ತುಮಕೂರು: ‘ಸುಳ್ವಾಡಿ ದೇವಸ್ಥಾನದಲ್ಲಿ ಪ್ರಸಾದ ಸೇವಿಸಿ ಜನರು ಮೃತಪಟ್ಟಿರುವುದು ದೊಡ್ಡ ದುರಂತ. ಇದೇ ಪ್ರಕರಣ ಮುಂದಿಟ್ಟುಕೊಂಡು ದೇವಸ್ಥಾನಗಳಲ್ಲಿ ಪ್ರಸಾದ ವಿತರಣೆಗೆ ಸಂಬಂಧಪಟ್ಟಂತೆ ಕಾನೂನು ರೂಪಿಸಿ ನಿರ್ಬಂಧ ಮಾಡುವುದು ವ್ಯವಸ್ಥೆಯಲ್ಲಿ ಸಾಧ್ಯವಿಲ್ಲ’ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಹೇಳಿದರು.
ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ಕಾನೂನು ರೂಪಿಸಿ ನಿರ್ಬಂಧಿಸಲು ಹೊರಟರೆ ಅದರಿಂದ ಜನರಿಗೇ ತೊಂದರೆ ಆಗುತ್ತದೆ. ಕೆಲವು ಕಡೆ ದೇವಸ್ಥಾನದವರು ಪ್ರಸಾದ ವಿತರಿಸುತ್ತಾರೆ. ಮತ್ತೊಂದಿಷ್ಟು ಕಡೆ ಭಕ್ತರು ಪೂಜೆ ಮಾಡಿ ಪ್ರಸಾದ ಹಂಚುತ್ತಾರೆ. ಹೀಗೆ ನಾನಾ ರೀತಿಯ ಪದ್ಧತಿಯನ್ನು ಈ ವ್ಯವಸ್ಥೆಯಲ್ಲಿ ಅನುಸರಿಸಿಕೊಂಡು ಬರಲಾಗಿದೆ. ಹೀಗಾಗಿ ನಿರ್ಬಂಧ ವಿಧಿಸುವುದು ಕಷ್ಟ ಎನ್ನುವುದು ನನ್ನ ಅಭಿಪ್ರಾಯ’ ಎಂದರು.
‘ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಹರಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ನೀರು ಬಿಟ್ಟಿದ್ದಾರೆ. ಜಿಲ್ಲೆಯ ನೀರಿನ ಸಮಸ್ಯೆ ಹೋಗಲಾಡಿಸುವ ಪ್ರಯತ್ನ ನಡೆದಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.