ADVERTISEMENT

ಚಿಕ್ಕನಾಯಕನಹಳ್ಳಿ: ತೆವಳುತ್ತಾ ಸಾಗಿದ ಹೆದ್ದಾರಿ ಕಾಮಗಾರಿ

ಅವಘಡಗಳ ನಡುವೆಯೇ ಜನರ ಸಂಚಾರ: ಅಧಿಕಾರಿಗಳ ಜಾಣ ಕುರುಡು

ಆರ್.ಸಿ.ಮಹೇಶ್
Published 12 ಡಿಸೆಂಬರ್ 2021, 18:42 IST
Last Updated 12 ಡಿಸೆಂಬರ್ 2021, 18:42 IST
ಅವೈಜ್ಞಾನಿಕ ಕಾಮಗಾರಿ ...
ಅವೈಜ್ಞಾನಿಕ ಕಾಮಗಾರಿ ...   

ಚಿಕ್ಕನಾಯಕನಹಳ್ಳಿ: ಪಟ್ಟಣದ ಮೂಲಕ ಹಾದು ಹೋಗುವ ಬೀದರ್- ಶ್ರೀರಂಗಪಟ್ಟಣ ಹೆದ್ದಾರಿ ಕಾಮಗಾರಿ ಎರಡು ವರ್ಷಗಳಿಂದ ತೆವಳುತ್ತಾ ಸಾಗಿದೆ.

ರಸ್ತೆ ನಿರ್ಮಾಣದ ಅವೈಜ್ಞಾನಿಕ ನೀತಿ ಅನುಸರಿಸುತ್ತಿದ್ದರೂ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂಬ ದೂರು ಕೇಳಿ ಬರುತ್ತಿದೆ.

ಬೀದರ್‌- ಶ್ರೀರಂಗಪಟ್ಟಣ ಹೆದ್ದಾರಿ ಕೆ.ಬಿ.ಕ್ರಾಸ್‌ನಿಂದ ಚಿಕ್ಕನಾಯಕನಹಳ್ಳಿ ಪಟ್ಟಣದ ಮಾರ್ಗವಾಗಿ ಹುಳಿಯಾರುವರೆಗೆ ಸುಮಾರು 40 ಕಿ.ಮೀ ದೂರವನ್ನು ಒಂದು ಭಾಗವಾಗಿ ಮಾರ್ಪಡಿಸಲಾಗಿದೆ. ಈ ರಸ್ತೆಯನ್ನು ಬೆಂಗಳೂರಿನ ಸಾಯಿ ಅರ್ಥ್‌ ಮೂವರ್‌ ಕಂಪನಿ ಗುತ್ತಿಗೆ ಪಡೆದಿದೆ. ಎರಡು ವರ್ಷಗಳ ಹಿಂದೆ ಆರಂಭವಾದ ಕಾಮಗಾರಿ ನಿರಂತರವಾಗಿ ನಡೆಯುತ್ತಲೇ ಇದೆ.

ADVERTISEMENT

ಹೆದ್ದಾರಿಯ ಭಾಗವಾಗಿರುವ ಕೆ.ಬಿ.ಕ್ರಾಸ್‌ನಿಂದ ಹುಳಿಯಾರು ಪಟ್ಟಣದ ಹೊರವಲಯದ ಎಸ್ಎಲ್ಆರ್ ಬಂಕ್‌ ವರೆಗಿನ ರಸ್ತೆಯಲ್ಲಿ ಮಣ್ಣು, ಕಲ್ಲುಗಳ ರಾಶಿಯೇ ಕಾಣ ಸಿಗುತ್ತದೆ. ಕೆಲವೆಡೆ ಕಾಮಗಾರಿ ಇನ್ನೂ ಪ್ರಾರಂಭವೇ ಆಗಿಲ್ಲ. ಕೆಲಸ ನಡೆಯುತ್ತಿರುವ ಕಡೆಗಳಲ್ಲಿಯೂ ಸುರಕ್ಷಿತ ಕಾಮಗಾರಿಗೆ ಗುತ್ತಿಗೆದಾರರು ಒತ್ತು ನೀಡಿಲ್ಲ. ಎಲ್ಲೆಂದರಲ್ಲಿ ರಸ್ತೆ ಅಗೆದು ಏರಿಳಿತ ಮಾಡಿ ಅರ್ಧಕ್ಕೆ ನಿಲ್ಲಿಸಿ ಮತ್ತೊಂದು ಕಡೆ ಕೆಲಸ ನಿರ್ವಹಿಸುತ್ತಿದ್ದಾರೆ. ಕೆಲವೆಡೆ ಜಲ್ಲಿ ಹಾಗೂ ಜಲ್ಲಿ ಪುಡಿ ಹಾಕಿ ಹಾಗೆಯೇ ಬಿಟ್ಟಿರುವುದರಿಂದ ಜನರಿಗೆ ದೂಳು ಮತ್ತು ಕೆಸರಿನ ಮಜ್ಜನ ಸಾಮಾನ್ಯವಾಗಿದೆ.

ಅಪಘಾತ ವಲಯ: ಕೆ.ಬಿ.ಕ್ರಾಸ್‌ನಿಂದ ಹುಳಿಯಾರುವರೆಗಿನ ಮುಖ್ಯರಸ್ತೆಯಲ್ಲಿ ಹೆದ್ದಾರಿ ಕಾಮಗಾರಿ ಆರಂಭಕ್ಕೂ ಮೊದಲು ಚಿಕ್ಕಬಿದರೆ ಹಾಗೂ ಕಾಡೇನಹಳ್ಳಿ ಶನೇಶ್ಚರ ದೇಗುಲದ ಬಳಿ ಎರಡು ಅಪಘಾತ ವಲಯ ಇದ್ದವು. ಆದರೆ ಹೆದ್ದಾರಿ ಕಾಮಗಾರಿ ಆರಂಭವಾದ ಮೇಲೆ ರಸ್ತೆಯುದ್ದಕ್ಕೂ ಅಪಘಾತ ವಲಯ ನಿರ್ಮಾಣವಾಗಿವೆ. ಕೆ.ಬಿ.ಕ್ರಾಸ್‌ನಿಂದ ಹಾಲುಗೋಣ, ತರಬೇನಹಳ್ಳಿ, ಚಿಕ್ಕನಾಯಕನಹಳ್ಳಿ, ಬೈಲಪ್ಪನಮಠ, ಅವಳಗೆರೆ, ಕಾವಲಟ್ಟಿ, ದೊಡ್ಡಬಿದರೆ ಸೇರಿದಂತೆ 10 ಕಡೆ ಅಪಘಾತ ವಲಯ ನಿರ್ಮಾಣವಾಗಿವೆ.

ರಸ್ತೆ ಕಾಮಗಾರಿಯ ಅವೈಜ್ಞಾನಿಕ ನೀತಿಯಿಂದಾಗಿ ನಿತ್ಯ ಅಫಘಾತ ಸಂಭವಿಸುತ್ತಿವೆ. ತರಬೇನಹಳ್ಳಿ ಬಳಿ ರಸ್ತೆಯಲ್ಲಿ ಏರಿಳಿತ ಮಾಡಲು ಮಣ್ಣು ತೆಗೆದು ಸೇತುವೆ ನಿರ್ಮಿಸಿದ್ದಾರೆ. ಆದರೆ ಸೇತುವೆ ಜನ ಸಂಚಾರಕ್ಕೆ ಪೂರಕವಾಗಿರದ ಕಾರಣ ಪ್ರತಿದಿನವೂ ವಾಹನಗಳ ಸವಾರರು ಅಪಘಾತಕ್ಕೀಡಾಗುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಬೈಲಪ್ಪನ ಗೇಟ್‌ನ ಸಿಮೆಂಟ್‌ ಕಾರ್ಖಾನೆ ಬಳಿ ರಸ್ತೆಯನ್ನು ಎತ್ತರಿಸಲಾಗಿದೆ. ರಸ್ತೆ ಪಕ್ಕವೇ ಇದ್ದ ಬಡ ಕುಟುಂಬದವರ ಮನೆ ರಸ್ತೆ ಪಕ್ಕ ತಗ್ಗು ಪ್ರದೇಶವಾಗಿದೆ. ತಾತ್ಕಾಲಿಕ ತಡೆಗೋಡೆ ಹಾಗೂ ಸೂಚನಾ ಫಲಕ ಹಾಕದ ಪರಿಣಾಮ ವಾರಕ್ಕೊಮ್ಮೆ ವಾಹನಗಳು ಆಯತಪ್ಪಿ ತಗ್ಗು ಪ್ರದೇಶಕ್ಕೆ ಬೀಳುತ್ತಿವೆ. ಶನಿವಾರ ಕೂಡ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ರಸ್ತೆ ಪಕ್ಕದ ತಗ್ಗಿಗೆ ಉರುಳಿದೆ. ರಸ್ತೆಗೆ ಹೊಂದಿಕೊಂಡಿರುವ ಮನೆಯವರು ಮನೆಯ ಒಳಗೆ ಇದ್ದುದರಿಂದ ಯಾವುದೇ ಪ್ರಣಾಪಾಯ ಸಂಭವಿಸಿಲ್ಲ.

‘ನನ್ನ ಪತ್ನಿ ಮನೆಯೊಳಗೆ ಇದ್ದು, ನಾನು ಆಗ ತಾನೇ ಮನೆಯಿಂದ ಹೊರ ಹೋಗಿದ್ದೆ. ಸ್ವಲ್ಪ ತಡವಾಗಿದ್ದರೂ ಜೀವಕ್ಕೆ ಕುತ್ತು ಬರುತ್ತಿತ್ತು’ ಎಂದು ಮನೆಯ ಮಾಲೀಕ ರಾಮಯ್ಯ ಹೇಳಿದರು.

ರಸ್ತೆ ನಿರ್ಮಾಣದ ಹಂತದಲ್ಲಿ ಎಲ್ಲಿಯೂ ಕಾಮಗಾರಿ ನಿರ್ಮಾಣದ ಮಾರ್ಗಸೂಚಿ ಪಾಲನೆಯಾಗುತ್ತಿಲ್ಲ. ಸೂಚನಾ ಫಲಕಗಳು, ತಾತ್ಕಾಲಿಕ ತಡೆಯನ್ನು ಮಾಡದೆ ಕಾಮಗಾರಿ ಮಾಡುತ್ತಿರುವುದು ಸಹ ಅಪಘಾತಗಳ ಸಂಖ್ಯೆ ಹೆಚ್ಚಲು ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.