ADVERTISEMENT

ದಾವಣಗೆರೆ ರೈಲು ಮಾರ್ಗ: ಶೀಘ್ರ ಚಾಲನೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2024, 6:17 IST
Last Updated 3 ಅಕ್ಟೋಬರ್ 2024, 6:17 IST
ರೈಲು ಹಳಿ
ರೈಲು ಹಳಿ   

ತುಮಕೂರು: ತುಮಕೂರು– ದಾವಣಗೆರೆ ನೂತನ ರೈಲು ಮಾರ್ಗದ ನಿರ್ಮಾಣ ಕಾಮಗಾರಿಗೆ ಮುಂದಿನ ತಿಂಗಳು ಚಾಲನೆ ನೀಡಲಾಗುವುದು ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಇಲ್ಲಿ ಬುಧವಾರ ತಿಳಿಸಿದರು.

ಪ್ರಗತಿ ಪರಿಶೀಲನಾ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ಜಿಲ್ಲೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದ್ದು, ಚಿತ್ರದುರ್ಗ, ದಾವಣಗೆರೆ ಭಾಗದಲ್ಲಿ 250ರಿಂದ 300 ಎಕರೆ ಭೂಸ್ವಾಧೀನ ಮಾಡಬೇಕಿದೆ. ಜಿಲ್ಲೆಯಲ್ಲಿ ಅಗತ್ಯ ಭೂಮಿಯನ್ನು ರೈಲ್ವೆ ಇಲಾಖೆಗೆ ಹಸ್ತಾಂತರಿಸಿದ್ದು, ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಇದು ಪೂರ್ಣಗೊಂಡ ತಕ್ಷಣ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಆಹ್ವಾನಿಸಿ ಜಿಲ್ಲೆಯಲ್ಲಿ ಕಾಮಗಾರಿ ಆರಂಭಕ್ಕೆ ಚಾಲನೆ ನೀಡಲಾಗುವುದು’ ಎಂದು ಹೇಳಿದರು.

ತುಮಕೂರು– ರಾಯದುರ್ಗ ರೈಲ್ವೆ ಯೋಜನೆಗೆ ಮತ್ತಷ್ಟು ವೇಗ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಚುರುಕಾಗಲಿದೆ. ಈ ಎರಡೂ ಯೋಜನೆಗಳನ್ನು 2027ರ ಆರಂಭದಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿದ್ದ ಯೋಜನೆಗಳಿಗೂ ಚಾಲನೆ ನೀಡಲಾಗಿದೆ ಎಂದು ವಿವರಿಸಿದರು.

ADVERTISEMENT

ಮೆಟ್ರೋ: ತುಮಕೂರು ವರೆಗೆ ಮೆಟ್ರೋ ರೈಲು ಮಾರ್ಗ ವಿಸ್ತರಣೆಗೆ ಸಚಿವ ಜಿ.ಪರಮೇಶ್ವರ ಮುಂದಾಗಿರುವುದು ಸ್ವಾಗತಾರ್ಹ. ಆದರೆ ಮೆಟ್ರೋ ಸಂಚಾರ ಜನಸಾಮಾನ್ಯರಿಗೆ ದುಬಾರಿಯಾಗಲಿದೆ. ಸಬರ್ಬನ್ ರೈಲು ಯೋಜನೆ ವಿಸ್ತರಣೆಯಾದರೆ ಕಡಿಮೆ ದರದಲ್ಲಿ ಜನರು ಸಂಚರಿಸಲು ಅವಕಾಶವಾಗಲಿದೆ. ಮೆಟ್ರೋಗಿಂತ ಪರ್ಯಾಯ ಮಾರ್ಗಗಳ ಬಗ್ಗೆ ಚಿಂತನೆ ನಡೆದಿದೆ ಎಂದು ತಿಳಿಸಿದರು.

ಕೆರೆಗೆ ಕೊಳಚೆ: ತುಮಕೂರು, ತಿಪಟೂರಿನ ಅಮಾನಿಕೆರೆಗೆ ಕೊಳಚೆ ಸೇರುತ್ತಿದ್ದು, ಇದರಿಂದ ನೀರು ಕಲುಷಿತವಾಗುತ್ತಿದೆ. ಅದನ್ನು ತಡೆಗಟ್ಟಲು ತಜ್ಞರ ಜತೆ ಚರ್ಚಿಸಿ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದೇನೆ. ಇದಕ್ಕೆ ಬೇಕಾದ ಹಣವನ್ನು ಕೇಂದ್ರದಿಂದ ಕೊಡಿಸಲಾಗುವುದು ಎಂದರು.

- ಬಳಕೆಯಾಗದ ಗಣಿ ಹಣ

ಗಣಿ ಬಾಧಿತ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಸುಮಾರು ₹2500 ಕೋಟಿ ಹಣ ಇದ್ದರೂ ಈವರೆಗೂ ಕೇವಲ ₹21 ಕೋಟಿ ಖರ್ಚು ಮಾಡಿರುವುದಕ್ಕೆ ಸಚಿವ ವಿ.ಸೋಮಣ್ಣ ಅಸಮಾಧಾನ ವ್ಯಕ್ತಪಡಿಸಿದರು. ನೋಡೆಲ್ ಅಧಿಕಾರಿಯನ್ನು ಸಭೆಯಲ್ಲೇ ತರಾಟೆಗೆ ತೆಗೆದುಕೊಂಡರು. ಇಷ್ಟೊಂದು ದೊಡ್ಡ ಮೊತ್ತದ ಹಣ ಇದ್ದರೂ ಬಳಕೆ ಮಾಡದಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು. ‘ಇನ್ನು ಮುಂದೆ ಕಣ್ಣಾಮುಚ್ಚಾಲೆ ಆಟ ನಡೆಯುವುದಿಲ್ಲ. ನಿಮ್ಮ ಉಡಾಫೆ ಮಾತುಗಳನ್ನು ಕೇಳಿಕೊಂಡು ಹೋಗಲು ಇಲ್ಲಿಗೆ ಬಂದಿಲ್ಲ. ಗಣಿ ಬಾಧಿತ ಪ್ರದೇಶದ ರಸ್ತೆಗಳು ಹಾಳಾಗಿದ್ದರೂ ಸರಿಪಡಿಸುವ ಕೆಲಸ ಮಾಡಿಲ್ಲ. ಒಂದೇ ರಸ್ತೆಗೆ ಮತ್ತೆಮತ್ತೆ ಹಣ ಹಾಕಿ ಬಿಲ್ ಮಾಡಿಕೊಳ್ಳಲು ಕುಳಿತಿದ್ದೀರಾ’ ಎಂದು ಪ್ರಶ್ನಿಸಿದರು. ‘ಈ ಹಣ ಬಳಕೆ ಮಾಡುವ ಬಗ್ಗೆ ಯೋಜನೆ ರೂಪಿಸಿಕೊಂಡು ದೆಹಲಿಗೆ ಬರಬೇಕು. ನನ್ನ ಒಪ್ಪಿಗೆ ಪಡೆದು ಮುಂದಿನ ಕಾರ್ಯಯೋಜನೆ ರೂಪಿಸಬೇಕು’ ಎಂದು ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.