ADVERTISEMENT

ನೀಟ್‌ ಮರು ಪರೀಕ್ಷೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 22 ಜೂನ್ 2024, 4:44 IST
Last Updated 22 ಜೂನ್ 2024, 4:44 IST
ತುಮಕೂರಿನಲ್ಲಿ ಶುಕ್ರವಾರ ನಡೆದ ‘ನೀಟ್‌ ಪರೀಕ್ಷೆಯಲ್ಲಿ ಅಕ್ರಮ- ಮುಂದೇನು?’ ಕುರಿತು ಸಮಾಲೋಚನಾ ಸಭೆಯಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ್‌ ಹಾಲಪ್ಪ ಮಾತನಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ಮುಖಂಡ ಕೆಂಚಮಾರಯ್ಯ, ಎಐಡಿಎಸ್‌ಒ ಸಂಘಟನೆಯ ಸಿ.ಬಿ.ಲಕ್ಕಪ್ಪ, ಎಂ.ವಿ.ಕಲ್ಯಾಣಿ, ಮಂಜುಳ ಗೋನಾವರ ಹಾಜರಿದ್ದರು
ತುಮಕೂರಿನಲ್ಲಿ ಶುಕ್ರವಾರ ನಡೆದ ‘ನೀಟ್‌ ಪರೀಕ್ಷೆಯಲ್ಲಿ ಅಕ್ರಮ- ಮುಂದೇನು?’ ಕುರಿತು ಸಮಾಲೋಚನಾ ಸಭೆಯಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ್‌ ಹಾಲಪ್ಪ ಮಾತನಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ಮುಖಂಡ ಕೆಂಚಮಾರಯ್ಯ, ಎಐಡಿಎಸ್‌ಒ ಸಂಘಟನೆಯ ಸಿ.ಬಿ.ಲಕ್ಕಪ್ಪ, ಎಂ.ವಿ.ಕಲ್ಯಾಣಿ, ಮಂಜುಳ ಗೋನಾವರ ಹಾಜರಿದ್ದರು   

ತುಮಕೂರು: ‘ನೀಟ್ ಪರೀಕ್ಷೆ ಅಕ್ರಮ ಬಯಲಾಗಿದ್ದು, ಕೇಂದ್ರದ ಮಾನವ ಸಂಪನ್ಮೂಲ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಕೂಡಲೇ ಮರು ಪರೀಕ್ಷೆ ನಡೆಸಬೇಕು’ ಎಂದು ನಗರದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಒತ್ತಾಯಿಸಲಾಯಿತು.

ಎಐಡಿಎಸ್‍ಒ, ಎನ್‌ಎಸ್‌ಯುಐ ಹಾಗೂ ಇತರೆ ಸಂಘ–ಸಂಸ್ಥೆಗಳು ‘ನೀಟ್‌ ಪರೀಕ್ಷೆಯಲ್ಲಿ ಅಕ್ರಮ- ಮುಂದೇನು?’ ಎಂಬ ವಿಷಯ ಕುರಿತು ಹಮ್ಮಿಕೊಂಡಿದ್ದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಪ್ರಮುಖರು, ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.

ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ್‌ ಹಾಲಪ್ಪ, ‘ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಬಹುದೊಡ್ಡ ಹಗರಣ. ಪರೀಕ್ಷೆ ಎದುರಿಸಿದ್ದ ವಿದ್ಯಾರ್ಥಿಗಳು ಹಾಗೂ ಪೋಷಕರ ಪ್ರಶ್ನೆಗಳಿಗೆ ಸರ್ಕಾರ ಉತ್ತರಿಸಬೇಕು. ವೈದ್ಯಕೀಯ ಕೋರ್ಸ್‌ ಸೇರುವ ಕನಸು ಕಂಡ ವಿದ್ಯಾರ್ಥಿಗಳು ವರ್ಷಾನುಗಟ್ಟಲೆ ಕಷ್ಟಪಟ್ಟು ಅಭ್ಯಾಸ ನಡೆಸಿದ್ದರು. ಇದೀಗ ಪರೀಕ್ಷೆ ಅಕ್ರಮದಿಂದ ಅವರ ಬದುಕು ಅತಂತ್ರವಾಗಿದೆ’ ಎಂದರು.

ADVERTISEMENT

ಕೋಚಿಂಗ್‌ ಸೆಂಟರ್‌ಗೆ ಸೇರಿದ ಮಕ್ಕಳು ಉತ್ತಮ ಅಂಕಗಳಿಸಬೇಕು ಎಂಬ ಉದ್ದೇಶದಿಂದ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಲಾಗಿದೆ. ಇದು ಲಕ್ಷಾಂತರ ಮಕ್ಕಳ ಆತ್ಮವಿಶ್ವಾಸ ಕುಸಿಯುವಂತೆ ಮಾಡಿದೆ. ಈ ವಿಚಾರದಲ್ಲಿ ಪ್ರಧಾನಿ ಮೌನ ಮುರಿಯಬೇಕು. ‘ಪರೀಕ್ಷಾ ಪೇ ಚರ್ಚಾ’ ರೀತಿ, ನೀಟ್ ಅಕ್ರಮದ ಕುರಿತು ವಿದ್ಯಾರ್ಥಿಗಳ ಜತೆ ಚರ್ಚಿಸಬೇಕು. ನೀಟ್‌ ಅಕ್ರಮ ವಿರೋಧಿಸಿ ವಿದ್ಯಾರ್ಥಿ ಸಂಘಟನೆ ಜತೆ ಸೇರಿ ಪ್ರತಿಭಟಿಸಲಾಗುವುದು. ಆಂದೋಲನವಾಗಿ ಪರಿವರ್ತಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ‘ನೀಟ್ ಪರೀಕ್ಷೆಯ ಅಕ್ರಮ ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ. ಸರ್ಕಾರ ನಡೆಸುವ ಪರೀಕ್ಷೆಗಳಲ್ಲಿ ಅಕ್ರಮ ನಡೆದರು ಬೇರೆ ಯಾರನ್ನು ಕೇಳಬೇಕು?’ ಎಂದು ಪ್ರಶ್ನಿಸಿದರು.

ಮುಖಂಡರಾದ ಸಿ.ಯತಿರಾಜು, ಕೆಂಚಮಾರಯ್ಯ, ಸುಲ್ತಾನ್‌ ಮೊಹ್ಮದ್‌, ಪಂಡಿತ್‌ ಜವಾಹರ್‌, ಪಾವನ ಅಸ್ಪತ್ರೆಯ ಡಾ.ಪಾವನ, ಎಐಡಿಎಸ್‌ಒ ಸಂಘಟನೆಯ ಸಿ.ಬಿ.ಲಕ್ಕಪ್ಪ, ಎಂ.ವಿ.ಕಲ್ಯಾಣಿ, ಮಂಜುಳ ಗೋನಾವರ, ವಕೀಲ ಪೃಥ್ವಿ ಹಾಲಪ್ಪ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.