ADVERTISEMENT

ತುಮಕೂರು | ಶಿಕ್ಷಕನ ಖಾತೆ ಹ್ಯಾಕ್‌: ₹13 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 6:11 IST
Last Updated 26 ಅಕ್ಟೋಬರ್ 2024, 6:11 IST
ಸೈಬರ್‌ ಕ್ರೈಮ್‌
ಸೈಬರ್‌ ಕ್ರೈಮ್‌   

ತುಮಕೂರು: ‘ಸೈಬರ್‌ ವಂಚಕರು ಬ್ಯಾಂಕ್‌ ಖಾತೆ ಹ್ಯಾಕ್‌ ಮಾಡಿ ₹13.40 ಲಕ್ಷ ವರ್ಗಾವಣೆ ಮಾಡಿಕೊಂಡಿದ್ದಾರೆ’ ಎಂದು ರಾಜೀವ್‌ಗಾಂಧಿ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹಾಯಕ ಶಿಕ್ಷಕ ನಸೀರ್‌ ಅಹ್ಮದ್‌ ದೂರು ನೀಡಿದ್ದು, ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಗುರುವಾರ ಮಧ್ಯಾಹ್ನ ಮಕ್ಕಳಿಗೆ ಬಿಸಿಯೂಟದ ಜತೆಗೆ ಮೊಟ್ಟೆ ನೀಡಬೇಕಾಗಿತ್ತು, ಮೊಟ್ಟೆ ಖರೀದಿಸುವ ಉದ್ದೇಶದಿಂದ ಸದಾಶಿವನಗರದ ಬಳಿಯ ಎಟಿಎಂನಲ್ಲಿ ₹5 ಸಾವಿರ ಹಣ ವಿಥ್‌ ಡ್ರಾ ಮಾಡಿದ್ದೆ. ನಂತರ ನನ್ನ ಖಾತೆಯಿಂದ ನಿರಂತರವಾಗಿ ಹಣ ಕಡಿತ ಆದ ಬಗ್ಗೆ ಮೊಬೈಲ್‌ಗೆ ಮೆಸೇಜ್‌ ಬಂದಿದೆ. ಬ್ಯಾಂಕ್‌ನಲ್ಲಿ ವಿಚಾರಿಸಿದಾಗ ಯಾರೋ ಕಳ್ಳರು ಬ್ಯಾಂಕ್‌ ಖಾತೆ ಹ್ಯಾಕ್‌ ಮಾಡಿ, ₹13,40,656 ಹಣ ಬಿಡಿಸಿಕೊಂಡಿರುವುದು ಗೊತ್ತಾಗಿದೆ’ ಎಂದು ನಸೀರ್‌ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

₹6.34 ಲಕ್ಷ ವಂಚನೆ: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ದುಪ್ಪಟ್ಟು ಲಾಭ ಗಳಿಸಬಹುದು ಎಂಬ ಆಮಿಷಕ್ಕೆ ಒಳಗಾಗಿ ನಗರದ ಶಿರಾ ಗೇಟ್‌ನ ಟಿ.ಸಿ.ರಂಜಿತ್‌ ಕುಮಾರ್‌ ₹6.34 ಲಕ್ಷ ಕಳೆದುಕೊಂಡಿದ್ದಾರೆ.

ADVERTISEMENT

ಸೆ. 20ರಂದು ಫೇಸ್‌ಬುಕ್‌ ವೀಕ್ಷಿಸುತ್ತಿರುವಾಗ ಷೇರು ಮಾರುಕಟ್ಟೆಯ ಜಾಹೀರಾತು ನೋಡಿದ್ದಾರೆ. ಅದರಲ್ಲಿನ ಮೊಬೈಲ್‌ ಸಂಖ್ಯೆ ಸಂಪರ್ಕಿಸಿ ಮಾಹಿತಿ ಪಡೆದಿದ್ದಾರೆ. ನಂತರ ಸೈಬರ್‌ ವಂಚಕರು ತಿಳಿಸಿದ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ. ‘ಇದರಲ್ಲಿ ಹಣ ಹೂಡಿಕೆ ಮಾಡಿ ಒಳ್ಳೆಯ ಲಾಭ ಪಡೆಯಬಹುದು’ ಎಂದು ತಿಳಿಸಿದ್ದಾರೆ.

ಇದನ್ನು ನಂಬಿದ ರಂಜಿತ್‌ ಅ. 11ರಿಂದ 17ರ ವರೆಗೆ ₹6.35 ಲಕ್ಷ ಹಣವನ್ನು ವಿವಿಧ ಬ್ಯಾಂಕ್‌ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ. ಇನ್ನೂ ಹೆಚ್ಚಿನ ಹಣ ಹೂಡಿಕೆ ಮಾಡುವಂತೆ ಹೇಳಿದ್ದಾರೆ. ಇದರಿಂದ ಅನುಮಾನಗೊಂಡು ಸೈಬರ್‌ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.