ADVERTISEMENT

ಹಸು ಸಾಕಣೆಯಲ್ಲಿ ಬದುಕು ಕಟ್ಟಿಕೊಂಡ ನೂರುಲ್ಲಾ

ಬದುಕು ಬೆಳಗಿಸಿದ ಹೈನುಗಾರಿಕೆ: ದಿನಕ್ಕೆ 30 ಲೀ. ಹಾಲು: 20 ವರ್ಷಗಳಿಂದ ಪಶಸಂಗೋಪನೆಯೇ ಕಾಯಕ

ಕುಮಾರಸ್ವಾಮಿ
Published 17 ಜುಲೈ 2019, 1:51 IST
Last Updated 17 ಜುಲೈ 2019, 1:51 IST
ಕೋರ ಹೋಬಳಿ ಮುದ್ದೇನಹಳ್ಳಿ ಗ್ರಾಮದಲ್ಲಿ ತಾವು ಸಾಕಿರುವ ಹಸುಗಳೊಂದಿಗೆ ನೂರುಲ್ಲಾ
ಕೋರ ಹೋಬಳಿ ಮುದ್ದೇನಹಳ್ಳಿ ಗ್ರಾಮದಲ್ಲಿ ತಾವು ಸಾಕಿರುವ ಹಸುಗಳೊಂದಿಗೆ ನೂರುಲ್ಲಾ   

ಕೋರ (ತುಮಕೂರು ತಾ.): ಸಾಮಾನ್ಯವಾಗಿ ಮುಸ್ಲಿಂ ಸಮುದಾಯ ವ್ಯಾಪಾರ ವಹಿವಾಟಿನಲ್ಲಿ ತೊಡಗಿಸಿಕೊಳ್ಳುವುದೇ ಹೆಚ್ಚು. ಬೇಸಾಯ ಹಾಗೂ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವವರ ಪ್ರಮಾಣ ತೀರಾ ವಿರಳ. ಇಲ್ಲೊಂದು ಮುಸ್ಲಿಂ ಕುಟುಂಬ ಹೈನುಗಾರಿಕೆ ಹಾಗೂ ಬೇಸಾಯವನ್ನು ಮೂಲ ಕಸುಬಾಗಿಸಿಕೊಂಡು ಬದುಕು ಕಟ್ಟಿಕೊಂಡಿದೆ.

ಹೋಬಳಿ ಮುದ್ದೇನಹಳ್ಳಿ ಗ್ರಾಮದ ನೂರುಲ್ಲಾ ಕುಟುಂಬ ಹೈನುಗಾರಿಕೆಯನ್ನೇ ಪ್ರಧಾನ ಕಸುಬಾಗಿ ಸ್ವೀಕರಿಸಿ ಬದುಕು ರೂಪಿಸಿಕೊಂಡಿದೆ. ತೀವ್ರ ಸಂಕಷ್ಟದಲ್ಲಿದ್ದ ಈ ಕುಟುಂಬ ಹೈನುಗಾರಿಕೆ ಆರಂಭಿಸಿದ ಮೇಲೆ ಆರ್ಥಿಕವಾಗಿ ಚೇತರಿಸಿಕೊಂಡಿದೆ.

ನೂರುಲ್ಲಾ ಅವರ ತಂದೆ ನಿವೃತ್ತ ಯೋಧರಾಗಿದ್ದು, ಸರ್ಕಾರ ಅವರಿಗೆ ನೀಡಿದ್ದ ಭೂಮಿಯಲ್ಲಿ ನೂರುಲ್ಲಾ ಕುಟುಂಬ ಇಂದಿಗೂ ಕೃಷಿ ಚಟುವಟಿಕೆ ಮಾಡುತ್ತಿದೆ. ಆರಂಭದಲ್ಲಿ ಈ ಜಮೀನಿನಲ್ಲಿ ಕೊಳವೆಬಾವಿ ಕೊರೆಯಿಸಿ ಅಡಿಕೆ ನೆಟ್ಟರು. ಮಧ್ಯಂತರ ಬೆಳೆಯಾಗಿ ಬಾಳೆ ಬೆಳೆದು ಸೈ ಎನಿಸಿಕೊಂಡಿದ್ದರು. ಅಂತರ್ಜಲ ಪ್ರಮಾಣ ಕುಸಿದಂತೆ ಕೊಳವೆಬಾವಿಯಲ್ಲಿ ನೀರು ಬರಿದಾಯಿತು. ಇನ್ನೊಂದು ಕೊಳವೆಬಾವಿ ಕೊರೆಯಿಸಲು ಆರ್ಥಿಕ ಚೈತನ್ಯವಿಲ್ಲದೆ ಕೈಚೆಲ್ಲಿದ ಪರಿಣಾಮ ಅಡಿಕೆ ತೋಟ ಒಣಗಿ ಹೋಯಿತು. ಇದರಿಂದ ವಿಚಲಿತರಾದ ನೂರುಲ್ಲಾ ಆರ್ಥಿಕ ಸಂಕಷ್ಟದಿಂದ ಹೊರಬರಲು ಸೀಮೆಹಸು ಸಾಕಣೆ ಆರಂಭಿಸಿದರು. ಕಳೆದ ಇಪ್ಪತ್ತು ವರ್ಷಗಳಿಂದ ನೂರುಲ್ಲಾ ನಿರಂತರ ಈ ಕಾಯಕದಲ್ಲಿ ತೊಡಗಿದ್ದಾರೆ.

ADVERTISEMENT

ನೂರುಲ್ಲಾ ಹೈನುಗಾರಿಕೆ ಆರಂಭ ಮಾಡಿದ ದಿನಗಳು ಸುಖಕರವಾಗಿರಲಿಲ್ಲ. ‘ಮುದ್ದೇನಹಳ್ಳಿ ಗ್ರಾಮದಲ್ಲಿ ಡೇರಿ ಇರಲಿಲ್ಲ. ಪಕ್ಕದ ಎರಡು ಕಿ.ಮೀ ದೂರದಲ್ಲಿರುವ ಬ್ರಹ್ಮಸಂದ್ರ ಗ್ರಾಮದಲ್ಲಿರುವ ಡೇರಿಗೆ ಹಾಲು ಕೊಂಡೊಯ್ಯಬೇಕಿತ್ತು. ದಿನಕ್ಕೆ ಹತ್ತು ಲೀಟರ್ ಹಾಲಿನಿಂದ ಆರಂಭವಾದ ಹೈನುಗಾರಿಕೆ ಪಯಣ ಕೊನೆಗೆ ಮುದ್ದೇನಹಳ್ಳಿ ಗ್ರಾಮದಲ್ಲಿ ಡೇರಿ ಆರಂಭವಾದಾಗ 70 ಲೀಟರ್ ಗಡಿ ದಾಟಿತ್ತು. ಪಶು ಆಹಾರ, ಬೂಸಾ ಎಲ್ಲ ಖರ್ಚು ಕಳೆದು ತಿಂಗಳಿಗೆ ₹ 25,000 ಕೈಸೇರುತ್ತಿತ್ತು. ಈಗ 30 ಲೀಟರ್‌ ಹಾಲು ಹಾಕುತ್ತೇನೆ’ ಎನ್ನುತ್ತಾರೆ ನೂರುಲ್ಲ.

ಹಸು ಸಾಕಣೆ ಬಡತನ ನೀಗಿದೆ: ‘ಸೀಮೆ ಹಸು ಸಾಕಲು ಆರಂಭಿಸುವ ಮೊದಲು ದೇಸಿ ಹಸುಗಳನ್ನು ಸಾಕಿ ಬೇಸಾಯ ಮಾಡುತ್ತಿದ್ದೆ. ಬೇಸಾಯದಿಂದ ಬಂದ ಹಣ ಯಾವುದಕ್ಕೂ ಸಾಲುತ್ತಿರಲಿಲ್ಲ. 1994ರಿಂದ ಸೀಮೆ ಹಸು ಸಾಕಿ ಡೇರಿಗೆ ಹಾಲು ಹಾಕಲು ಶುರುಮಾಡಿದ ಮೇಲೆ ಆರ್ಥಿಕ ಸ್ಥಿತಿ ಚೇತರಿಕೆಯಾಗತೊಡಗಿತು. ಹಾಲಿನಿಂದ ಬಂದ ಹಣವನ್ನು ಚೀಟಿಯಲ್ಲಿ ತೊಡಗಿಸಿ ಇಬ್ಬರು ಹೆಣ್ಣು ಮಕ್ಕಳ ಮದುವೆ ಮಾಡಿದ್ದೇನೆ’ ಎಂದು ಹೆಮ್ಮೆಯಿಂದ ಹೇಳುವ ನೂರುಲ್ಲಾ ಹೈನುಗಾರಿಕೆಗೆ ಹೆಂಡತಿ ಆಶಾ ಅವರ ಸಹಕಾರವೂ ಇದೆ ಎಂದು ಸ್ಮರಿಸುತ್ತಾರೆ.

ಒಂದೇ ಮುಸ್ಲಿಂ ಕುಟುಂಬ: ಮುದ್ದೇನಹಳ್ಳಿ ಗ್ರಾಮದಲ್ಲಿ ಇರುವುದು ಒಂದೇ ಮುಸ್ಲಿಂ ಕುಟುಂಬ. ಗ್ರಾಮದ ಜನತೆ ಇವರೂ ನಮ್ಮಲ್ಲಿ ಒಬ್ಬರು ಎಂಬ ಭಾವನೆ ಬೆಳೆಸಿಕೊಂಡಿದ್ದಾರೆ. ಸೌಹಾರ್ದವಾಗಿ ಬೆರೆಯುತ್ತಾರೆ. ಮದುವೆ ಶುಭ ಕಾರ್ಯಗಳಾದರೆ ಗ್ರಾಮಸ್ಥರಿಗೆ ಪ್ರತ್ಯೇಕ ಅಡುಗೆ ಮಾಡಿಸಿ ಕಾರ್ಯಕ್ರಮಕ್ಕೆ ಆಹ್ವಾನಿಸಿ ಆಧರಿಸುವ ಸೌಜನ್ಯ ಇನ್ನೂ ಜೀವಂತವಾಗಿ ಕಾಯ್ದಿರಿಸಿಕೊಂಡಿದ್ದಾರೆ.

ಏನೇ ಕಷ್ಟ ಬಂದರೂ ಬಿಡುವುದಿಲ್ಲ
ಹೈನುಗಾರಿಕೆಯಿಂದ ನಮ್ಮ ಬಾಳು ಬೆಳಕಾಗಿದೆ, ಏನೇ ಕಷ್ಟ ಬಂದರೂ ಹೈನುಗಾರಿಕೆ ಬಿಡುವುದಿಲ್ಲ. ಮೊದಲು ನಾಲ್ಕು ಹಸುಗಳಿದ್ದವು. ನಿರ್ವಹಣೆ ಕಷ್ಟವಾಗುತ್ತಿತ್ತು. ಎರಡು ಹಸು ಮಾರಿ ಎರಡು ಹಸು ಉಳಿಸಿಕೊಂಡಿದ್ದೇನೆ. ಈಗಲೂ ದಿನಕ್ಕೆ ಮೂವತ್ತು ಲೀಟರ್ ಹಾಲು ಹಾಕುತ್ತೇನೆ, ಮೇವನ್ನು ಜಮೀನಿನಲ್ಲಿಯೇ ಬೆಳೆದುಕೊಳ್ಳುತ್ತೇವೆ. ಪ್ರತೀ ವರ್ಷ ₹ 20 ಸಾವಿರ ಮೌಲ್ಯದ ಒಣಮೇವು ಖರೀದಿಸುತ್ತೇನೆ. ನಮಗೆ ಒಂದೊತ್ತಿನ ಊಟಕ್ಕೆ ತೊಂದರೆಯಾದರೂ ಹಸುಗಳಿಗೆ ಮೇವಿಗೆ ಬರವಿಲ್ಲದಂತೆ ನೋಡಿಕೊಳ್ಳುತ್ತೇನೆ. ಸೀಮೆ ಹಸುಗಳಿಂದ ಇಲ್ಲಿಯವರೆಗೂ ಲಕ್ಷಾಂತರ ರೂಪಾಯಿ ಗಳಿಸಿದ್ದೇನೆ. ಬರೀ ಬೇಸಾಯವನ್ನೇ ನೆಚ್ಚಿಕೊಂಡಿದ್ದರೆ ಜೀವನ ಕಷ್ಟವಾಗುತ್ತಿತ್ತು ಎನ್ನುತ್ತಾರೆ ನೂರುಲ್ಲಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.