ADVERTISEMENT

ಬೆಳೆ ನಷ್ಟ: ಪರಿಹಾರಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2024, 5:14 IST
Last Updated 23 ಅಕ್ಟೋಬರ್ 2024, 5:14 IST
ತುಮಕೂರಿನಲ್ಲಿ ಮಂಗಳವಾರ ರೈತ ಸಂಘದ ಮುಖಂಡರ ಸಭೆ ನಡೆಯಿತು. ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಗೋವಿಂದರಾಜು, ಪ್ರಧಾನ ಕಾರ್ಯದರ್ಶಿ ಜಿ.ಎಸ್.ಶಂಕರಪ್ಪ, ಮುಖಂಡರಾದ ಕಾಳೇಗೌಡ, ಬಸವರಾಜು, ಶಿವಕುಮಾರ್, ಜಗದೀಶ್, ವೆಂಕಟೇಗೌಡ, ಲಕ್ಷ್ಮಣಗೌಡ, ನಾಗರತ್ನಮ್ಮ, ರವೀಶ್ ಇತರರು ಭಾಗವಹಿಸಿದ್ದರು
ತುಮಕೂರಿನಲ್ಲಿ ಮಂಗಳವಾರ ರೈತ ಸಂಘದ ಮುಖಂಡರ ಸಭೆ ನಡೆಯಿತು. ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಗೋವಿಂದರಾಜು, ಪ್ರಧಾನ ಕಾರ್ಯದರ್ಶಿ ಜಿ.ಎಸ್.ಶಂಕರಪ್ಪ, ಮುಖಂಡರಾದ ಕಾಳೇಗೌಡ, ಬಸವರಾಜು, ಶಿವಕುಮಾರ್, ಜಗದೀಶ್, ವೆಂಕಟೇಗೌಡ, ಲಕ್ಷ್ಮಣಗೌಡ, ನಾಗರತ್ನಮ್ಮ, ರವೀಶ್ ಇತರರು ಭಾಗವಹಿಸಿದ್ದರು    

ತುಮಕೂರು: ನಿರಂತರವಾಗಿ ಬೀಳುತ್ತಿರುವ ಮಳೆಯಿಂದ ಶೇಂಗಾ, ರಾಗಿ ಇನ್ನಿತರೆ ಬೆಳೆಗಳಿಗೆ ಹಾನಿಯಾಗಿದ್ದು, ತಕ್ಷಣ ಬೆಳೆ ನಷ್ಟ ಪರಿಹಾರ ನೀಡುವಂತೆ ರಾಜ್ಯ ರೈತ ಸಂಘ ಒತ್ತಾಯಿಸಿದೆ.

ನಗರದಲ್ಲಿ ಮಂಗಳವಾರ ನಡೆದ ರೈತ ಸಂಘದ ಮುಖಂಡರ ಸಭೆಯಲ್ಲಿ ಮಾತನಾಡಿದ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಗೋವಿಂದರಾಜು, ‘ಅತಿವೃಷ್ಟಿಯಿಂದ ಬೆಳೆ ಹಾಳಾಗಿದೆ. ಸಾಕಷ್ಟು ಕಡೆಗಳಲ್ಲಿ ಮನೆಗಳು ಹಾನಿಗೆ ತುತ್ತಾಗಿವೆ. ಆದರೆ ಈವರೆಗೂ ಜಿಲ್ಲಾ ಆಡಳಿತ ಮಳೆ ಹಾನಿಯನ್ನು ತೀವ್ರವಾಗಿ ಪರಿಗಣಿಸಿಲ್ಲ’ ಎಂದು ಆರೋಪಿಸಿದರು.

ತಕ್ಷಣ ಮಳೆಯಿಂದಾದ ಹಾನಿಯನ್ನು ಅಂದಾಜಿಸಿ, ಪರಿಹಾರ ಕಲ್ಪಿಸಲು ಜಿಲ್ಲಾ ಆಡಳಿತ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ADVERTISEMENT

ಕುಲಾಂತರಿ ಬೀಜದಿಂದ ಕೃಷಿ ಹಾಗೂ ಸಮಾಜದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಕಾಲದಿಂದಲೂ ಹೋರಾಟ ಮಾಡಿಕೊಂಡು ಬರಲಾಗಿದೆ. ಬಿ.ಟಿ ಹತ್ತಿಯಿಂದ ಪರಿಸರದ ಮೇಲಾಗುತ್ತಿರುವ ಕೆಟ್ಟ ಪರಿಣಾಮಗಳ ಬಗ್ಗೆ ತಜ್ಞರು ಎಚ್ಚರಿಸುತ್ತಲೇ ಬಂದಿದ್ದಾರೆ. ಆದರೆ ಕುಲಾಂತರಿ ಬೀಜ ನೀತಿಯ ಕುರಿತು ಸಮಿತಿ ರಚಿಸಲು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. ಬಹುರಾಷ್ಟ್ರೀಯ ಕಂಪನಿಗಳಾದ ಬೇಯರ್ಸ್, ಮಾನ್ಸೆಂಟೊ ನೇತೃತ್ವದಲ್ಲಿ ಸಮಿತಿ ರಚಿಸುವ ಪ್ರಯತ್ನ ನಡೆದಿದೆ. ಒಂದು ವೇಳೆ ಈ ಸಮಿತಿ ಜಾರಿಗೆ ಬಂದರೆ, ಭವಿಷ್ಯದಲ್ಲಿ ಸಾಕಷ್ಟು ಅಪಾಯ ಎದುರಿಸಬೇಕಾಗಿದೆ. ಕೇಂದ್ರ, ರಾಜ್ಯ ಸರ್ಕಾರಗಳು ಇದನ್ನು ವಿರೋಧಿಸಬೇಕು ಎಂದು ಆಗ್ರಹಿಸಿದರು.

ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ ರೈತರು ಸಲ್ಲಿಸಿರುವ ಅರ್ಜಿಗಳಿಗೆ ಈವರೆಗೂ ಪರಿಹಾರ ಸಿಕ್ಕಿಲ್ಲ. ಜಿಲ್ಲಾಧಿಕಾರಿ ಮಧ್ಯೆ ಪ್ರವೇಶಿಸಿ ತುರ್ತಾಗಿ ಕ್ರಮ ಕೈಗೊಳ್ಳಬೇಕು. ಬಿಕ್ಕೆಗುಡ್ಡ, ಹಾಗಲವಾಡಿ ಏತ ನೀರಾವರಿ ಯೋಜನೆಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎಸ್.ಶಂಕರಪ್ಪ, ಮುಖಂಡರಾದ ಕಾಳೇಗೌಡ, ಬಸವರಾಜು, ಶಿವಕುಮಾರ್, ಜಗದೀಶ್, ವೆಂಕಟೇಗೌಡ, ಲಕ್ಷ್ಮಣಗೌಡ, ನಾಗರತ್ನಮ್ಮ, ಚಿಕ್ಕಬೋರೇಗೌಡ, ರಹಮತ್ ಸಾಬ್, ಭಾಗ್ಯಮ್ಮ, ಲೋಕೇಶ್, ರವೀಶ್, ಚನ್ನಬಸಣ್ಣ, ಅರೇಹಳ್ಳಿ ಮಂಜುನಾಥ್, ಶಬ್ಬೀರ್ ಕೊರಟಗೆರೆ, ಕೆಂಚಪ್ಪ, ಚಿರತೆ ಚಿಕ್ಕಣ್ಣ, ತಿಮ್ಮೇಗೌಡ, ಮಹೇಶ್ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.

ಎಕ್ಸ್‌ಪ್ರೆಸ್ ಕೆನಾಲ್ ಕಾಮಗಾರಿ ನಿಲ್ಲಿಸಲು ಆಗ್ರಹ

ತುಮಕೂರು: ತೀವ್ರ ವಿರೋಧದ ನಡುವೆ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ಮುಂದುವರಿದಿದ್ದು ತಕ್ಷಣ ಕೆಲಸ ನಿಲ್ಲಿಸಬೇಕು ಎಂದು ಎ.ಗೋವಿಂದರಾಜು ಆಗ್ರಹಿಸಿದರು. ರೈತರು ರಾಜಕೀಯ ಪಕ್ಷಗಳ ನಾಯಕರು ಈಗಾಗಲೇ ಕುಣಿಗಲ್ ಮಾರ್ಗದ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೂ ಗುತ್ತಿಗೆದಾರರು ಕೆಲಸ ಮುಂದುವರಿಸಲು ಮುಂದಾಗಿದ್ದು ಇದು ಸರ್ಕಾರ ಹಾಗೂ ರೈತರ ನಡುವಿನ ಸಂಘರ್ಷಕ್ಕೆ ಕಾರಣವಾಗಲಿದೆ ಎಂದು ಎಚ್ಚರಿಸಿದರು. ಭೂಸ್ವಾಧೀನ ಇಲ್ಲದೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದರಿಂದ ರೈತರಿಗೆ ತೀವ್ರ ಅನ್ಯಾಯವಾಗಿದ್ದು ಜಿಲ್ಲೆಯ ಉಸ್ತುವಾರಿ ಸಚಿವರು ಶಾಸಕರು ಸಂಸದರು ಮಧ್ಯೆ ಪ್ರವೇಶಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ರೈತರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ತಾಲ್ಲೂಕು ಕಚೇರಿಗಳ ಮುಂದೆ ನ. 4ರಂದು ಪ್ರತಿಭಟನೆ ನಡೆಸಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.