ADVERTISEMENT

ಕುಣಿಗಲ್‌: ಏಕರೂಪ ತಂತ್ರಾಂಶ ಅಳವಡಿಕೆಗೆ ವಿರೋಧ

ಜೆಡಿಎಸ್‌ ಮುಖಂಡರು ಆಕ್ರೋಶ

​ಪ್ರಜಾವಾಣಿ ವಾರ್ತೆ
Published 23 ಮೇ 2024, 4:27 IST
Last Updated 23 ಮೇ 2024, 4:27 IST
<div class="paragraphs"><p>ಹಾಲು</p></div>

ಹಾಲು

   

(ಸಾಂದರ್ಭಿಕ ಚಿತ್ರ)

ಕುಣಿಗಲ್‌: ರಾಜ್ಯ ಸರ್ಕಾರ ಹಾಲು ಖರೀದಿಗೆ ಏಕರೂಪ ತಂತ್ರಾಂಶ ಅಳವಡಿಸಿ ಹೈನುಗಾರರ ಪಾಲಿಗೆ ಮರಣ ಶಾಸನ ಜಾರಿಗೊಳಿಸಲು ಮುಂದಾಗಿರುವುದನ್ನು ಜೆಡಿಎಸ್‌ ತಾಲ್ಲೂಕು ಘಟಕದ ಅಧ್ಯಕ್ಷ ಜಗದೀಶ್‌ ಇಲ್ಲಿ ಬುಧವಾರ ಖಂಡಿಸಿದರು.

ADVERTISEMENT

ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರ ರೈತ ವಿರೋಧಿ ನೀತಿ ಜಾರಿಗೊಳಿಸುತ್ತಿದೆ. ಹೈನುಗಾರರಿಗೆ ₹708 ಕೋಟಿ ಪ್ರೋತ್ಸಾಹಧನ ಬಾಕಿ ಉಳಿಸಿಕೊಂಡಿದೆ. ಇದೀಗ ಸಹಕಾರಿ ಒಕ್ಕೂಟದ ಮೂಲಕ ಹಾಲು ಹಾಕುವ ಹೈನುಗಾರರಿಗೆ ಏಕರೂಪ ತಂತ್ರಾಂಶ ಜಾರಿಗೊಳಿಸಲು ಮುಂದಾಗಿದೆ. ಇದರಿಂದ ಮೂರು ಡಿಗ್ರಿಗಿಂತ ಕಡಿಮೆ ಜಿಡ್ಡಿನ ಅಂಶ (ಫ್ಯಾಟ್) ಇರುವ ಹಾಲನ್ನು ತಿರಸ್ಕರಿಸಲಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಸರ್ಕಾರ ಎಚ್‍ಎಫ್ ತಳಿ ಹಸುಗಳನ್ನು ವಿತರಿಸಿದೆ. ಈ ಜಾತಿಯ ಹಸುಗಳು ಹೆಚ್ಚಿನ ಹಾಲು ನೀಡಿದರೂ ಜಿಡ್ಡಿನ ಅಂಶ ಕಡಿಮೆ ಇರುತ್ತದೆ. ಹೊಸ ತಂತ್ರಾಂಶ ಅನುಷ್ಠಾನಕ್ಕೆ ಬಂದರೆ ಸಾವಿರಾರು ಹೈನುಗಾರರು ಬೀದಿಗೆ ಬರುತ್ತಾರೆ. ತಾಲ್ಲೂಕಿನಲ್ಲಿ ದಿನಕ್ಕೆ 2 ಲಕ್ಷ ಲೀಟರ್‌ ಹಾಲನ್ನು ಸಹಕಾರ ಸಂಘದ ಮೂಲಕ ಒಕ್ಕೂಟಕ್ಕೆ ಹಾಕುತ್ತಿದ್ದಾರೆ ಎಂದರು.

ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಏಕರೂಪ ತಂತ್ರಾಂಶವನ್ನು ಮೊದಲಿಗೆ ಜಿಲ್ಲೆಯಲ್ಲಿ ಜಾರಿಗೊಳಿಸಲು ಮುಂದಾಗಿದ್ದಾರೆ. ಇದರಿಂದ ಸಾವಿರಾರು ಹೈನುಗಾರರ ಬದುಕು ದುಸ್ತರವಾಗುತ್ತದೆ. ಸರ್ಕಾರ ಹಾಲಿನ ಗುಣಮಟ್ಟಕ್ಕೆ ಯಾವುದೇ ಕ್ರಮಕೈಗೊಳ್ಳಲಿ. ಆದರೆ, ಇಂತಹ ಅವೈಜ್ಞಾನಿಕ ನೀತಿ ಜಾರಿಗೊಳಿಸಬಾರದು ಎಂದು ಒತ್ತಾಯಿಸಿದರು.

ನರೇಗಾ, ಬರ ಪರಿಹಾರ, ಕೊಬ್ಬರಿ, ರಾಗಿ ಮಾರಿದ ಹಣ ರೈತರ ಖಾತೆಗೆ ಬರುತ್ತಿದ್ದು, ಈ ಹಣವನ್ನು ಬ್ಯಾಂಕ್‍ನವರು ಸಾಲಕ್ಕೆ ಜಮಾ ಮಾಡಿಕೊಳ್ಳುತ್ತಿದ್ದಾರೆ. ಜಿಲ್ಲಾಧಿಕಾರಿ ಕೇವಲ ಸಲಹೆ, ಸೂಚನೆ ನೀಡಲು ಸೀಮಿತವಾಗಿದ್ದಾರೆ. ಸ್ಥಳೀಯ ಶಾಸಕರಿಗೆ ರೈತರ, ಹೈನುಗಾರರ ಬಗ್ಗೆ ಕನಿಷ್ಠ ಕಾಳಜಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡರಾದ ಕೆ.ಎಲ್‌.ಹರೀಶ್, ತರೀಕೆರೆ ಪ್ರಕಾಶ್, ಎಡೆಯೂರು ದೀಪು, ರಂಗಸ್ವಾಮಿ, ನವೀನ್, ಮಂಜುನಾಥ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.