ADVERTISEMENT

ತುಮಕೂರು: ತೈಲ ಬೆಲೆ ಏರಿಕೆಗೆ ಸಿಪಿಎಂ ಖಂಡನೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2024, 6:26 IST
Last Updated 20 ಜೂನ್ 2024, 6:26 IST

ತುಮಕೂರು: ರಾಜ್ಯ ಸರ್ಕಾರ ಪೆಟ್ರೋಲ್‌, ಡಿಸೇಲ್‌ ದರ ಏರಿಕೆ ಮಾಡಿರುವುದನ್ನು ಸಿಪಿಎಂ ಖಂಡಿಸಿದೆ.

ಬೆಲೆ ಏರಿಕೆ ಸಾಮಾನ್ಯರಿಗೆ ಹೊರೆಯಾಗಿ ಪರಿಣಮಿಸಿದೆ. ಕೇಂದ್ರ ಸರ್ಕಾರ ಟೋಲ್‌ ದರ ಶೇ 5ರಷ್ಟು ಹೆಚ್ಚಳ ಮಾಡಿ ಜನತೆಯನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಕೂಡಲೇ ದರ ಏರಿಕೆ ಹಿಂಪಡೆಯಬೇಕು ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಸೈಯದ್‌ ಮುಜೀಬ್‌, ಜಿಲ್ಲಾ ಕಾರ್ಯದರ್ಶಿ ಎನ್‌.ಕೆ.ಸುಬ್ರಮಣ್ಯ, ನಗರ ಕಾರ್ಯದರ್ಶಿ ಎ.ಲೋಕೇಶ್‌ ಒತ್ತಾಯಿಸಿದ್ದಾರೆ.

ಜನ ಸಾಮಾನ್ಯರ ಬದುಕಿಗೆ ಬೇಕಾದ ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಮಾಡಿದ್ದರಿಂದ ಜೀವನ ಕಷ್ಟಕರವಾಗಿದೆ. ಕಳೆದ ವರ್ಷ ಬರದಿಂದ ರಾಜ್ಯದ ಜನರು ತತ್ತರಿಸಿದ್ದಾರೆ. ಇದರ ಮಧ್ಯೆ ಬೆಲೆ ಏರಿಕೆ ಮಾಡಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ. ಸರ್ಕಾರ ಕೂಡಲೇ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು. ಇಲ್ಲದಿದ್ದರೆ ಜೂನ್‌ 26ರಂದು ಬೃಹತ್‌ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ADVERTISEMENT

ಕೇಂದ್ರ ಸರ್ಕಾರ ರಾಜ್ಯದ ತೆರಿಗೆಯ ಪಾಲು, ಅನುದಾನ ಕಡಿತಗೊಳಿಸಿದೆ. ಇದು ರಾಜ್ಯದ ಹಣಕಾಸು ಪರಿಸ್ಥಿತಿ ಮೇಲೆ ಗಂಭೀರ ಪರಿಣಾಮ ಬೀರಿದೆ. ಇದರಿಂದ ರಾಜ್ಯಗಳು ತಮ್ಮ ಆರ್ಥಿಕ ಅಗತ್ಯ ಸರಿದೂಗಿಸಲು ಅನಿವಾರ್ಯವಾಗಿ ಬೆಲೆ ಏರಿಕೆಗೆ ಮುಂದಾಗಿವೆ ಎಂದಿದ್ದಾರೆ.

ತೈಲ ಬೆಲೆ ಏರಿಕೆ ಸಂಬಂಧ ಬೊಬ್ಬೆ ಇಡುವ ಬಿಜೆಪಿ ತಾರತಮ್ಯದ ನೀತಿ ಅನುಸರಿಸುತ್ತಿದ್ದು, ಟೋಲ್‌ ದರ ಹೆಚ್ಚಳದ ಬಗ್ಗೆ ಧ್ವನಿ ಎತ್ತುತ್ತಿಲ್ಲ. ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ, ಅಕ್ರಮದ ಕುರಿತು ಸುಪ್ರೀಂ ಕೋರ್ಟ್‌ ಸಹ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ನೀಟ್‌ ಪ್ರಕರಣವನ್ನು ಸೂಕ್ತ ರೀತಿಯಲ್ಲಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.