ತುಮಕೂರು: ‘ಹೆಚ್ಚು ಶಬ್ದ ಮಾಡುವ ಹಾಗೂ 125 ಡೆಸಿಬಲ್‌ಗಿಂತ ಹೆಚ್ಚಿನ ಶಬ್ದ ಉಂಟುಮಾಡುವ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ’ ಎಂದು ಪ್ರತಿ ದೀಪಾವಳಿ ಹಬ್ಬದ ಸಮಯದಲ್ಲಿ ಜಿಲ್ಲಾ ಆಡಳಿತ ಒಂದು ಹೇಳಿಕೆ ನೀಡಿ ಕೈತೊಳೆದುಕೊಳ್ಳುತ್ತದೆ.
ಜಿಲ್ಲಾ ಆಡಳಿತದ ಆದೇಶದ ನಡುವೆಯೂ ನಿಷೇಧಿತ ಪಟಾಕಿಗಳನ್ನು ಸಿಡಿಸಲಾಗುತ್ತದೆ. ಆದರೆ ಯಾವುದೇ ಕ್ರಮ ಜರುಗಿಸುವುದಿಲ್ಲ. ಅಂತಹ ಪಟಾಕಿ ಮಾರಾಟ ಮಾಡಿದವರು, ಸಿಡಿಸುವ ಜನರ ವಿರುದ್ಧ ಕ್ರಮ ಕೈಗೊಂಡ ಉದಾಹರಣೆ ಇಲ್ಲ. ಜಿಲ್ಲಾ ಆಡಳಿತ ನೆಪಮಾತ್ರಕ್ಕೆ ಆದೇಶಿಸುವುದು ಹಲವು ವರ್ಷಗಳಿಂದ ಮುಂದುವರಿದುಕೊಂಡೇ ಬಂದಿದೆ. ಪಾಲನೆ ಮಾತ್ರ ಸಾಧ್ಯವಾಗಿಲ್ಲ.
‘ಪರಿಸರ ಸ್ನೇಹಿಯಾಗಿ ದೀಪಾವಳಿ ಹಬ್ಬ ಆಚರಿಸಬೇಕು. ಹೆಚ್ಚು ಶಬ್ದ ಮಾಡುವ ಪಟಾಕಿ ಸಿಡಿಸಬಾರದು. ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬೇಕು’ ಎಂದು ಈ ಬಾರಿಯೂ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಆದೇಶಿಸಿದ್ದಾರೆ.
ಹಬ್ಬದ ಸಂದರ್ಭದಲ್ಲಿ ರಾತ್ರಿ 10ರಿಂದ ಬೆಳಿಗ್ಗೆ 6 ಗಂಟೆ ವರೆಗೆ ಪಟಾಕಿಗಳನ್ನು ಸಿಡಿಸುವುದು, ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ನಿಶಬ್ದ ವಲಯಗಳೆಂದು ಘೋಷಿಸಿರುವ ಆಸ್ಪತ್ರೆ, ಶಾಲೆ, ಪ್ರಾರ್ಥನಾ ಮಂದಿರಗಳ ಸುತ್ತ-ಮುತ್ತ ಸಿಡಿಸಬಾರದು ಎಂದು ಸೂಚಿಸಿದ್ದಾರೆ.
ಹಸಿರು ಪಟಾಕಿ ಹಾಗೂ ಅವುಗಳ ಪ್ಯಾಕೆಟ್ ಮೇಲೆ ಹಸಿರು ಪಟಾಕಿಯ ಚಿಹ್ನೆ, ಕ್ಯೂಆರ್ ಕೋಡ್ ಇರುತ್ತದೆ. ಚಿಹ್ನೆ ಇಲ್ಲದಿದ್ದರೆ ಹಸಿರು ಪಟಾಕಿಯೆನಿಸುವುದಿಲ್ಲ. ಅಂತಹ ಪಟಾಕಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.