ADVERTISEMENT

ಸೈಬರ್‌ | ಅರ್ಧ ಕೋಟಿ ವಂಚನೆ: ₹36 ಲಕ್ಷ ಕಳೆದುಕೊಂಡ ತಾಯಿ, ಮಗ!

₹36 ಲಕ್ಷ ಕಳೆದುಕೊಂಡ ತಾಯಿ, ಮಗ! ಯುವಕನಿಗೆ ₹17.61 ಲಕ್ಷ ಮೋಸ

​ಪ್ರಜಾವಾಣಿ ವಾರ್ತೆ
Published 20 ಜೂನ್ 2024, 7:44 IST
Last Updated 20 ಜೂನ್ 2024, 7:44 IST
ಸೈಬರ್‌ ಅಪರಾಧ (ಸಾಂದರ್ಭಿಕ ಚಿತ್ರ)
ಸೈಬರ್‌ ಅಪರಾಧ (ಸಾಂದರ್ಭಿಕ ಚಿತ್ರ)   

ತುಮಕೂರು: ‘ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿ ಹೆಚ್ಚಿನ ಲಾಭ ಗಳಿಸಬಹುದು’ ಎಂಬ ಆಮಿಷಕ್ಕೆ ಒಳಗಾಗಿ ತಾಯಿ, ಮಗ ಬರೋಬ್ಬರಿ ₹36.85 ಲಕ್ಷ ಕಳೆದುಕೊಂಡಿದ್ದಾರೆ. ಮತ್ತೊಬ್ಬರಿಗೆ ₹17.61 ಲಕ್ಷ ವಂಚಿಸಿದ್ದು, ಎರಡೇ ಪ್ರಕರಣಗಳಲ್ಲಿ ₹54.46 ಲಕ್ಷ ಕಳೆದುಕೊಂಡಿದ್ದಾರೆ.

ಶಿರಾ ಗೇಟ್‌ನ ಕೆ.ಆರ್‌.ಮಂಗಳಮ್ಮ, ಪುತ್ರ ಜಿ.ರಕ್ಷಿತ್‌ ಸೈಬರ್‌ ಕಳ್ಳರ ಬಲೆಗೆ ಬಿದ್ದು ಮೋಸ ಹೋಗಿದ್ದಾರೆ. ಸೈಬರ್‌ ಆರೋಪಿಗಳು ಏ. 18ರಂದು ರಕ್ಷಿತ್‌ ವಾಟ್ಸ್‌ ಆ್ಯಪ್‌ ಸಂಖ್ಯೆಗೆ ಒಂದು ಲಿಂಕ್‌ ಕಳುಹಿಸಿದ್ದಾರೆ. ಅದನ್ನು ಕ್ಲಿಕ್‌ ಮಾಡಿದ ತಕ್ಷಣಕ್ಕೆ ಅವರ ಮೊಬೈಲ್‌ ಸಂಖ್ಯೆಯನ್ನು ‘ಬಿ38 ಪ್ರೊಫೆಸರ್‌ ರೊಬೆರ್ಟ್‌ ಸ್ಟಾಕ್‌ ಅನಾಲಿಸಿಸ್‌ ಎಕ್ಸ್‌ಚೇಂಜ್‌ ಗ್ರೂಪ್‌’ ಎಂಬ ವಾಟ್ಸ್‌ ಆ್ಯಪ್‌ ಗ್ರೂಪ್‌ಗೆ ಸೇರಿಸಿದ್ದಾರೆ. ಸದರಿ ಗ್ರೂಪ್‌ನಲ್ಲಿ ‘ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿ ಹೆಚ್ಚಿನ ಲಾಭ ಪಡೆಯಬಹುದು’ ಎಂದು ತಿಳಿಸಿದ್ದಾರೆ.

ಇದನ್ನು ನಂಬಿದ ಇಬ್ಬರು ಮೇ 24ರ ವರೆಗೆ ₹26.85 ಲಕ್ಷ ಹಣವನ್ನು ವಿವಿಧ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ. ‘ಒಂದು ತಿಂಗಳ ನಂತರ ಶೇ 50ರಷ್ಟು ಹಣ ವಾಪಸ್‌ ಬರುತ್ತದೆ’ ಎಂದು ವಂಚಕರು ಹೇಳಿದ್ದಾರೆ. ಜೂನ್‌ 10ರಂದು ಮತ್ತೆ ₹10 ಲಕ್ಷ ವರ್ಗಾಯಿಸಿದ್ದಾರೆ. ಹಂತ ಹಂತವಾಗಿ ಒಟ್ಟು ₹36.85 ಲಕ್ಷ ಹಣ ಕಳೆದುಕೊಂಡಿದ್ದು, ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಮತ್ತೊಂದು ಪ್ರಕರಣ: ಇದೇ ರೀತಿಯಾಗಿ ಮತ್ತೊಂದು ಪ್ರಕರಣದಲ್ಲಿ ನಗರದ ಬಟವಾಡಿಯ ಚೌಡೇಶ್ವರಿ ನಗರದ ನಿವಾಸಿ ಎಂ.ಮಂಜುನಾಥ್‌ ಎಂಬುವರಿಗೆ ₹17.61 ಲಕ್ಷ ವಂಚಿಸಲಾಗಿದೆ. ಸೈಬರ್‌ ಆರೋಪಿಗಳು ಎರಡೇ ಪ್ರಕರಣಗಳಲ್ಲಿ ₹54.46 ಲಕ್ಷ ಹಣವನ್ನು ತಮ್ಮ ಖಾತೆಗಳಿಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.

ಮಂಜುನಾಥ್‌ ಫೇಸ್‌ಬುಕ್‌ನಲ್ಲಿ ಟ್ರೇಡಿಂಗ್‌ಗೆ ಸಂಬಂಧಿಸಿದ ಜಾಹೀರಾತು ವೀಕ್ಷಿಸಿ ಅದರಲ್ಲಿದ್ದ ಲಿಂಕ್‌ ಕ್ಲಿಕ್‌ ಮಾಡಿ, ‘ಜಿಎಫ್‌ಎಸ್‌ಎಲ್‌’ ಎಂಬ ಆ‌್ಯಪ್‌ ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ. ನಂತರ ಮಂಜುನಾಥ್‌ ಮೊಬೈಲ್‌ ಸಂಖ್ಯೆಯನ್ನು ‘ಎ–137 ಜಿಎಫ್‌ಎಸ್‌ಎಲ್‌ ಅಫಿಷಿಯಲ್‌ ಸ್ಟಾಕ್‌’ ಎಂಬ ವಾಟ್ಸ್‌ ಆ್ಯಪ್‌ ಗ್ರೂಪ್‌ಗೆ ಸೇರಿಸಿದ್ದಾರೆ. ಸದರಿ ಗ್ರೂಪ್‌ನಲ್ಲಿ ಟ್ರೇಡಿಂಗ್‌ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ಮೇ 12ರಿಂದ ಜೂನ್‌ 11ರ ವರೆಗೆ ವಿವಿಧ ಬ್ಯಾಂಕ್‌ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು ₹17,61,958 ಹಣ ವರ್ಗಾಯಿಸಿದ್ದಾರೆ. ಇದರಲ್ಲಿ ಅವರಿಗೆ ಕೇವಲ ₹1 ಸಾವಿರ ಮಾತ್ರ ವಾಪಸ್‌ ಹಾಕಿದ್ದಾರೆ. ದುಪ್ಪಟ್ಟು ಹಣದ ಆಸೆ ತೋರಿಸಿ ಮೋಸ ಮಾಡಿದವರನ್ನು ಪತ್ತೆ ಹಚ್ಚುವಂತೆ ಸೈಬರ್‌ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.