ADVERTISEMENT

ತುಮಕೂರು: ಬಿತ್ತನೆ ಬೀಜ ದರ ಕಡಿತಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಜೂನ್ 2024, 4:40 IST
Last Updated 16 ಜೂನ್ 2024, 4:40 IST
<div class="paragraphs"><p>ತುಮಕೂರು ಜಿಲ್ಲಾಧಿಕಾರಿ ಕಚೇರಿ ಬಳಿ ಶನಿವಾರ ಬಿತ್ತನೆ ಬೀಜ, ಕೃಷಿ ಪರಿಕರಗಳ ದರ ಕಡಿಮೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಸಹಾಯಕ ಮೋಹನ್‌ಕುಮಾರ್‌ ಅವರಿಗೆ ಮನವಿ ಸಲ್ಲಿಸಲಾಯಿತು.</p></div>

ತುಮಕೂರು ಜಿಲ್ಲಾಧಿಕಾರಿ ಕಚೇರಿ ಬಳಿ ಶನಿವಾರ ಬಿತ್ತನೆ ಬೀಜ, ಕೃಷಿ ಪರಿಕರಗಳ ದರ ಕಡಿಮೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘದಿಂದ ಜಿಲ್ಲಾಧಿಕಾರಿ ಕಚೇರಿ ಸಹಾಯಕ ಮೋಹನ್‌ಕುಮಾರ್‌ ಅವರಿಗೆ ಮನವಿ ಸಲ್ಲಿಸಲಾಯಿತು.

   

ತುಮಕೂರು: ಬಿತ್ತನೆ ಬೀಜ, ಕೃಷಿ ಪರಿಕರಗಳ ದರ ಕಡಿಮೆ ಮಾಡುವುದು, ಹೇಮಾವತಿ ಎಕ್ಸ್‌ಪ್ರೆಸ್‌ ಲಿಂಕ್‌ ಕೆನಾಲ್‌ ಕಾಮಗಾರಿ ರದ್ದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು.

‘ಎಕ್ಸ್‌ಪ್ರೆಸ್‌ ಲಿಂಕ್ ಕೆನಾಲ್‌ ಮುಖಾಂತರ ಕುಣಿಗಲ್‌ ಮತ್ತು ಮಾಗಡಿಗೆ ಹೇಮಾವತಿ ನೀರು ತೆಗೆದುಕೊಂಡು ಹೋಗುವುದನ್ನು ನಿಲ್ಲಿಸಬೇಕು. ಜೂನ್ 25ರಂದು ಹೇಮಾವತಿ ನೀರು ಹೋರಾಟ ಸಮಿತಿ ಕರೆದಿರುವ ತುಮಕೂರು ಬಂದ್‍ಗೆ ರೈತ ಸಂಘ ಬೆಂಬಲ ವ್ಯಕ್ತಪಡಿಸಲಿದೆ’ ಎಂದು ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಚಿಕ್ಕಬೋರೇಗೌಡ ತಿಳಿಸಿದರು.

ADVERTISEMENT

ಕೃಷಿ ಇಲಾಖೆಯಿಂದ ರೈತರಿಗೆ ರಿಯಾಯಿತಿ ದರದಲ್ಲಿ ದೊರೆಯುವ ಕೃಷಿ ಪರಿಕರಗಳ ಬೆಲೆ ಹೆಚ್ಚಳ ಮಾಡಲಾಗಿದೆ. ಮುಕ್ತ ಮಾರುಕಟ್ಟೆಯ ಬೆಲೆ ಮತ್ತು ಸರ್ಕಾರ ನೀಡುವ ಸಬ್ಸಿಡಿ ಬೆಲೆ ಎರಡು ಸಮವಾಗಿದೆ. ರಿಯಾಯಿತಿ ದರ ಕೇವಲ ಘೋಷಣೆಯಾಗಿ ಮಾತ್ರ ಉಳಿದಿದೆ ಎಂದರು.

ರೈತ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ರವೀಶ್, ‘ಬರ ಪರಿಹಾರದ ಹಣ, ಬೆಳೆ ವಿಮೆ ಸಮರ್ಪಕವಾಗಿ ವಿತರಣೆಯಾಗಿಲ್ಲ. ಸರ್ಕಾರದ ಸೌಲಭ್ಯದಿಂದ ವಂಚಿತರಾದವರಿಗೆ ಪರಿಹಾರ ಒದಗಿಸಬೇಕು. ಎತ್ತಿನಹೊಳೆ ಯೋಜನೆ ಕುಂಟುತ್ತಾ ಸಾಗಿದ್ದು, ಕಾಮಗಾರಿಗೆ ವೇಗ ನೀಡಬೇಕು. ಕೂಡಲೇ ಬಗರ್ ಹುಕುಂ ಸಮಿತಿ ರಚನೆ ಮಾಡಿ ಜಮೀನು ಇಲ್ಲದ ರೈತರಿಗೆ ಸಾಗುವಳಿ ಪತ್ರ ವಿತರಿಸಬೇಕು’ ಎಂದು ಆಗ್ರಹಿಸಿದರು.

ರೈತ ಸಂಘದ ಪದಾಧಿಕಾರಿಗಳಾದ ಟಿ.ಎಂ.ತಿಮ್ಮೇಗೌಡ, ರಂಗಸ್ವಾಮಯ್ಯ, ಡಿ.ಕೆ.ರಾಜು, ಕೃಷ್ಣಪ್ಪ, ಮಹೇಶ್, ಮೊಹನಕುಮಾರ್, ನಾರಾಯಣ, ನರಸಪ್ಪ, ನಾಗರಾಜು, ತಿಮ್ಮೇಗೌಡ, ಶ್ರೀನಿವಾಸ್, ಪ್ರಕಾಶ್, ರಾಮಚಂದ್ರಪ್ಪ, ಸಿದ್ದಗಂಗಯ್ಯ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.