ADVERTISEMENT

ಕುಸಿದ ಹುಣಸೆ ಗುಣಮಟ್ಟ; ಬೆಲೆ ಇಳಿಕೆ

​ಪ್ರಜಾವಾಣಿ ವಾರ್ತೆ
Published 1 ಮೇ 2024, 6:15 IST
Last Updated 1 ಮೇ 2024, 6:15 IST
ಹುಣಸೆ ಹಣ್ಣು
ಹುಣಸೆ ಹಣ್ಣು   

ತುಮಕೂರು: ಬೇಸಿಗೆ ಬಿಸಿಲಿನ ತಾಪ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇದರ ಪರಿಣಾಮ ಹುಣಸೆ ಹಣ್ಣಿನ ಮೇಲು ಬೀರಿದೆ. ಹಣ್ಣಿನ ಗುಣಮಟ್ಟ ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗಿದ್ದು, ಉತ್ತಮ ಬೆಲೆ ಸಿಗದಂತೆ ಮಾಡಿದೆ.

ಮಾರ್ಚ್ ತಿಂಗಳಿಗೆ ಹೋಲಿಸಿದರೆ ಹುಣಸೆ ಹಣ್ಣಿನ ಧಾರಣೆ ಸಾಕಷ್ಟು ಪ್ರಮಾಣದಲ್ಲಿ ಇಳಿಕೆ ಕಂಡಿದ್ದು, ತಡವಾಗಿ ಮಾರುಕಟ್ಟೆಗೆ ತಂದ ರೈತರಿಗೆ ಉತ್ತಮ ಬೆಲೆ ದೊರಕುತ್ತಿಲ್ಲ. ಬೆಲೆ ಕುಸಿತದಿಂದ ಮಾಡಿದ ಖರ್ಚು ವೆಚ್ಚವೂ ಸಿಗದಂತಾಗಿದೆ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ತುಮಕೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಪ್ರಸ್ತುತ ಗುಣಮಟ್ಟದ ಹುಣಸೆ ಹಣ್ಣಿಗೆ ಕ್ವಿಂಟಲ್‌ಗೆ ₹13 ಸಾವಿರದಿಂದ ₹20 ಸಾವಿರದ ವರೆಗೂ ಮಾರಾಟವಾಗುತ್ತಿದೆ. ಗುಣಮಟ್ಟ ಇಲ್ಲದ ಹಣ್ಣಿಗೆ ಕ್ವಿಂಟಲ್ ₹9 ಸಾವಿರದಿಂದ ₹11 ಸಾವಿರದ ವರೆಗೂ ಬೆಲೆ ಲಭ್ಯವಾಗುತ್ತಿದ್ದು, ಬೆಲೆ ಕುಸಿತದಿಂದ ರೈತರು ಕೈ ಸುಟ್ಟುಕೊಳ್ಳುವಂತಾಗಿದೆ.

ADVERTISEMENT

ಫೆಬ್ರುವರಿ ಹಾಗೂ ಮಾರ್ಚ್ ತಿಂಗಳ ಆರಂಭದಲ್ಲಿ ಗುಣಮಟ್ಟ ಇಲ್ಲದ ಹಣ್ಣು ಕ್ವಿಂಟಲ್ ₹10 ಸಾವಿರದಿಂದ ₹12 ಸಾವಿರ, ಸಾಧಾರಣ ಗುಣಮಟ್ಟದ ಹಣ್ಣು ₹15 ಸಾವಿರದಿಂದ ₹19 ಸಾವಿರ ಹಾಗೂ ಗುಣಮಟ್ಟದ ಹಣ್ಣು ₹20 ಸಾವಿರದಿಂದ ₹27 ಸಾವಿರದ ವರೆಗೂ ಮಾರಾಟವಾಗುತಿತ್ತು. ಕಳೆದ ಒಂದು ತಿಂಗಳಿಗೆ ಹೋಲಿಸಿದರೆ ಕ್ವಿಂಟಲ್‌ಗೆ ₹10 ಸಾವಿರದಿಂದ ₹12 ಸಾವಿರದ ವರೆಗೂ ಕಡಿಮೆಯಾಗಿದೆ. ಇದರಿಂದಾಗಿ ಹಣ್ಣು ಸಂಸ್ಕರಿಸಲು ಮಾಡಿದ ಕೂಲಿ ಹಣವೂ ಸಿಗುತ್ತಿಲ್ಲ ಎಂದು ರೈತರು ಹೇಳುತ್ತಿದ್ದಾರೆ.

ಫೆಬ್ರುವರಿ, ಮಾರ್ಚ್ ತಿಂಗಳಲ್ಲಿ ಉತ್ತಮ ಹವಾಮಾನದಿಂದಾಗಿ ಹುಣಸೆ ಹಣ್ಣಿನ ಗುಣಮಟ್ಟ ಚೆನ್ನಾಗಿತ್ತು. ಹಣ್ಣಿನ ಗುಣಮಟ್ಟ ಆಧರಿಸಿ ಉತ್ತಮ ಬೆಲೆಯೂ ಸಿಗುತಿತ್ತು. ಆದರೆ ಈಗ ಆವಕವೂ ತಗ್ಗಿದ್ದು, ಹಣ್ಣಿನ ಗುಣಮಟ್ಟ ಕಡಿಮೆಯಾಗಿರುವುದು ಬೆಲೆ ಇಳಿಕೆಗೆ ಪ್ರಮುಖ ಕಾರಣ ಎಂಬ ವಾದವನ್ನು ವರ್ತಕರು ಮುಂದಿಡುತ್ತಿದ್ದಾರೆ. ‘ಬಿಸಿಲಿನ ತಾಪಕ್ಕೆ ಹಣ್ಣಿನ ತಿರುಳಿನಲ್ಲಿ ಗುಣಮಟ್ಟ ಕಾಣುತ್ತಿಲ್ಲ. ಒಂದು ರೀತಿಯಲ್ಲಿ ಒಣಗಿದಂತೆ, ಇಲ್ಲವೆ ಬಾಡಿದಂತೆ ಭಾಸವಾಗುತ್ತದೆ. ಇಂತಹ ಹಣ್ಣು ಕೊಂಡುಕೊಳ್ಳಲು ಹೊರಗಡೆಯಿಂದ ಬಂದ ವರ್ತಕರು ಮುಂದಾಗುವುದಿಲ್ಲ. ಸಹಜವಾಗಿ ಬೆಲೆ ಇಳಿಕೆಯಾಗಿದೆ. ಆದರೆ ಗುಣಮಟ್ಟದ ಹಣ್ಣಿಗೆ ಈಗಲೂ ಬೇಡಿಕೆ ಇದೆ’ ಎಂದು ವರ್ತಕರು ಹೇಳುತ್ತಾರೆ.

ಖರೀದಿಗೆ ಹಿಂದೇಟು

ಎಪಿಎಂಸಿ ಮಾರುಕಟ್ಟೆಗೆ ಒಂದು ಸಾವಿರ ಚೀಲ ಹುಣಸೆ ಹಣ್ಣು ಬಂದರೆ ಅದರಲ್ಲಿ 30ರಿಂದ 50 ಚೀಲ ಗುಣಮಟ್ಟದ ಹಣ್ಣು ಕಾಣಿಸುವುದಿಲ್ಲ. ಹಾಗಾಗಿ ಕಡಿಮೆ ಬೆಲೆಗೆ ಹೊರಗಡೆಯಿಂದ ಬಂದ ವರ್ತಕರು ಖರೀದಿಸುತ್ತಿದ್ದಾರೆ. ಕಳೆದ ತಿಂಗಳು ಪ್ರತಿ ದಿನವೂ ಮಾರುಕಟ್ಟೆಗೆ 30 ಲಾರಿ ಲೋಡ್‌ಗಳ ವರೆಗೂ ಬರುತಿತ್ತು. ಈಗ ಹಣ್ಣು ಬರುವುದು ಕಡಿಮೆಯಾಗಿದ್ದು ಸರಾಸರಿ 15 ಲಾರಿ ಲೋಡ್ ಬರುತ್ತಿದೆ. ಹಣ್ಣಿನ ಗುಣಮಟ್ಟ ಕಡಿಮೆಯಾಗಿದೆ ಎಂದು ವರ್ತಕರೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.