ಹುಳಿಯಾರು: ಹೋಬಳಿ ವ್ಯಾಪ್ತಿಯಲ್ಲಿ ಮಳೆ ಕೊರತೆ ನಡುವೆಯೂ ಬೆಳೆದಿರುವ ರಾಗಿ, ನವಣೆ, ಸಾಮೆ ಇನ್ನಿತರ ಬೆಳೆಗಳು ಕೊಯ್ಲಿಗೆ ಬಂದಿವೆ. ಆದರೆ ಕಳೆದೆರಡು ದಿನಗಳಿಂದ ಮೋಡ ಮುಸುಕಿದ ವಾತಾವರಣ, ಸೋನೆ ಮಳೆಯಿಂದಾಗಿ ಕೊಯ್ಲಿಗೆ ಬಂದಿರುವ ಬೆಳೆ ಹಾಳಾಗುತ್ತಿದೆ.
ಈ ಬಾರಿ ಮುಂಗಾರು ಕೈ ಕೊಟ್ಟು ರೈತರಿಗೆ ಹೇಳಿಕೊಳ್ಳುವಂತಹ ಬೆಳೆ ಬರಲಿಲ್ಲ. ಹಿಂಗಾರಿನಲ್ಲಾದ ಸೋನೆ ಮಳೆಗೆ ರಾಗಿ, ನವಣೆ ಸೇರಿದಂತೆ ಇತರ ಧಾನ್ಯಗಳನ್ನು ಬಿತ್ತನೆ ಮಾಡಿದ್ದರು. ಬಿತ್ತನೆ ನಂತರ ಮಳೆ ಕೈಕೊಟ್ಟು ಕೊನೆಗಳಿಗೆಯಲ್ಲಿ ಮಳೆ, ಬೆಳೆಯ ಕೈ ಹಿಡಿಯಿತು.
ಹಸ್ತ ಮಳೆಯಿಂದ ಬಾಡಿ ಹೋಗಿದ್ದ ಪೈರು ಹುಲುಸಾಗಿ ಬೆಳೆಸಿತು. ರೈತರು ಕೂಡ ಮೇಲು ಗೊಬ್ಬರವಾಗಿ ಯೂರಿಯಾ ಹಾಕಿದ ಪರಿಣಾಮ ಒಂದೇ ವಾರದಲ್ಲಿ ಹಚ್ಚ ಹಸಿರಾಯಿತು. ನಂತರ ಬಿದ್ದ ಮಳೆಯಿಂದ ತೆನೆಯೊಡೆದು ಉತ್ತಮ ಬೆಳೆಯೂ ಬಂದಿದೆ. ಆದರೆ ಹೋಬಳಿ ವ್ಯಾಪ್ತಿಯಲ್ಲಿ ಈಗಾಗಲೇ ಕೆಲಕಡೆ ರಾಗಿ ಕೊಯ್ಲು ಮಾಡಿ ಹೊಲದಲ್ಲಿ ಮೆದೆ ಹಾಕಿದ್ದಾರೆ. ಮತ್ತೆ ಸೋನೆ ಮಳೆ ಆರಂಭವಾಗಿರುವುದರಿಂದ ಬೆಳೆ ಹಾಳಾಗುತ್ತಿದೆ. ಹೊಲದಲ್ಲಿ ಉತ್ತಮ ತೇವಾಂಶ ಇರುವುದರಿಂದ ನೆಲಕ್ಕೆ ಬಿದ್ದ ತೆನೆ ಮೊಳಕೆಯೊಡೆಯುತ್ತಿದೆ.
ಕೊಯ್ಲಿಗೆ ಸಂಕಷ್ಟ: ಮಳೆ ಪ್ರಮಾಣ ಕಡಿಮೆಯಾಗಬಹುದು ಎಂದು ನಂಬಿದ್ದ ರೈತರಿಗೆ ಬಿಡದೆ ಸುರಿಯುತ್ತಿರುವ ಮಳೆ ನಿರಾಸೆ ಮೂಡಿಸಿದೆ. ಇನ್ನೂ ನಾಲ್ಕೈದು ದಿವಸ ಸೋನೆ ಮಳೆ ಬಿದ್ದರೆ ಕೊಯ್ಲಿಗೆ ಬಂದಿರುವ ರಾಗಿ, ನವಣೆ, ಸಾಮೆ ಬೆಳೆಗಳು ಕಣ್ಣೆದುರೆ ಹಾಳಾಗುತ್ತದೆ. ಬಿತ್ತನೆ ಪ್ರಮಾಣ ಕಡಿಮೆಯಾಗಿದ್ದು ಅಲ್ಪಸ್ವಲ್ಪ ರಾಗಿ ಬೆಳೆ ಕೊಯ್ಲಿಗೆ ಬಂದಿದೆ. ಹೊಲದಲ್ಲಿ ಮಾಗಿರುವ ಬೆಳೆಗೂ ತೊಂದರೆಯಾಗುತ್ತದೆ. ಇದೇ ರೀತಿ ಮಳೆ ಮುಂದುವರೆದರೆ ಬೆಳೆ ಸಂಪೂರ್ಣ ಹಾಳಾಗುವ ಸಂಭವ ಹೆಚ್ಚಿದ್ದು ರೈತರನ್ನು ಚಿಂತೆಗೀಡು ಮಾಡಿದೆ.
ನೆಲ ಕಚ್ಚಿರುವ ರಾಗಿ: ತಿಂಗಳ ಹಿಂದೆ ಉತ್ತಮ ಮಳೆ ಬಂದು ರಾಗಿ ಹುಲುಸಾಗಿ ಬೆಳೆದಿತ್ತು. ರೈತರು ಮೇಲುಗೊಬ್ಬರ ನೀಡದ ಮೇಲಂತೂ ಚನ್ನಾಗಿಯೇ ಬೆಳೆಯಿತು. ಒಳ್ಳೆಯ ತೆನೆ ಬಂದು ಇನ್ನೇನು ಕೊಯ್ಲು ಮಾಡುವ ಸಮಯದಲ್ಲಿ ಗಾಳಿ ಮಳೆಗೆ ಬೆಳೆ ನೆಲ ಕಚ್ಚಿದೆ. ಹುಲುಸಾಗಿ ಬೆಳೆದ ಕಾರಣ ನಡುಬಾಗಿ ನೆಲಕ್ಕೆ ಚಾಪೆ ಹಾಸಿದಂತಾಗಿದೆ. ಇದರ ಮದ್ಯೆ ಕಾಡು ಹಂದಿಗಳ ಕಾಟವೂ ಹೆಚ್ಚಾಗಿದ್ದು ತೆನೆಗಳನ್ನು ನಾಶ ಗೊಳಿಸುತ್ತಿವೆ ಎಂದು ರೈತರು ನೋವು ತೋಡಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.