ಚಿಕ್ಕನಾಯಕನಹಳ್ಳಿ: ತೆಂಗಿನ ಉಪ ಉತ್ಪನ್ನಗಳ ಮೌಲ್ಯವರ್ಧನೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪಟ್ಟಣದ ಗ್ಯಾಸ್ ರವಿ, ಚಿಪ್ಪಿನ ಮೌಲ್ಯವರ್ಧನೆಯಲ್ಲಿ ತೊಡಗುವ ಮೂಲಕ ಗಮನ ಸೆಳೆದಿದ್ದಾರೆ. ಇವರು ಚಿಪ್ಪಿನಿಂದ ರೂಪಿಸುತ್ತಿರುವ ಉತ್ಪನ್ನಗಳು ರಾಜ್ಯದ ನಾನಾ ಮಾರುಕಟ್ಟೆಗಳಲ್ಲಿ ಸ್ಥಾನ ಪಡೆಯುತ್ತಿವೆ.
ಹಿಂದಿನಿಂದಲೂ ‘ಚಿಕ್ಕನಾಯಕನಹಳ್ಳಿ ಚಿಪ್ಪು’ ರಾಜ್ಯದಲ್ಲಿಯೇ ಪ್ರಸಿದ್ಧಿ. ಗುಣಮಟ್ಟದ ತೆಂಗನ್ನೇ ಪ್ರಮುಖವಾಗಿ ಬೆಳೆಯುವ ತಾಲ್ಲೂಕಿನಲ್ಲಿ ಚಿಪ್ಪು ಸಹ ಗುಣಮಟ್ಟದಿಂದ ಕೂಡಿದೆ.
ಹಲವರು ಈ ಚಿಪ್ಪನ್ನು ಬಳಸಿಕೊಂಡು ಕಲಾಕೃತಿಗಳನ್ನು ನಿರ್ಮಿಸಿದ್ದಾರೆ. ರವಿ ಅವರು ಕಚ್ಚಾವಸ್ತುವನ್ನು ಸಿದ್ಧಪಡಿಸಿ ಶಿವಮೊಗ್ಗಕ್ಕೆ ರವಾನಿಸುತ್ತಿದ್ದಾರೆ. ಅಲ್ಲಿಂದ ಈ ಚಿಪ್ಪುಗಳು ಪೂರ್ಣವಾಗಿ ಸಿದ್ಧವಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಗೂ ತಲುಪುತ್ತಿವೆ. ಆನ್‌ಲೈನ್ ಶಾಪಿಂಗ್ ತಾಣಗಳಲ್ಲಿಯೂ ಈ ಚಿಪ್ಪುಗಳು ಮಾರಾಟವಾಗುತ್ತಿವೆ.
ತೆಂಗಿನ ಚಿಪ್ಪಿನಿಂದ ತಯಾರಿಸುವ ಇದ್ದಿಲಿಗೂ ಉತ್ತಮ ಬೇಡಿಕೆ ಇದೆ. ಕೆಲವು ಪಂಚತಾರಾ ಹೋಟೆಲ್‌ಗಳಲ್ಲಿಯೂ ಇದನ್ನು ಬಳಸುತ್ತಾರೆ ಎಂದು ರವಿ ತಿಳಿಸಿದರು.
ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಪೇಪರ್ ಹಾಗೂ ತೆಂಗಿನ ಚಿಪ್ಪಿನಂತಹ ಪರಿಸರ ಸ್ನೇಹಿ ವಸ್ತುಗಳಿಗೆ ಕ್ರಮೇಣ ಬೇಡಿಕೆ ಹೆಚ್ಚುತ್ತಿದೆ. ಐಸ್ ಕ್ರಿಂ ಕಪ್, ಕಾಫಿ, ಟಿ ಸೇರಿದಂತೆ ವಿವಿಧ ಪಾನಿಯಗಳ ಸೇವನೆಗೆ ಈ ಕಪ್‌ಗಳನ್ನು ಬಳಸಲಾಗುತ್ತಿದೆ.
ಗುಣಮಟ್ಟದ ತೆಂಗಿನ ಕಾಯಿಯನ್ನು ಆಯ್ದುಕೊಂಡು ಚಿಪ್ಪಿಗೆ ಒಂದು ವಿನ್ಯಾಸ ನೀಡಲು ₹7 ವೆಚ್ಚವಾಗುತ್ತದೆ.
ಜಿಲ್ಲೆಯಲ್ಲಿ ತೆಂಗನ್ನು ಹೆಚ್ಚಾಗಿ ಬೆಳೆಯುವುದರಿಂದ ಈ ಭಾಗದಲ್ಲಿ ಗುಣಮಟ್ಟದ ಚಿಪ್ಪುಗಳನ್ನು ಆಯ್ದುಕೊಂಡು, ಯಂತ್ರವನ್ನು ಖರೀದಿಸಿ, ಉದ್ಯೋಗ ಆರಂಭಿಸಿದೆ. ಸಿದ್ಧಪಡಿಸಿದ ಚಿಪ್ಪಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಇದೆ ಎನ್ನುತ್ತಾರೆ ಅವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.