದ್ರೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಶಿವಶಂಕರ್, ಸಿಪಿಐ ಮಂಜೇಗೌಡ, ತಾಲ್ಲೂಕು ವೈದ್ಯಾಧಿಕಾರಿ ಡಾ.ಸಿದ್ಧೇಶ್ವರ ಸಭೆಯಲ್ಲಿ ಹಾಜರಿದ್ದರು.

18ಕ್ಕೆ ತರಕಾರಿ ಹೂವಿನ‌ ಮಾರುಕಟ್ಟೆ

ಹರಾಜು ನಿತ್ಯ ನಡೆಯುವ ತರಕಾರಿ ಮತ್ತು ಹೂವಿನ‌ ಮಾರುಕಟ್ಟೆ ₹33.09 ಲಕ್ಷಕ್ಕೆ ಹರಾಜಾಗಿತ್ತು. ಆದರೆ ಹರಾಜು ಕೂಗಿದವರು ಹಣ ಪಾವತಿಸದ ಕಾರಣ ಹಿಂದೆ ಹರಾಜು ಪಡೆದವರೇ ವಸೂಲಿ ಮಾಡುತ್ತಿದ್ದಾರೆ. ನಾಲ್ಕು ವರ್ಷದಿಂದ ಹರಾಜು ಆಗದಿರುವ ಕಾರಣ ನಗರಸಭೆಗೆ ಹೆಚ್ಚು ನಷ್ಟವಾಗುತ್ತಿದೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸದಸ್ಯರಾದ ಆರ್.ರಾಮು ಅಂಜಿನಪ್ಪ ರಂಗನಾಥ್ ಅಜೇಯ್ ಕುಮಾರ್ ಉಮಾ ವಿಜಯರಾಜು ಒತ್ತಾಯಿಸಿದರು. ತರಕಾರಿ ಮತ್ತು ಹೂವಿನ‌ ಮಾರುಕಟ್ಟೆ ಹರಾಜನ್ನು ಜುಲೈ 18ರಂದು ಹೊಸದಾಗಿ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.