ADVERTISEMENT

ಕ್ಷೇತ್ರ ಬಿಡುವಿರಾ?: ಮಾಜಿ ಶಾಸಕ ಬಿ.ಸುರೇಶ್‌ಗೌಡರಿಗೆ ಗೌರಿಶಂಕರ್ ಸವಾಲು

ಕ್ಷೇತ್ರಕ್ಕೆ ನೀರು ತಂದರೆ ಕ್ಷೇತ್ರ ಬಿಟ್ಟು ಹೋಗುತ್ತೇನೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2021, 3:15 IST
Last Updated 20 ಅಕ್ಟೋಬರ್ 2021, 3:15 IST
ಗೌರಿಶಂಕರ್
ಗೌರಿಶಂಕರ್   

ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಡಿ.ಸಿ.ಗೌರಿಶಂಕರ್ ಹಾಗೂ ಮಾಜಿ ಶಾಸಕ ಬಿ.ಸುರೇಶ್‌ಗೌಡ ನಡುವಿನ ವಾಕ್ಸಮರ ಮುಂದುವರೆದಿದ್ದು, ಸವಾಲು ಹಾಕುವ ಹಂತ ತಲುಪಿದೆ.

ಗೂಳೂರು– ಹೆಬ್ಬೂರು ಏತ ನೀರಾವರಿ ಯೋಜನೆಗೆ ಒಳಪಟ್ಟಿರುವ 49 ಕೆರೆಗಳನ್ನು ತುಂಬಿಸಲು 972 ಎಂಸಿಎಫ್‌ಟಿ ನೀರನ್ನು ಹೇಮಾವತಿ ಯೋಜನೆಯಲ್ಲಿ ಹಂಚಿಕೆ ಮಾಡಿಸಿಕೊಟ್ಟರೆ ಸುರೇಶ್‌ಗೌಡ ವಿರುದ್ಧಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಇದು ಸಾಧ್ಯವಾಗದಿದ್ದರೆ ಕ್ಷೇತ್ರ ಬಿಟ್ಟು ಹೋಗುತ್ತೀರಾ? ಎಂದು ಗೌರಿಶಂಕರ್ ಸವಾಲು ಹಾಕಿದ್ದಾರೆ.

‘ಉಪವಾಸ ಸತ್ಯಾಗ್ರಹ, ಇಲ್ಲವೆ ದೊಡ್ಡ ಮಟ್ಟದ ಹೋರಾಟವನ್ನಾದರೂ ಮಾಡಿ. ರಾಜ್ಯದಲ್ಲಿ ನಿಮ್ಮದೇ ಸರ್ಕಾರ ಅಧಿಕಾರದಲ್ಲಿ ಇದೆ. ನೀರು ಹಂಚಿಕೆ ಮಾಡಿಸಿದರೆ ಅಣ್ಣ ಎಂದು ಕರೆಯುತ್ತೇನೆ. ಕ್ಷೇತ್ರ ಬಿಟ್ಟು ಹೋಗುತ್ತೇನೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಪಂಥಾಹ್ವಾನ ನೀಡಿದರು.

ADVERTISEMENT

‘ಸುರೇಶ್‌ಗೌಡ ಶಾಸಕರಾಗಿದ್ದ ಸಮಯದಲ್ಲೇ ಯೋಜನೆ ಜಾರಿಯಾಗಿದೆ. ಇದರ ವ್ಯಾಪ್ತಿಯಲ್ಲಿ ಬರುವ 49 ಕೆರೆಗಳನ್ನು ಭರ್ತಿ ಮಾಡಲು 972 ಎಂಸಿಎಫ್‌ಟಿ ನೀರು ಬೇಕಾಗಿದೆ. ಆದರೆ ಕೇವಲ 243.37 ಎಂಸಿಎಫ್‌ಟಿ ನೀರನ್ನು ಮಾತ್ರ ಹಂಚಿಕೆ ಮಾಡಿಸಿದ್ದಾರೆ. ಇಷ್ಟು ನೀರಿನಲ್ಲಿ ಕೆರೆಗಳಿಗೆ ಹರಿಸಲು ಸಾಧ್ಯವೆ ಎಂಬುದು ಗೊತ್ತಿರಲಿಲ್ಲವೆ? ಯೋಜನೆ ಜಾರಿಯಾದ ನಂತರ ಹಿಂದಿನ ಶಾಸಕರ ಅವಧಿಯಲ್ಲಿ (2014–2018) 581 ಎಂಸಿಎಫ್‌ಟಿ ನೀರು ಹರಿಸಲಾಗಿದೆ. ನಾನು ಶಾಸಕನಾದ ನಂತರ ಈವರೆಗೆ 639 ಎಂಸಿಎಫ್‌ಟಿ ನೀರು ಹರಿದಿದೆ. ಯಾರ ಅವಧಿಯಲ್ಲಿ ಹೆಚ್ಚು ನೀರು ತುಂಬಿಸಲಾಗಿದೆ. ಯಾರು ಸುಳ್ಳು ಹೇಳುತ್ತಿದ್ದಾರೆ ಎಂಬುದನ್ನು ಕ್ಷೇತ್ರದ ಜನರೇ ನಿರ್ಧರಿಸಬೇಕು’ ಎಂದರು.

ಅಗತ್ಯ ಪ್ರಮಾಣದಲ್ಲಿ ನೀರು ಹಂಚಿಕೆಯಾಗದೆ 22 ಕೆರೆಗಳಿಗೆ ಮಾತ್ರ ಹರಿಸಲಾಗುತ್ತಿದೆ. ಉಳಿದ ಕೆರೆಗಳಿಗೆ ಪೈಪ್‌ಲೈನ್ ಕಾಮಗಾರಿ ಮಾಡಿದ್ದರೂ ನೀರು ಕೊಟ್ಟಿಲ್ಲ. ಹೆಬ್ಬೂರು ಕೆರೆ ನೀರು ಬಿಡಲು ಸಾಧ್ಯವೇ ಆಗಿಲ್ಲ. ಈ ಕಾರಣಕ್ಕೆ ₹52 ಕೋಟಿಯಲ್ಲಿ ಅನುಷ್ಠಾನಕ್ಕೆ ತಂದ ಯೋಜನೆ ಅವೈಜ್ಞಾನಿಕವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿರುವುದು. ಸಚಿವರು– ಮಾಜಿ ಶಾಸಕರ ನಡುವಿನ ತಿಕ್ಕಾಟ, ಆಂತರಿಕ ಸಮಸ್ಯೆ ಮುಂದಿಟ್ಟುಕೊಂಡು ಕ್ಷೇತ್ರದ ಜನತೆಗೆ ಅನ್ಯಾಯ ಮಾಡಬೇಡಿ ಎಂದು ಕೇಳಿಕೊಂಡರು.

ವೃಷಭಾವತಿ ನೀರು: ವೃಷಭಾವತಿ ಯೋಜನೆಯ ಮೊದಲ ಹಂತದಲ್ಲಿ ಕ್ಷೇತ್ರದ 25 ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ವಿಸ್ತೃತ ಯೋಜನಾ ವರದಿ ಸಿದ್ಧವಾಗಿದ್ದು, ಸಚಿವ ಸಂಪುಟಒಪ್ಪಿಗೆ ನೀಡಿದ ನಂತರ ಪ್ರಕ್ರಿಯೆಗಳು ಆರಂಭವಾಗಲಿವೆ. ಮೊದಲು 11
ಕೆರೆಗಳಿಗೆ ನೀರು ಕೊಡಲು ಉದ್ದೇಶಿಸಲಾಗಿತ್ತು. ಸಚಿವ ಮಾಧುಸ್ವಾಮಿ ಅವರಿಗೆ ಮನವಿ ಮಾಡಿದ ನಂತರ ಈ ಸಂಖ್ಯೆಯನ್ನು 25ಕ್ಕೆ ಹೆಚ್ಚಿಸಿಕೊಟ್ಟಿದ್ದಾರೆ ಎಂದು ವಿವರಿಸಿದರು.

‘ವೃಷಭಾವತಿ ಯೋಜನೆಯಲ್ಲಿ ನೀರು ಬಂದರೆ ಸುರೇಶ್‌ಗೌಡ ಅವರಿಗೆ ಹಿನ್ನಡೆಯಾಗುತ್ತದೆ. ನನಗೆ ಹೆಸರು ಬರುತ್ತೆ ಎಂಬ ಕಾರಣಕ್ಕೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ’ ಎಂದು ದೂರಿದರು.

ಹಗಲು ಕನಸು

ಆಪರೇಷನ್ ಕಮಲ ಮಾಡಿ ನನ್ನನ್ನು ಬಿಜೆಪಿಗೆ ಕರೆದುಕೊಂಡು ಬಂದಂತೆ ಸುರೇಶ್‌ಗೌಡ ಹಗಲು ಕನಸು ಕಾಣುತ್ತಿದ್ದಾರೆ ಎಂದು ಗೌರಿಶಂಕರ್ ವ್ಯಂಗ್ಯವಾಡಿದರು. ಕೊನೆಯವರೆಗೂ ಜೆಡಿಎಸ್ ಬಿಟ್ಟು ಹೋಗುವುದಿಲ್ಲ ಎಂದರು.

2.67 ಕೋಟಿ ವಿದ್ಯುತ್ ಬಿಲ್ ಬಾಕಿ

ಗೂಳೂರು ಏತ ನೀರಾವರಿ ಯೋಜನೆ ಜಾರಿಯಾದ ನಂತರ ಈವರೆಗೆ ನೀರು ಪಂಪ್ ಮಾಡಿದ ವಿದ್ಯುತ್ ಬಿಲ್ ₹2.67 ಕೋಟಿ ಬಾಕಿ ಉಳಿಸಿಕೊಳ್ಳಲಾಗಿದೆ. ವಿದ್ಯುತ್ ಬಿಲ್ ಪಾವತಿಸಲು ನೀರಾವರಿ ಇಲಾಖೆಗೆ ಸಾಧ್ಯವಾಗಿಲ್ಲ ಎಂದು ಶಾಸಕ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.